ಕಲ್ಪ ಮೀಡಿಯಾ ಹೌಸ್ | ಹೊಳೆಆಲೂರ |
ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಸುಖದ ಹೆಬ್ಬಾಗಿಲು ತಾನೇ ತೆರೆದುಕೊಳ್ಳುತ್ತದೆ. ಇರುವ ಕಡಿಮೆ ಸಮಯದಲ್ಲಿ ಓದು ಬರಹಕ್ಕೆ ಒತ್ತು ನೀಡಿ ಸಮಯದ ಸದುಪಯೋಗ ಮಾಡಿಕೊಂಡು ರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿರಿ ಎಂದು ರೋಣದ ರಾಜೀವಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಾಯ್.ಎನ್.ಪಾಪಣ್ಣವರ ಹೇಳಿದರು.
ಅವರು ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರ ಶ್ರೀ ಕಲ್ಮೇಶ್ವರ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಪಠ್ಯೇತರ ಚಟುವಟಿಕೆ ಮುಕ್ತಾಯ ಸಮಾರಂಭ ಹಾಗೂ ಬಿ.ಎ, ಬಿ.ಕಾಂ, ಬಿ.ಎಸ್.ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜ್ಯೋತಿ ಬೆಳಗಿಸಿ ಮಾತನಾಡಿದರು.
ಇದೀಗ ಹಚ್ಚಿದ ಈ ಜ್ಯೋತಿ ನಿಮ್ಮ ಜ್ಞಾನದ ಬೆಳಕನ್ನು ಪಸರಿಸುವಂಥದು. ಅಷ್ಟದಿಕ್ಕುಗಳಲ್ಲಿ ಬೆಳಕನ್ನು ಬೀರಿದಂತೆ ನಿಮ್ಮ ಪ್ರತಿಭೆ ಬೆಳಗಲಿ. ಮುಕ್ತಾಯ ಎಂದರೆ ಇಲ್ಲಿಗೆ ಎಲ್ಲ ಮುಗಿಯಿತೆಂದಲ್ಲ. ಇನ್ನು ಮೇಲೆ ಆರಂಭ. ಅದಕ್ಕೇ ಜ್ಯೋತಿಯನ್ನು ಬೆಳಗಿಸಿದ್ದು. ವಿದ್ಯಾರ್ಥಿಗಳು ಶಿಸ್ತು, ಸಹನೆ, ಸಹಕಾರ, ಶಾಂತಿಗಳನ್ನು ಅಳವಡಿಸಿಕೊಳ್ಳಬೇಕು, ಮೂರು ವರ್ಷಗಳ ಈ ಅವಧಿಯಲ್ಲಿ ಓದಿನ ಜೊತೆಗೆ ನಿಮ್ಮ ಪ್ರತಿಭಾ ವಿಕಾಸಕ್ಕೆ ಹಲವಷ್ಟು ವೇದಿಕೆಗಳನ್ನು ಒದಗಿಸಲಾಗಿರುತ್ತದೆ. ಇಲ್ಲಿ ನಮ್ಮ ಬದುಕನ್ನು ರೂಪಿಸುವಲ್ಲಿ ಶಿಕ್ಷಕರು ಶ್ರಮಪಡುತ್ತಾರೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ದೀವಿಗೆ ಬೆಳಗಿಸಿ ಸಂಸ್ಥೆಗೆ , ಶಿಕ್ಷಕರಿಗೆ, ತಮ್ಮ ಮನೆಗೆ ಕೀರ್ತಿ ತರುವಂತಾಗಬೇಕು ಎಂದರು.
Also read: ಚಂದ್ರನ ಮೇಲೆ ಕಾಲಿಡಲು ಇನ್ನೊಂದೇ ಹೆಜ್ಜೆ ಬಾಕಿ: ನೌಕೆಯಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್
ಗುರುಗಳನ್ನು ಮೀರಿಸಿ ನೀವು ಉನ್ನತ ವಿದ್ಯೆ, ಹುದ್ದೆ ಅಲಂಕರಿಸಿದರೆ ಅದೇ ನೀವು ಗುರುಗಳಿಗೆ ಕೊಡುವ ಕಾಣಿಕೆ. ನೀವು ಕುಳಿತ ಜಾಗದಲ್ಲೇ ಇಲ್ಲಿ ಓದುವಾಗ ನಾನೂ ಎಲ್ಲ ಕಾರ್ಯಕ್ರಮಗಳಲ್ಲಿ ಕುಳಿತಿರುತ್ತಿದ್ದೆ. ಇಂದು ನನಗೆ ಮೂರುವರ್ಷಗಳ ಕಾಲ ವಿದ್ಯೆ ಕಲಿಸಿದ ಗುರುಗಳು ತಮ್ಮ ಜೊತೆಗೆ ಕಲಿತ ಕಾಲೇಜಿನಲ್ಲೇ ಅತಿಥಿಯಾಗಿ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಿದ್ದಾರೆ. ಇದಕ್ಕಿಂತ ಸೌಭಾಗ್ಯ ನನಗೆ ಬೇರೊಂದಿಲ್ಲ ಎಂದು ವಿದ್ಯಾರ್ಥಿ ಜೀವನದ ಅನುಭವಗಳ ಜೊತೆಗೆ ವಿದ್ಯಾರ್ಥಿಗಳಿಗೆ ಹಲವಷ್ಟು ಯಶಸ್ಸಿನ ಸೂತ್ರಗಳನ್ನು , ಜೀವನ ಕೌಶಲ್ಯಗಳ ಕುರಿತು ಹೇಳಿದರು. ಇದೆ ಸಂದರ್ಭದಲ್ಲಿ ವರ್ಷದುದ್ದಕ್ಕೂ ನಡೆಸಿದ್ದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಮೂರು ವರ್ಷಗಳ ಅನುಭವಗಳನ್ನು ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ ಕಣವಿ ಮಾತನಾಡಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ನಿಮ್ಮ ಪ್ರತಿಭೆ ತೋರಿಸಿದ್ದೀರಿ. ನಿಮ್ಮ ಮುಂದಿನ ಜೀವನ ಸುಖ-ನೆಮ್ಮದಿಯದಾಗಿರಲಿ ಎಂದರು. ಅತಿಥಿಗಳಾಗಿದ್ದ ಡಾ.ಸಂಗಮೇಶ ಸಜ್ಜನರ , ಡಾ.ಪ್ರಭು ಗಂಜಿಹಾಳ ಸಂದರ್ಭೋಚಿತ ಮಾತನಾಡಿದರು. ವೇದಿಕೆಯ ಮೇಲೆ ಮಹಾವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ನಾಗರಾಜ ಹುಡೇದ, ಮಹಿಳಾ ಪ್ರತಿನಿಧಿ ಅನ್ನಪೂರ್ಣ ಪಾಟೀಲ ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ರವಿಚಂದ್ರ ಕುರಿ ಉಪಸ್ಥಿತರಿದ್ದರು.
ಕು. ಪೂಜಾ ಬೆಳವಲ ಪ್ರಾರ್ಥಿಸಿದರು, ಸ್ವಾಗತವನ್ನು ರವಿಚಂದ್ರ ಕುರಿ ಮಾಡಿದರು. ಬಹುಮಾನ ವಿತರಣೆ ಕಾರ್ಯಕ್ರಮವನ್ನು ಪ್ರೊ.ರೇಶ್ಮಾ ಟಕ್ಕೇದ, ಶಿಲ್ಪಾ ಮೆದನಾಪೂರ ನಿರ್ವಹಿಸಿದರು , ಕೊನೆಯಲ್ಲಿ ಅಕ್ಷತಾ ಮಣ್ಣೂರ ವಂದಿಸಿದರು. ಕು.ಮಧು ಗಾಣಿಗೇರ ನಿರೂಪಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ವರದಿ: ಡಾ.ಪ್ರಭು ಗಂಜಿಹಾಳ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post