ನವದೆಹಲಿ: ಐಪಿಸಿ ಸೆಕ್ಷನ್ 377ರ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದ್ದು, ಸಲಿಂಗಕಾಮ ಅಪರಾಧವಲ್ಲ ಎಂದು ಹೇಳಿದೆ.
ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ರೋಹಿಂಟನ್ ಎಫ್.ನಾರಿಮನ್, ಎ.ಎಮ್. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಹಾಗೂ ಇಂದು ಮಲ್ಹೋತ್ರಾ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ, ಭಾರತದಲ್ಲಿ ಸಲಿಂಗಕಾಮ ಅಪರಾಧವೋ ಅಥವಾ ಇಲ್ಲವೋ ಎಂದು ಪರಿಗಣಿಸುವ, ಭಾರತೀಯ ದಂಡಸಂಹಿತೆ(ಐಪಿಸಿ) ಸೆಕ್ಷನ್ 377ರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿ ಈ ಮಹತ್ವದ ತೀರ್ಪು ನೀಡಿದೆ.
ಐಪಿಸಿ ಸೆಕ್ಷನ್ 377ರ ವಿಧಿಗೆ ಯಾವುದೇ ತರ್ಕವಿಲ್ಲ. ವೈವಿಧ್ಯತೆಯ ಶಕ್ತಿಯನ್ನು ಗೌರವಿಸುವ ಅಗತ್ಯವಿದೆ. ಅಂತೆಯೇ ಪೂರ್ವಾಗ್ರಹಗಳಿಗೆ ಇತಿಶ್ರೀ ಹಾಡಬೇಕಾಗಿದ್ದು, ಸಲಿಂಗಕಾಮಿಗಳಿಗೆ ಬೇರೆಯವರಂತೆಯೇ ಹಕ್ಕಿದೆ ಎಂದು ತೀರ್ಪಿನಲ್ಲಿ ಹೇಳಿದೆ.
ಸಮ್ಮತಿಯ ಸಲಿಂಗ ಲೈಂಗಿಕತೆಯು ಪರಿವರ್ತನೆಯೇ ಹೊರತು ಅಡ್ಡದಾರಿ ಅಲ್ಲ. ಸಲಿಂಗ ಲೈಂಗಿಕತೆಯನ್ನು ಅಪರಾಧ ಎಂದು ಪರಿಗಣಿಸುವ ಸೆಕ್ಷನ್ 377ರ ಸಿಂಧುತ್ವವನ್ನು ಪರಿಶೀಲಿಸುವಾಗ ಸಂವಿಧಾನವನ್ನು ಆಧಾರವಾಗಿ ಇಟ್ಟುಕೊಳ್ಳಲಾಗುವುದು. ಬಹುಸಂಖ್ಯಾತರ ನೈತಿಕ ನಿಲುವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಈ ಹಿಂದಿನ ವಿಚಾರಣೆ ವೇಳೆ ಜುಲೈನಲ್ಲಿ ಸುಪ್ರೀಂ ಪೀಠ ಹೇಳಿತ್ತು.
ಪ್ರಸ್ತುತ ಐಪಿಸಿ ಸೆಕ್ಷನ್ 377ರ ಪ್ರಕಾರ ಅನೈಸರ್ಗಿಕವಾಗಿ ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಗುದ ಸಂಭೋಗ ನಡೆಸುವ ಮೂಲಕ ಅಸಹಜ ಲೈಂಗಿಕ ಅಪರಾಧ ಎಸಗುವ ಯಾರಿಗೆ ಆದರೂ ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷವರೆಗಿನ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ.
ಇದೇ ವೇಳೆ ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನ ಮೂಲಕ 156 ವರ್ಷಗಳ ಹಳೆಯ ಕಾನೂನು ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿದಂತಾಗಿದೆ.
Discussion about this post