ಕಲ್ಪ ಮೀಡಿಯಾ ಹೌಸ್ | ಹಾಸನ |
ಐತಿಹಾಸಿಕ ಹಿನ್ನೆಲೆಯುಳ್ಳ ಪ್ರವಾಸಿ ತಾಣಗಳನ್ನು ಹೊಂದಿರುವ ಹಾಸನ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶಗಳು ಇದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ, ಹಾಸನ ಹೋಟೆಲ್, ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರ ಸಂಘ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ – 2021 ರ ಅಂಗವಾಗಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಹಾಸನ ಜಿಲ್ಲೆಯಲ್ಲಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳ , ಸಕಲೇಶಪುರದ ಭಾಗದ ಪಶ್ಚಿಮಘಟ್ಟ ಸೇರಿದಂತೆ ಸಾಕಷ್ಟು ಪ್ರವಾಸಿ ತಾಣಗಳು ಜಗತ್ಪ್ರಸಿದ್ಧಿ ಹೊಂದಿದ್ದು; ಜಿಲ್ಲೆಗೆ ಆಗಮಿಸಲು ಪ್ರವಾಸಿಗರು ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದರು.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ 4.36 ಕೋಟಿ ಅನುದಾನದಲ್ಲಿ 44 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಪ್ರಗತಿಯಲ್ಲಿದೆ. ಮುಂದಿನ ಬಜೆಟ್ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ಅನುದಾನ ಹಾಗೂ ಕಾರ್ಯಕ್ರಮ ರೂಪಿಸುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಹಿನ್ನೆಲೆಯಲ್ಲಿ ಈಗಾಗಲೇ ವಿಮಾನ ನಿಲ್ದಾಣ ಕಾಮಗಾರಿಗೆ ಯಡಿಯೂರಪ್ಪ ಅವರ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಂಜೂರಾತಿ ನೀಡಲಾಗಿದ್ದು ಇದೇ ತಿಂಗಳು ಗುದ್ದಲಿ ಪೂಜೆ ನಡೆಯಲಿದೆ. ಕಾಮಗಾರಿ ಸಂಬಂಧ ಟೆಂಡರ್ ಪ್ರಕ್ರಿಯೆ ಸಹ ಮುಗಿದಿದೆ ಎಂದು ಹೇಳಿದರು .
ಶಾಸಕ ಪ್ರೀತಮ್ ಜೆ ಗೌಡ ಅವರು ಮಾತನಾಡಿ ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಒಳ್ಳೆಯ ಬೆಳವಣಿಗೆಯಾಗಿದೆ. ಹೊಯ್ಸಳರ ಕೊಡುಗೆಯಾದ ಬೇಲೂರು-ಹಳೇಬೀಡು ಮತ್ತು ಜೈನರ ಪವಿತ್ರ ಸ್ಥಳ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿ ವಿಶ್ವ ಪ್ರಸಿದ್ಧಿ ಪಡೆದಿದ್ದು ಇಲ್ಲಿಯ ಪ್ರವಾಸದೊಂದಿಗೆ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ಸ್ಥಳಗಳು ಇದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಜಿಲ್ಲೆಯ ಇತರೆ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಡುವ ಕೆಲಸ ಹೋಂಸ್ಟೇ ಹಾಗೂ ರೆಸಾರ್ಟ್ಗಳಲ್ಲಿ ಆಗಬೇಕಿದೆ ಹಾಗೂ ಬೆಂಗಳೂರಿನಲ್ಲಿ 44 ಕ್ಕೂ ಹೆಚ್ಚು ಐಟಿ ಕಂಪನಿಗಳು ಇದ್ದು ಸಾವಿರಾರು ಮಂದಿ ಉದ್ಯೋಗಿಗಳನ್ನು ಹಾಸನ ಜಿಲ್ಲೆಗೆ ಪ್ರವಾಸಕ್ಕೆ ಸೆಳೆಯುವ ನಿಟ್ಟಿನಲ್ಲಿ ಸಂಘವು ಕಾರ್ಯಪ್ರವೃತ್ತವಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ, ದೇಶದ ಬೆಳವಣಿಗೆ ಹಾಗೂ ಜಿಡಿಪಿ ದರ ಹೆಚ್ಚಾಗಲು ಪ್ರವಾಸೋದ್ಯಮವು ಕೂಡ ಕಾರಣವಾಗಿದೆ. ಜಿಡಿಪಿ ದರದ ಶೇಕಡಾ 9 ರಿಂದ 10ರಷ್ಟು ಪ್ರವಾಸೋದ್ಯಮದಿಂದ ಬರುತ್ತಿದ್ದು ಉದ್ಯೋಗ ಸೃಷ್ಟಿಯ ಶೇ.8ರಷ್ಟು ಪ್ರವಾಸೋದ್ಯಮ ಇಲಾಖೆಯಿಂದ ಆಗುತ್ತಿದೆ. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶಗಳಿದ್ದು ಈ ನಿಟ್ಟಿನಲ್ಲಿ ಸರ್ಕಾರವು ಸಹ ನೆರವು ನೀಡುತ್ತಿದೆ. ಸಕಲೇಶಪುರ ಭಾಗದ ಪಶ್ಚಿಮಘಟ್ಟದಲ್ಲಿ ಚಾರಣಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ 2-3 ಸ್ಥಳಗಳನ್ನು ಗುರುತಿಸಲಾಗಿದೆ. ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಅವಕಾಶ ಮಾಡಿಕೊಡಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು .
ರೆಸಾರ್ಟ್ ಗಳ ಮಾಲೀಕರು ಹಾಗೂ ಸಿಬ್ಬಂದಿ ಗಳಿಗೆ ಪ್ರವಾಸೋದ್ಯಮ ಕುರಿತು ತರಬೇತಿ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಹೇಳಿದರು.
ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಅವರು ಮಾತನಾಡಿ ಚಿಕ್ಕಮಗಳೂರು ಪ್ರವಾಸೋದ್ಯಮ ಸ್ಥಳಗಳು ಸ್ವಿಟ್ಜರ್ಲೆಂಡ್ ಮೀರಿಸುವಂತೆ ಇದ್ದು ಇದಕ್ಕೆ ಹೊಂದುಕೊಂಡಂತೆ ಇರುವ ಹಾಸನ ಜಿಲ್ಲೆಯಲ್ಲಿಯೂ ಸಹ ಪ್ರವಾಸೋದ್ಯಮಕ್ಕೆ ಹೆಚ್ಚು ಅನುಕೂಲವಾಗುವ ನಿಟ್ಟಿನಲ್ಲಿ ಸಕಲೇಶಪುರ -ಆಲೂರು ಹಾಗೂ ಬೇಲೂರಿನಲ್ಲಿ ಹೋಂಸ್ಟೇ ಹಾಗೂ ರೆಸಾರ್ಟ್ ಗಳನ್ನು ಮಾಡಲಾಗಿದೆ ಎಂದರು.
ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಚಾರಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮೂಖನ ಮನೆ ಜಲಪಾತ ಸೇರಿದಂತೆ ಇತರೆ ಕಿರು ಜಲಪಾತ ಸ್ಥಳಗಳಿಗೆ ಸೂಕ್ತ ರಸ್ತೆ ವ್ಯವಸ್ಥೆ ಇರುವುದಿಲ್ಲ , ಮಳೆಗಾಲದ ಮೂರು ತಿಂಗಳು ಜಲಪಾತ ವೀಕ್ಷಣೆಗೆ ತೂಗು ಸೇತುವೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಚಿವರು ಗಮನ ಹರಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು. ರೆಸಾರ್ಟ್ ಹೋಂಸ್ಟೇ ಮಾಲೀಕರು ಸಿಬ್ಬಂದಿಗೆ ತರಬೇತಿ ಕಾರ್ಯಗಾರವನ್ನು ಅವಶ್ಯಕವಾಗಿದೆ ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ನೆರವು ನೀಡುವಂತೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಹೊರತಂದಿರುವ ಕಿರುಹೊತ್ತಿಗೆಯನ್ನು ಸಚಿವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಡಿಎಫ್ಒ ಬಸವರಾಜ್, ನಗರಸಭೆ ಅಧ್ಯಕ್ಷ ಮೋಹನ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಸಂಜಯ್ ಹಾಗೂ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post