ಬೆಂಗಳೂರು: ಮಹಿಳಾ ಸಬಲೀಕರಣಕ್ಕೆ ಕೆನರಾ ಬ್ಯಾಂಕ್ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ನಿರುದ್ಯೋಗ ಮಹಿಳೆಯರಿಗೆ ಉತ್ತಮ ಹಾಗೂ ಸಮರ್ಪಕ ತರಬೇತಿ ಶಿಕ್ಷಣವನ್ನು ನೀಡುವುದರ ಮೂಲಕ ಸ್ವಾವಲಂಬೀ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತಿದೆ ಎಂದು ಖ್ಯಾತ ಹಾಸ್ಯ ಲೇಖಕ ಎಮ್ ಎಸ್ ನರಸಿಂಹ ಮೂರ್ತಿಯವರು ಅಭಿಪ್ರಾಯಪಟ್ಟರು.
ಶ್ರೀಯುತ ನರಸಿಂಹ ಮೂರ್ತಿಯವರು ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯವರು ಆಯೋಜಿಸಿದ್ದ ಕಂಪ್ಯೂಟರ್ ಶಿಕ್ಷಣ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಮಹಿಳಾ ಸ್ವಾವಲಂಬನೆ ಹಾಗೂ ಸಬಲೀಕರಣ ವಿಷಯದಲ್ಲಿ ಕೆನರಾ ಬ್ಯಾಂಕ್ ಯಾವಾಗಲೂ ಮುಂಚೂಣಿಯಲ್ಲಿದೆ. ಕೆನರಾ ಬ್ಯಾಂಕ್ ನ ಸಂಸ್ಥಾಪಕರಾದ ಶ್ರೀ ಅಮ್ಮೆಂಬಲ್ ಸುಬ್ಬರಾವ್ ಪೈ ರವರು 1894 ರಲ್ಲಿ ಅಂದರೆ ಸುಮಾರು 124 ವರುಷಗಳ ಹಿಂದೆಯೇ ಬಾಲಕಿಯರಿಗಾಗಿ ಕೆನರಾ ಬಾಲಕಿಯರ ಪ್ರೌಢಶಾಲೆಯನ್ನು ಸ್ಥಾಪಿಸಿ, ಶಿಕ್ಷಣ ಕ್ರಾಂತಿಯನ್ನೇ ಮಾಡಿದ್ದರು ಎಂದರು.
ಈ ಸಂದರ್ಭದಲ್ಲಿ ಕಂಪ್ಯೂಟರ್ ತರಬೇತಿ ಪೂರೈಸಿದ ಎಲ್ಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಸರ್ಟಿಫಿಕೇಟ್ ಅನ್ನು ವಿತರಿಸಲಾಯಿತು. ಸಂಸ್ಥೆಯ ನಿರ್ದೇಶಕ ಶ್ರೀ ಎಂ ವೆಂಕಟೇಶ ಶೇಷಾದ್ರಿ, ಉಪನ್ಯಾಸಕರಾದ ಶ್ರೀ ವೆಂಕಟೇಶ ಬಾಬು, ಅನುಶ್ರೀ, ವಿಜಯ ವರದರಾಜನ್, ರಾಷ್ಟ್ರೀಯ ರುಡ್ ಸೆಟ್ ಅಕಾಡೆಮಿಯ ನಿರ್ದೇಶಕ ಶ್ರೀ ಸನ್ನಿ ಫಿಲಿಪ್ಸ್ ಹಾಗೂ ಕೆನರಾ ಬ್ಯಾಂಕ್ ನ ನಿವೃತ್ತ ಹಿರಿಯ ಅಧಿಕಾರಿ ಶ್ರೀ ಜಗದೀಶ್ ಮೂರ್ತಿ ಟಿ ಪಿ ಯವರು ಉಪಸ್ಥಿತರಿದ್ದರು.
Discussion about this post