ಕಲ್ಪ ಮೀಡಿಯಾ ಹೌಸ್ | ಹಾದಿಗಲ್ಲು |
ಹಾದಿಗಲ್ಲು ಗ್ರಾಮದಲ್ಲಿ ಗಣಪತಿ ದರ್ಶನ ಪಡೆಯಲು ಸಾಗರದಿಂದ ಬಸ್ ಹತ್ತಿ ತೀರ್ಥಹಳ್ಳಿ ಮಾರ್ಗವಾಗಿ ಸಾಗುತ್ತಾ ಸಿಗುವ ಹಾದಿಗಲ್ಲು ಬಸ್ ನಿಲ್ದಾಣದಲ್ಲಿ ಇಳಿದು ಮೂತ್ರ ವಿಸರ್ಜನೆ ಮಾಡಲು ಬಸ್ ನಿಲ್ದಾಣದಲ್ಲಿ ಜಾಗ ಹುಡುಕಿದರೆ 2006 ರಲ್ಲಿ ನಿರ್ಮಾಣವಾದ ಭವ್ಯವಾದ ಶೌಚಾಲಯ ನನ್ನ ಕಣ್ಣಿಗೆ ಬಿದ್ದಿತ್ತು.
ಇದು ಅಂತಿಂತ ಶೌಚಾಲಯವಲ್ಲ. ನಿರ್ವಹಣೆ ಎಂಬುದಿಲ್ಲ, ಸ್ವಚ್ಛತೆ ಎಂಬುದು ಇಲ್ಲಿ ಮರೀಚಿಕೆಯಾಗಿದೆ. ಹೆಸರಿಗೆ ಇಲ್ಲಿ ಶೌಚಾಲಯ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ.
ಮಲೆನಾಡಿನ ಮಡಿಯಲ್ಲಿ ಪ್ರಕೃತಿಯ ಸೊಬಗನ್ನು ಜನರು ಹಾಳುಗೆಡವದೇ ಇರಲಿ, ಸ್ವಚ್ಛತೆಯಿರಲಿ ಎಂಬ ಕಾರಣಕ್ಕೆ ಬಸ್ ನಿಲ್ದಾಣದ ಬಳಿಯಲ್ಲಿ ಶೌಚಾಲಯವೊಂದನ್ನು 2005-06ನೆಯ ವಾರ್ಷಿಕ ಅನುದಾನದಲ್ಲಿ ನಿರ್ಮಿಸಲಾಗಿದೆ. ಆದರೆ, ಇಲ್ಲಿ ನಿರ್ವಹಣೆ ಎಂದರೆ ಏನು ಎಂದು ಕೇಳಬೇಕಿದೆ.
ಇಲ್ಲಿನ ಪ್ರಖ್ಯಾತ ದೇವಾಲಯಗಳಿಗೆ ಹಲವು ಊರುಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡುವವರು ಪ್ರಕೃತಿಯ ಕರೆಗೆ ತೆರಳಬೇಕು ಎಂದರೆ ಪ್ರಕೃತಿಯ ನಡುವೆಯೇ ಹೋಗಬೇಕೇ ವಿನಾ ಇಲ್ಲಿನ ಶೌಚಾಲಯಕ್ಕೆ ತೆರಳಿದರೆ ನರಕ ದರ್ಶನ.
ಈ ವಿಷಯವನ್ನು ಕೋಣಂದೂರು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಗಮನಿಸಿ, ಗಬ್ಬು ನಾರುತ್ತಾ ಬಳಕೆಗೆ ಬಾರದೇ ಇರುವ ಈ ಶೌಚಾಲಯವನ್ನು ಸರಿಪಡಿಸಿ, ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕಿದೆ. ಜನರ ತಮ್ಮ ಬಹಿರ್ದೆಸೆಗೆ ಶೌಚಾಲಯವನ್ನೂ ಬಳಸಿ, ಮಲೆನಾಡಿನ ಸುಂದರ ಪರಿಸರ ಹಾಳಾಗದೇ ಇರುವಂತಾಗಲು ಅನುವುಮಾಡಿಕೊಡಬೇಕಿದೆ.
ಚಿತ್ರ ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ, ಪರಿಸರ ಪ್ರೇಮಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post