ಕಲ್ಪ ಮೀಡಿಯಾ ಹೌಸ್
ಚಿಕ್ಕಮಗಳೂರು: ಮೇ 12ರಿಂದ 16ರವರೆಗೂ ಜಿಲ್ಲೆಯ ಬಹಳಷ್ಟು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಂಭವ ಇದ್ದು, ರೈತರು ತಮ್ಮ ಬೆಳೆಗಳ ಕುರಿತಾಗಿ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಮೂಡಿಗೆರೆಯ ಜಿಲ್ಲಾ ಕೃಷಿ ಹವಾಮಾನ ಘಟಕ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಮಾಹಿತಿ ಪ್ರಕಟಿಸಿರುವ ಘಟಕ, ನಾಲ್ಕು ದಿನ ಜಿಲ್ಲೆಯ ಕೊಪ್ಪ, ಮೂಡಿಗೆರೆ, ಚಿಕ್ಕಮಗಳೂರು, ಶೃಂಗೇರಿ, ತಾಲೂಕುಗಳ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಗಾಳಿಯ ವೇಗವು ಹೆಚ್ಚಾಗಲಿದ್ದು ಹೆಚ್ಚು ಮಳೆಯಾಗುವ ಸಂಭವವಿದೆ. ಇದೇ ವೇಳೆ ತರೀಕೆರೆ, ಕಡೂರು ಮತ್ತು ನರಸಿಂಹರಾಜಪುರ ತಾಲೂಕುಗಳ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಗಾಳಿಯ ವೇಗವು ಹೆಚ್ಚಾಗಿರುವ ಸಂಭವದ ಜೊತೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದಿದೆ.
ರೈತರು ಶುಂಠಿ ನಾಟಿ ಮಾಡಲು ಸೂಕ್ತ ಸಮಯವಾಗಿದ್ದು, ನಾಟಿ ಮಾಡುವ ಸಮಯವಾಗಿದಲ್ಲಿ ರೈತರು ಏರು ಮಡಿ ಮಾಡಿ ನಾಟಿ ಮಾಡಬೇಕು. ಮುಂಗಾರು ಆಗಮನಕ್ಕೆ ಮೊದಲು ತೋಟಗಳಲ್ಲಿ ಬಸಿಕಾಲುವೆ ವ್ಯವಸ್ತೆಯನ್ನು ಸರಿಪಡಿಸಿಕೊಳ್ಳಲು ಸೂಕ್ತ ಸಮಯವಾಗಿದೆ. ಗಾಳಿಯ ವೇಗವು ಹೆಚ್ಚಾಗುವ ಸಂಭವಿರುವುದರಿಂದ ರೈತರು ಬಾಳೆ ಬೆಳೆಗೆ ಆಧಾರವನ್ನು ನೀಡಬೇಕು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ಕೃಷಿ ಹವಾಮಾನ ಘಟಕ, ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ. ಮೊಬೈಲ್: 9632894144ಗೆ ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















