ಶಿವಮೊಗ್ಗ: ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳೇನೂ ಕಡಿಮೆ ಇಲ್ಲ ಅಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ತರಳಬಾಳು ಜಗದ್ಗುರು ಶಾಖಾ ಮಠದ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.
ಭದ್ರಾವತಿ ತಾಲ್ಲೂಕು ಅರಹತೊಳಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಉಚಿತ ಎಂದು ಒಪ್ಪಿಕೊಳ್ಳದ ನಮ್ಮ ಜನ ಖಾಸಗಿ ಶಾಲೆಗಳಿಗೆ ಡೊನೇಷನ್ ಕೊಟ್ಟು ಮುಗಿಬೀಳುತ್ತಿರುವುದು ವಿಷಾಧನೀಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ನಿಜಕ್ಕೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಆದರೆ ಪೋಷಕರ ಮನಸ್ಸು ಬದಲಾವಣೆಯಾಗಬೇಕಾಗಿದೆ. ಇಲ್ಲಿ ಪಾಠ ಮಾಡುವ ಶಿಕ್ಷಕರು ಖಾಸಗಿ ಶಾಲೆ ಶಿಕ್ಷಕರಿಗಿಂತ ಹೆಚ್ಚಿನ ಅನುಭವ ಹಾಗೂ ಬುದ್ದಿವಂತರಾಗಿರುತ್ತಾರೆ ಎಂದರು.
ಶಿಕ್ಷಣ ವ್ಯಾಪಾರೀಕರಣವಾದ ನಂತರ ಖಾಸಗಿ ಶಾಲೆಗಳು ಹೆಚ್ಚಾದಂತೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಸರ್ಕಾರಗಳು ಈ ಬಗ್ಗೆ ಗಮನಹರಿಸಬೇಕಾಗಿದೆ. ಪೋಷಕರು, ಸಂಘಟನೆಗಳು, ಶಿಕ್ಷಕರು, ಜನಪ್ರತಿನಿಧಿಗಳು, ಸರ್ಕಾರ ಎಲ್ಲರೂ ಸೇರಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಒಂದುಶಾಲೆ ಶತಮಾನೋತ್ಸವ ಆಚರಿಸುತ್ತದೆ ಎಂದರೆ ಅದೊಂದು ಸಂಭ್ರಮವೇ ಸರಿ. ಈ ಶಾಲೆಯಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ಇಂದು ರಾಜ್ಯದ ಉದ್ದಗಲಕ್ಕೂ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಇದೊಂದು ಸಂಭ್ರಮ, ಸಡಗರ ಮತ್ತು ಇಂತಹ ಕಾರ್ಯಕ್ರಮಗಳು ಕೂಡ ಮಾದರಿಯಾಗಿರುತ್ತದೆ ಎಂದರು.
ಶಾಸಕ ಕೆ.ಬಿ.ಅಶೋಕ್ ನಾಯ್ಕ ಮಾತನಾಡಿ, ಕಲ್ಲಿಹಾಳ್ ಪ್ರೌಢಶಾಲೆಯನ್ನು ಪಬ್ಲಿಕ್ ಶಾಲೆಯಾಗಿಸಲು ಎಲ್ಲ ಪ್ರಯತ್ನ ಪಡುತ್ತೇನೆ. ಸರ್ಕಾರಿ ಶಾಲೆಗಳು ಉಳಿಯಬೇಕೆಂಬುದು ಸರ್ಕಾರದ ಉದ್ಧೇಶವೇ ಆಗಿದೆ ಎಂದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಎಸ್.ಕೆ.ಗಜೇಂದ್ರಸ್ವಾಮಿಯವರು ಬರೆದ ನನ್ನೂರು ನನ್ನ ಶಾಲೆ ಕಿರುಹೊತ್ತಿಗೆಯನ್ನು ಸಾಣೆಹಳ್ಳಿ ಶ್ರೀಗಳು ಬಿಡುಗಡೆಗೊಳಿಸಿದರು ಮತ್ತು ಹಳೆಯ ವಿದ್ಯಾರ್ಥಿ ಹಾಗೂ ಶಿಕ್ಷಕರುಗಳಿಗೆ ಸನ್ಮಾನಿಸಲಾಯಿತು. ಇಡೀ ಊರು ಈ ಹಬ್ಬದ ವಾತಾವರಣದಲ್ಲಿ ಮುಳುಗಿತ್ತು. ಸರ್ಕಾರಿ ಶಾಲೆಗಳ ಇಂತಹ ಕಾರ್ಯಕ್ರಮಗಳು ಪ್ರತಿ ಹಳ್ಳಿಯಲ್ಲಿ ನಡೆದರೆ ಒಳ್ಳೆಯದು ಎಂದು ಪೋಷಕರೇ ಮಾತನಾಡಿಕೊಳ್ಳುತ್ತಿದ್ದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಜಿ.ಪಂ.ಸದಸ್ಯೆ ರೇಖಾ ಉಮೇಶ್, ರೈತ ಮುಖಂಡ ಹೆಚ್.ಆರ್.ಬಸವರಾಜಪ್ಪ, ಡಿಸಿಸಿ ಬ್ಯಾಂಕ್ ಹೆಚ್.ಎಲ್.ಷಡಾಕ್ಷರಿ, ಚಂದ್ರಪ್ಪ, ರಾಜೇಶ್ ಪಟೇಲ್, ಪ್ರವೀಣ್, ರಂಗನಾಥ್, ಶಿವಕುಮಾರ್,ಚಂದ್ರಶೇಖರ್ ಸೇರಿದಂತೆ ಊರಿನ ಹಲವು ಮುಖಂಡರು, ಹಿರಿಯರು ಭಾಗವಹಿಸಿದ್ದರು.
-ಎಸ್.ಕೆ.ಗಜೇಂದ್ರಸ್ವಾಮಿ
Discussion about this post