ಭದ್ರಾವತಿ: ಪ್ರಸಕ್ತ ವರ್ಷದ ಮಳೆಗಾಲ ಮುಕ್ಕಾಲು ಭಾಗ ಮುಗಿದಿದೆ. ಆದರೆ, ಕಳೆದ ಮೂರು ನಾಲ್ಕು ದಿನಗಳಿಂದ ನಗರ ಭಾಗದಲ್ಲಿ ಸುರಿಯುತ್ತಿರುವ ವರುಣ ದೇವ ಇಂದು ಮಧ್ಯಾಹ್ನ ಭಾರೀ ಪ್ರಮಾಣದಲ್ಲಿ ಅಬ್ಬರಿಸಿದೆ.
ಮಧ್ಯಾಹ್ನ ಸುಮಾರು 3.20ರ ಏಕಾಏಕಿ ಸಿಡಿಲಿನೊಂದಿಗೆ ತನ್ನ ಲೀಲೆ ತೋರಲು ಆರಂಭಿಸಿದ ವರುಣ, 3.30ರಿಂದು ಸುಮಾರು 13 ನಿಮಿಷಗಳ ಕಾಲ ಆರ್ಭಟಿಸಿದ. ಮಳೆಯ ಆರ್ಭಟದೊಂದಿಗೆ ಭಾರೀ ಪ್ರಮಾಣದಲ್ಲಿ ಗಾಳಿಯೂ ಸೇರಿದ್ದರಿಂದ ಅಬ್ಬರ ಹೆಚ್ಚಾಗಿತ್ತು. ಮಳೆಯ ಆರ್ಭಟಕ್ಕೆ ಇನ್ನೇನು ಆಕಾಶ ಬಿರಿಯಿತು ಎಂಬಂತೆ ಭಾಸವಾಗುತ್ತಿತ್ತು.
ಮಳೆಯ ಅಬ್ಬರ ಎಷ್ಟಿತ್ತೆಂದರೆ ಸುಮಾರು 10 ನಿಮಿಷಗಳಷ್ಟು ಕಾಲ ಸುಮಾರು 15 ಮೀಟರ್ ದೂರದ ಮನೆಗಳೂ ಸಹ ಕಾಣದಂತಾಗಿತ್ತು. ಗಾಳಿಯ ಹೊಡೆತವೂ ಹೆಚ್ಚಾಗಿದ್ದ ಕಾರಣ, ಬಹಳಷ್ಟು ಮನೆ ಹಾಗೂ ಮಳಿಗೆಗಳಿಗೆ ನೀರು ಹೊಡೆದಿದೆ. ಕೇವಲ 25 ನಿಮಿಷದ ಮಳೆಗೆ ಮೋರಿಗಳು ಅರ್ಧಕ್ಕೂ ಹೆಚ್ಚು ಭಾಗ ತುಂಬಿ ಹರಿಯುತ್ತಿದ್ದವು ಎಂದರೆ ಮಳೆಯ ಪ್ರಮಾಣ ಊಹಿಸಿ.
ಇನ್ನು, ಏಕಾಏಕಿ ಆರಂಭವಾದ ಮಳೆ, ಅಷ್ಟೇ ವೇಗವಾಗಿ ನಿಂತಿದ್ದೂ ಸಹ ಒಂದು ಆಶ್ಚರ್ಯ. ಸಾಮಾನ್ಯವಾಗಿ ಜೋರಾಗಿ ಬರುವ ಮಳೆ ನಿಧಾನವಾಗಿ ಅಂದರೆ ಹಂತ ಹಂತವಾಗಿ ಕಡಿಮೆಯಾಗುವುದು ಪ್ರಕೃತಿ. ಆದರೆ, ಇಂದು ಮಧ್ಯಾಹ್ನದ ಮಳೆ ತತಕ್ಷಣವೇ ಸೆಕೆಂಡ್‌ಗಳ ಲೆಕ್ಕದಲ್ಲಿ ನಿಂತಿದ್ದು ಆಶ್ಚರ್ಯ.
ಏನಾದರೂ ಇರಲಿ… ಬೆಳಗಿನಿಂದಲೂ ಬೇಸಿಗೆಯಂತಹ ಸುಡುವ ಬಿಸಿಲಿಗೆ ಬಸವಳಿದಿದ್ದ ಭದ್ರಾವತಿ ಜನರಿಗೆ ಮಳೆ ತಂಪನೆರೆದಿದೆ.
















