ಕಲ್ಪ ಮೀಡಿಯಾ ಹೌಸ್ | ಹೊನ್ನಾವರ |
ತಾಲೂಕಿನ ಗುಣವಂತೆಯಲ್ಲಿ ಪ್ರತಿವರ್ಷ ವಿಶಿಷ್ಠವಾಗಿ ಆಚರಿಸಿಕೊಂಡು ಬರುತ್ತಿರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನಡೆಯುತ್ತಿದೆ.
ನಾಟ್ಯೋತ್ಸವದ ದ್ವಾದಶ ಸಮಾರಂಭ ಕೆರೆಮನೆ ಬಯಲು ರಂಗಮಂದಿರದಲ್ಲಿ ವಿದ್ಯುಕ್ತವಾಗಿ ಯಕ್ಷ ಗಣಪತಿ ಪೂಜೆಯೊಂದಿಗೆ ಶುಭಾರಂಭಗೊಂಡಿತು. ಸಾನಿಧ್ಯ ವಹಿಸಿದ್ದ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು, ಎಡನೀರು ಇವರಿಗೆ ಫಲ ಸಮರ್ಪಿಸಲಾಯಿತು. ಕಾರ್ಯಾಧ್ಯಕ್ಷರಾದ ಲಕ್ಷ್ಮಿನಾರಾಯಣ ಕಾಶಿಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಅಗಲಿದ ಕಲಾಚೇತನ ಕಲಾವಿದರನ್ನು ಸ್ಮರಿಸಿ ಮೌನಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಿರಿಯ ಕಲಾವಿದರಾದ ತಿಮ್ಮಣ್ಣ ಯಾಜಿ ಮಣ್ಣಿಗೆ, ನಾರಾಯಣ ಹಾಸ್ಯಗಾರ, ಕರ್ಕಿ ಹಾಗೂ ಪ್ರೊ. ಎಂ.ಎ. ಹೆಗಡೆಯವರ ಕಲಾಪಥವನ್ನು ಸ್ಮರಿಸಿ ಸಮರ್ಪಣೆ ಮಾಡಲಾಯಿತು. ನಾಟ್ಯೋತ್ಸವ ಕಾರ್ಯಕ್ರಮದ ಆಶಯ ಮತ್ತು ಶ್ರೀ ಇಡಗುಂಜಿ ಯಕ್ಷಗಾನ ಮಂಡಳಿಯ ಘರಾಣೆಯ ಆಶಯವನ್ನು ಯಕ್ಷಗಾನ ಅಕಾಡೆಮಿಯ ಸದಸ್ಯರಾದ ದಿವಾಕರ ಹೆಗಡೆಯವರು ಸಮರ್ಪಕವಾಗಿ ಮಂಡಿಸಿದರು.
ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು ಕಲಾಜ್ಯೋತಿಯನ್ನು ಪ್ರಜ್ವಲಿಸುದರ ಮೂಲಕ ನಾಟ್ಯೋತ್ಸವವನ್ನು ಉದ್ಘಾಟಿಸಲಾಯಿತು. ಹಿರಿಯ ಪತ್ರಕರ್ತರಾದ ಎಂ.ಕೆ. ಭಾಸ್ಕರ ರಾವ್ ರವರು ಪದ್ಮಶ್ರೀ ಡಾ. ಬಿ. ಜಯಶ್ರೀ, ಬೆಂಗಳೂರು ಇವರ ಕಲಾಪಥವನ್ನು, ಕಲಾವಂತಿಕೆಯ ವಿಸ್ತಾರವನ್ನು ಸಭೆಗೆ ತಿಳಿಸಿ ಅಭಿನಂದಿಸಿದರು.
ಅಪ್ರತಿಮ ಕಲಾಮೇರು ಪ್ರತಿಭೆ ಶ್ರೀ ಕೆರೆಮನೆ ಶಿವಾರಾಮ ಹೆಗಡೆ ಪ್ರಶಸ್ತಿಯನ್ನು ಪದ್ಮಶ್ರೀ ರಂಗಭೂಮಿ ಕಲಾವಿದೆಯಾದ, ರಾಜ್ಯಸಭಾ ಮಾಜಿ ಸದಸ್ಯರಾದ ಡಾ.ಬಿ. ಜಯಶ್ರೀಯವರಿಗೆ ಪ್ರಧಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಬಿ. ಜಯಶ್ರೀಯವರು, ಶಂಭು ಹೆಗಡೆಯವರ ಸಂಗಡ ಅಮೆರಿಕಾದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ ಆ ವೇದಿಕೆಯಲ್ಲಿ ಅಕಸ್ಮಾತ್ ಯಕ್ಷಗಾನ ಸ್ತ್ರೀ ವೇಷ ಮಾಡಿದ ನೆನಪು ಮಾಡಿಕೊಂಡರು. ರಂಗಭೂಮಿಯ ಕಲಾವಿದೆಯಾದ ನನಗೆ ಯಕ್ಷಗಾನ ರಂಗಭೂಮಿಯ ಶ್ರೇಷ್ಠ ಕಲಾವಿದರಾದ ಕೆರೆಮನೆ ಶ್ರೀಶಿವರಾಮ ಹೆಗಡೆಯವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಪಡೆದು ಧನ್ಯನಾಗಿದ್ದೇನೆ ಎಂದರು.
ನಾಟ್ಯೋತ್ಸವದಲ್ಲಿ ನೀಡುವ ಈ ಪ್ರಶಸ್ತಿ ಕಲಾ ವಿಸ್ತಾರದ ಸಂಕೇತವಾಗಿದೆ. ಇದನ್ನು ಪಡೆದ ನನಗೆ ರಂಗ ವಿಸ್ತಾರದ ಜವಾಬ್ಧಾರಿ ಹೆಚ್ಚಿದೆ ಎಂದರು.
ನಾಟ್ಯೋತ್ಸವ ಸನ್ಮಾನವನ್ನು ಯಕ್ಷಗಾನ ಕಲಾವಿದರಾದ ರಾಜೀವ ಶೆಟ್ಟಿ, ಹೊಸಂಗಡಿ, ದಯಾನಂದ ಬಳೆಗಾರ, ನಾಗೂರು, ಸಂಘಟಾಕರಾದ ಸೂರ್ಯನಾರಾಯಣ ಪಂಜಾಜೆ, ಮತ್ತು ಮರಣೋತ್ತರವಾಗಿ ಗುಂಡಿಬೈಲು ಸುಬ್ರಾಯ ಭಟ್, ಮತ್ತು ಕೃಷ್ಣ ಭಂಡಾರಿಯವರಿಗೆ ನೀಡಿ ಪುರಸ್ಕರಿಸಲಾಯಿತು.
ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಮಾತನಾಡಿ, ಯಕ್ಷಗಾನ ಕ್ಷೇತ್ರವನ್ನು ಪ್ರಪಂಚಕ್ಕೆ ಗುರುತಿಸಿ ಕಲಾ ವಿಸ್ತಾರವನ್ನು ಮಾಡಿದ ಹಲವರಲ್ಲಿ ಶಂಭು ಹೆಗಡೆಯವರು ಒಬ್ಬರು ಎಂದರು. ಸಂಸ್ಕೃತಿಯನ್ನು ಬೆಳೆಸುವುದರಲ್ಲಿ ಕಲಾ ವಿನಿಮಯ ಅವಶ್ಯಕವಾಗಿದೆ. ಈ ಕಾರ್ಯ ನಾಟ್ಯೋತ್ಸವ ಜಾಬ್ಧಾರಿಯುತವಾಗಿ ಮಾಡುತ್ತಿದೆ ಎಂದರು.
ಕಲೆಯಿಂದ ಕಲಾವಿದನ ವಿಸ್ತಾರವೇ ಹೊರತು ಕಲಾವಿದನಿಂದ ಕಲೆ ಅಲ್ಲಾ ಎಂದು ಅಭಿಪ್ರಾಯ ಪಟ್ಟು, ಸಮಷ್ಠಿ ರೂಪದಲ್ಲಿ ಎಲ್ಲಾ ಕಲಾ ಪ್ರಕಾರಗಳನ್ನು ಬೆಳೆಸಿ ಭಾರತದ ಸಂಸ್ಕೃತಿಯನ್ನು ವಿಸ್ತರಿಸಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೀವ ಶೆಟ್ಟಿ, ಯಕ್ಷಗಾನಕ್ಕೆ ಭಾವ ಪ್ರಪಂಚವನ್ನು ನೀಡಿದ ಮೇಳವೆಂದರೆ ಇಡಗುಂಜಿ ಯಕ್ಷಗಾನ ಮೇಳ ಎಂದು ಅಭಿಪ್ರಾಯಪಟ್ಟರು.
ಸಾಧನೆಯು ಸಾಧಕರ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ ಎಂದರು. ಸೂರ್ಯನಾರಾಯಣ ಪಂಜಾಜೆ ಅವರು ಮಾತನಾಡುತ್ತಾ ಪ್ರೇಕ್ಷಕ, ಕಲಾಇದ ಮತ್ತು ಸಂಘಟಕ ಕಲೆಯ ಮುಖ್ಯ ಭಾಗವತರು, ಸಂಘಟಕನಿಗೆ ಉಂಟಾಗುವ ಸಂಕಟದ ವ್ಯಾಪ್ತಿಯನ್ನ ಮಂಡಿಸಿದರು.
ಮಂಡಳಿ ನಡೆಸಿದ ಯಕ್ಷಗಾನ ಭಾಗವತಿಕೆ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಡಾ.ಎಚ್.ಎಸ್. ಪ್ರಕಾಶರವರು ಮಾತನಾಡಿ, ರಂಗಭೂಮಿಯಲ್ಲಿ ನಟನ ಸಾಮರ್ಥ್ಯವು ಮುಖ್ಯವಾಗಿದ್ದು, ಆತನ ಕಲಾ ಪ್ರದರ್ಶನದ ಅಭಿವ್ಯಕ್ತಿ, ಅನುಭೂತಿ ಮತ್ತು ಪಾತ್ರದ ಜೀವಂತಿಕೆ ಮುಖ್ಯವಾಗಿರುತ್ತದೆ ಎಂದರು.
ಡಾ.ಎಂ. ಪ್ರಭಾಕರ ಜೋಶಿ ಮಾತನಾಡಿ, ಚೈನೀಸ್ ಅಪೇರಾ ಎಂಬ ಕಲಾ ಪ್ರಕಾರ ಹೊನ್ನಾವರದ ಬುದ್ಧ ಧರ್ಮದ ಅನುಯಾಯದವರಿಂದ ಮುಂದುವರಿದಿದೆ ಎಂಬ ವಿಷಯ ಅಧ್ಯಯನಕ್ಕೆ ಒಳಪಡಬೇಕು ಎಂದರು.
ಕುಡಿಯುವ ನೀರಿನ ಘಟಕವನ್ನು ಕಲಾಮಂದಿರಕ್ಕೆ ನೀಡಿದ ಶಂಕರ ಐತಾಳರವರನ ಸನ್ಮಾನಿಸಲಾಯಿತು. ಶಿವಾನಂದ ಹೆಗಡೆಯವರು ವಂದಿಸಿ, ನಾಗರಾಜ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post