ಗೌರಿಬಿದನೂರು: ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆ ಹಾಗ ಮಕ್ಕಳಲ್ಲಿ ಮೌಲ್ಯಾಧಾರಿತ ಕಲಿಕೆಯ ಉದ್ಧೇಶದಿಂದ ಜಿಲ್ಲಾ ಶಿಕ್ಷಣ ಕಾರ್ಯಪಡೆಯ ತಾಲೂಕಿನ ಪ್ರತಿಯೊಂದು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕಾ ಸಾಮರ್ಥ್ಯ ಹಾಗೂ ಪರೀಕ್ಷಾ ತಯಾರಿಯ ಬಗ್ಗೆ ಪರಿಶೀಲನೆ ಮಾಡಲಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಜಿ. ನಾಗೇಶ್ ಹೇಳಿದರು.
ಜಿಲ್ಲಾ ಶಿಕ್ಷಣ ಕಾರ್ಯಪಡೆ ಯೋಜನೆಯ ಅಡಿಯಲ್ಲಿ ಗೌರಿಬಿದನೂರು ಮತ್ತು ಗುಡಿಬಂಡೆ ತಾಲೂಕುಗಳ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳನ್ನು ಭೋದಿಸುವ ಶಿಕ್ಷಕರಿಗೆ ತರಗತಿಯಲ್ಲಿ ನಿಧಾನಗತಿಯ ಕಲಿಕೆಯ ವಿದ್ಯಾರ್ಥಿಗಳಿಗೆ ವಿಶೇಷ ಪಠ್ಯ ಬೋಧನೆ, ಅಭ್ಯಾಸ ಪುಸ್ತಕ ಮತ್ತು ಫಲಿತಾಂಶ ಉತ್ತಮಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಮ್ಮಿಕೊಂಡಿದ್ದ ಸ್ಪೂರ್ತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಪ್ರೌಢಶಿಕ್ಷಣ ಮಂಡಳಿಯವರು ಈಗಾಗಲೇ 2019-20 ನೇ ಸಾಲಿನ ಎಸ್’ಎಸ್’ಎಲ್’ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಪ್ರತಿಯೊಬ್ಬ ಶಿಕ್ಷಕರೂ ಬದ್ಧತೆಯಿಂದ ಕಾರ್ಯನಿರ್ವಹಿಸಿ ಉಳಿದ ಅಲ್ಪಾಅವಧಿಯಲ್ಲಿಯೇ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಬೇಕಾಗಿದೆ ಎಂದರು.
ಜಿಲ್ಲಾ ಶೈಕ್ಷಣಿಕ ಕಾರ್ಯಪಡೆಯ ಸಲಹೆಗಾರ ಪ್ರೊ.ಎಸ್. ನಾಗರಾಜಯ್ಯ ಮಾತನಾಡಿ, ಇಡೀ ಜಿಲ್ಲೆಯಲ್ಲಿಯೇ ಗೌರಿಬಿದನೂರು ತಾಲೂಕಿನಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಅತಿ ಹೆಚ್ಚಿನ ಎಸ್’ಎಸ್’ಎಲ್’ಸಿ ವಿದ್ಯಾರ್ಥಿಗಳಿದ್ದು, ಅವರೆಲ್ಲರ ಶೈಕ್ಷಣಿಕ ಸಾಮರ್ಥ್ಯವನ್ನು ಬಲಪಡಿಸುವ ಹಾಗೂ ಫಲಿತಾಂಶವನ್ನು ಅಭಿವೃದ್ಧಿ ಪಡಿಸುವ ಕಾರ್ಯ ಎಲ್ಲಾ ಶಿಕ್ಷಕರದ್ದಾಗಿದೆ. ಈ ನಿಟ್ಟಿನಲ್ಲಿ ಪಲ್ಲ ಶಾಲೆಯಲ್ಲಿನ ನಿಧಾನಗತಿಯ ವಿದ್ಯಾರ್ಥಿಗಳಿಗೆ ಪೂರಕವಾದ ಭೋದನೆ ಹಾಗೂ ಸೂಕ್ತ ತರಬೇತಿಯನ್ನು ನೀಡಿ ಅವರ ಫಲಿತಾಂಶದಲ್ಲಿ ಪ್ರಗತಿ ಕಾಣಬೇಕಾಗಿದೆ. ಇದರಿಂದ ಇಡೀ ತಾಲೂಕು ಹಾಗೂ ಜಿಲ್ಲೆಯ ಫಲಿತಾಂಶದಲ್ಲಿ ಗಣನೀಯವಾಗಿ ಅಭಿವೃದ್ಧಿ ಕಾಣಲು ಸಹಕಾರಿಯಾಗುತ್ತದೆ. ಈ ಸತ್ಕಾರ್ಯದಲ್ಲಿ ಪ್ರತಿಯೊಬ್ಬ ಶಿಕ್ಷಕರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಬಿಇಒ ಟಿ. ಕೃಷ್ಣಮೂರ್ತಿ, ಬಿಆರ್’ಸಿ ಸಂಯೋಜಕರಾದ ಎಚ್. ಜಗದೀಶ್, ಇಲಾಖೆಯ ಅಧಿಕಾರಿಗಳಾದ ಶಿವಲಿಂಗಯ್ಯ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post