ಹಾಸನ: ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ನಗರದ ವಿವಿದೆಡೆಗೆ ಧೀಡಿರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ಜಿಲ್ಲಾ ಆಸ್ಪತ್ರೆ ಎದುರಿರುವ ಇಂದಿರಾ ಕ್ಯಾಂಟನ್‌ಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಧೀಡಿರ್ ಭೇಟಿ ನೀಡಿ ಕ್ಯಾಂಟೀನ್ ವ್ಯವಸ್ಥೆ, ಆಹಾರ ಪೂರೈಕೆ , ಸ್ವಚ್ಚತೆ ಹಾಗೂ ಆಹಾರ ಗುಣಮಟ್ಟವನ್ನು ಪರಿಶೀಲಿಸಿದರು.
ಬೆಳಗಿನ ಉಪಹಾರವಾದ ಇಡ್ಲಿ ಮತ್ತು ಪಲಾವ್‌ನ್ನು ಸವಿದು, ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು. ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿ ಅವರು ಸಾರ್ವಜನಿಕರಿಂದ ಅಭಿಪ್ರಾಯ ಪಡೆದುಕೊಂಡು ಯಾವುದೇ ಲೋಪ ಇದ್ದಲ್ಲಿ ತಿಳಿಸುವಂತೆ ಹೇಳಿದರು.
ಇಂದಿರಾ ಕ್ಯಾಂಟಿನ್’ನಲ್ಲಿನ ಸಿಬ್ಬಂದಿಗಳಿಗೆ ಸ್ವಚ್ಚತೆಯನ್ನು ಕಾಪಾಡುವಂತೆ, ಆಹಾರವನ್ನು ರುಚಿ ಮತ್ತು ಶುಚಿಯಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವಿತರಿಸಲು ಸೂಚಿಸಿದರು. ಅಲ್ಲದೇ ಆರೋಗ್ಯ ನಿರೀಕ್ಷಕರಿಗೆ ಆಗಿಂದಾಗ್ಗೆ ಕ್ಯಾಂಟೀನ್‌ಗೆ ಬೇಟಿ ನೀಡಿ ಸ್ವಚ್ಚತೆ ಪರಿಶೀಲಿಸುವಂತೆ ನಿರ್ದೇಶಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಕೆ. ಶಂಕರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೃಷ್ಣ ಮೂರ್ತಿ, ತಹಸೀಲ್ದಾರ್ ಶ್ರೀನಿವಾಸಯ್ಯ ಮತ್ತಿತರರು ಹಾಜರಿದ್ದರು.
ಹಣ್ಣಿನ ಮಾರುಕಟ್ಟೆ ಭೇಟಿ
ನಗರ ವ್ಯಾಪ್ತಿಯಲ್ಲಿ ಬರುವಂತಹ ಹಣ್ಣಿನ ಮತ್ತು ಹೂವಿನ ಮಾರುಕಟ್ಟೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದ್ದ ರಸ್ತೆ ಮತ್ತು ಚರಂಡಿಯ ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸಿದರು.
ಮಾರುಕಟ್ಟೆಯ ಸುತ್ತಾ ಮುತ್ತಾ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ರಸ್ತೆಯನ್ನು ಪರಿಶೀಲಿಸಿದರು ಈ ಸಂದರ್ಭ ಜಿಲ್ಲಾಧಿಕಾರಿ ಅವರು ನಗರಸಭೆಯ ತ್ಯಾಜ್ಯ ನಿರ್ವಹಣೆ ಪ್ರದೇಶಕ್ಕೂ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಮಾರುಕಟ್ಟೆಯಲ್ಲಿನ ಸ್ವಚ್ಚತೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಕಿರಿಯ ಅಭಿಯಂತರರಾದ ಪ್ರವೀಣ್ ಮಾಹಿತಿ ನೀಡಿ, ಸದರಿ ಕಾಮಗಾರಿಯು ಐ.ಡಿ.ಎಸ್.ಎಂ.ಟಿ. ಯೋಜನೆಯಡಿಯಲ್ಲಿ ಮಂಜೂರಾತಿ ಪಡೆದಿದ್ದು, ಸುಮಾರು 102 ಮಳಿಗೆಗಳಿಗೆ ರಸ್ತೆ, ಚರಂಡಿಯನ್ನು ಅಭಿವೃದ್ದಿಪಡಿಸುತ್ತಿರುವುದಾಗಿ ವಿವರಿಸಿದರು.
ಕಾಮಗಾರಿಯಲ್ಲಿ ಗುಣಮಟ್ಟಣವನ್ನು ಕಾಯ್ದುಕೊಂಡು ಹಾಗೂ ಯಾವುದೇ ಲೋಪವಾಗದಂತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಅಗಿಲೆಯಲ್ಲಿರುವ ನೆಲಭರ್ತಿ ಜಾಗವನ್ನು ಪರಿಶೀಲಿಸಿ ಮತ್ತು ಕೂಡಲೇ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿಮಾಡಲು ಕ್ರಮ ಕೈಗೊಳ್ಳಲು ಅವರು ಸೂಚಿಸಿದರು.
Discussion about this post