ಕಲ್ಪ ಮೀಡಿಯಾ ಹೌಸ್
ಹಾವೇರಿ: ಕೋವಿಡ್ ಮಹಾಮಾರಿ ಕುರಿತು ಜನರಿಗೆ ಮುನ್ನೆಚ್ಚರಿಕೆ ನೀಡುವುದು ನಮ್ಮ ಉದ್ದೇಶವಾಗಿರಬೇಕೇ ಹೊರತು ಕೋವಿಡ್ ಹೆಸರಿನಲ್ಲಿ ಹೆದರಿಸುವುದು, ದಂಡ ಹಾಕುತ್ತೇವೆ ಎಂದು ಹೇಳುವುದು ಅಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಿರೇಕೆರೂರಿನ ತಹಶೀಲ್ದಾರರ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್ ಪರಿಶೀಲನಾ ಸಭೆ ನಡೆಸಿದರು.

ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಅನಾವಶ್ಯಕ ಸಭೆ ಸಮಾರಂಭ ಜನ ಸೇರುವುದು ಸೇರಿದಂತೆ ಕೋವಿಡ್ ಹರಡಲು ಸಹಕರಿಸುವುದೆಲ್ಲವನ್ನು ತಡೆಯಬೇಕು. ಈ ನಿಟ್ಟಿನಲ್ಲಿ ರಟ್ಟಿಹಳ್ಳಿ ಮತ್ತು ಹಿರೆಕೆರೂರು ಎರಡು ತಾಲೂಕುಗಳಲ್ಲಿ ಅಧಿಕಾರಿಗಳೊಬ್ಬರ ನೇತೃತ್ವದಲ್ಲಿ ಸ್ಕ್ವಾರ್ಡ್ ರಚಿಸಬೇಕು. ಸಭೆ ಸಮಾರಂಭ ನಡೆಯುವ ಸ್ಥಳಗಳಲ್ಲಿ ಸೂಚನೆ ನೀಡಬೇಕು ಎಂದರು.
ಆಶಾಕಾರ್ಯಕರ್ತೆಯರು ಮನೆಮನೆಗೆ ಜಾಗೃತಿ ಮೂಡಿಸಬೇಕು. ಪೊಲೀಸ್, ಆರೋಗ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲೂಕು ಆಡಳಿತ ವ್ಯವಸ್ಥೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.ಕಡ್ಡಾಯವಾಗಿ ಜನರು ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಮತಕ್ಷೇತ್ರದ ಜನರಲ್ಲಿ ಕೋವಿಡ್ ಭಯಕ್ಕಿಂತ ಸುರಕ್ಷತೆ ಸ್ವಕಾಳಜಿ ಸ್ವಯಂಜಾಗೃತಿ ಮೂಡುವಂತೆ ಮಾಡಬೇಕು ಎಂದು ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಬಿ.ಸಿ.ಪಾಟೀಲ್ ತಾಲೂಕು ಆಸ್ಪತ್ರೆಯಲ್ಲಿರುವ ಕೊರೊನಾ ಚಿಕಿತ್ಸೆ, ಕೋವಿಡ್ ಲಸಿಕೆ ಸಂಬಂಧ ಸೌಲಭ್ಯಗಳ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post