ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ತಹಶೀಲ್ದಾರ್ ಹಾಗೂ ತಾಲ್ಲೂಕು ದಂಡಾಧಿಕಾರಿಯಾಗಿ ದಕ್ಷ ಆಡಳಿತ ನಡೆಸಿ, ಚನ್ನಗಿರಿಗೆ ವರ್ಗಾವಣೆಯಾದ ಪಟ್ಟರಾಜ ಗೌಡ ಅವರನ್ನು ಪಟ್ಟಣ ಪಂಚಾಯ್ತಿಯ ಕಾಂಗ್ರೆಸ್ ಸದಸ್ಯರು ಹಾಗೂ ಸಾರ್ವಜನಿಕರ ವತಿಯಿಂದ ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಪಟ್ಟರಾಜ ಗೌಡ, ಸರ್ಕಾರಿ ವೃತ್ತಿಯಲ್ಲಿ ವರ್ಗಾವಣೆ ಮತ್ತು ನಿವೃತ್ತಿ ಸಾಮಾನ್ಯ. ಆದರೆ, ಸೊರಬ ತಾಲೂಕಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಆತ್ಮತೃಪ್ತಿ ಇದೆ. ಕಾರ್ಯ ನಿರ್ವಹಣೆಯ ವೇಳೆ ಕಚೇರಿ ಸಿಬ್ಬಂದಿ ಉತ್ತಮವಾಗಿ ಸಹಕಾರ ನೀಡಿದ್ದಾರೆ. ಜೊತೆಯಲ್ಲಿ ವಿವಿಧ ಸಂಘ ಸಂಸ್ಥೆಯವರು, ಮಾಧ್ಯಮದವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉತ್ತಮವಾದ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯ ಪ್ರಸನ್ನ ಕುಮಾರ್ ದೊಡ್ಡನೆ ಮಾತನಾಡಿ, ತಹಸೀಲ್ದಾರ್ ಪಟ್ಟರಾಜ ಗೌಡ ಅವರು ತಾಲೂಕಿಗೆ ನೀಡಿರುವಂತಹ ಸೇವೆ ಅನನ್ಯವಾದದ್ದು. ತಾಲೂಕಿಗೆ ಬಂದು ಅಧಿಕಾರ ಸ್ವೀಕರಿಸಿದಾಗಿನಿಂದಲೂ ಪ್ರಾಮಾಣಿಕವಾಗಿ, ದಕ್ಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ನೆರೆ ಮತ್ತು ಬರದಂತಹ ಸಂದರ್ಭದಲ್ಲಿ ಸಮಾರೋಪಾದಿಯಲ್ಲಿ ಕಾರ್ಯನಿರ್ವಹಿಸಿರುವುದನ್ನು ಜನತೆ ಸದಾ ಸ್ಮರಿಸುತ್ತಾರೆ. ಇದಲ್ಲದೇ ತಾಲೂಕಿನ ಇತಿಹಾಸದಲ್ಲಿಯೇ ಕನ್ನಡ ರಾಜ್ಯೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸಿದ್ದು ಶ್ಲಾಘನೀಯವಾಗಿದೆ. ಕರೋನ ಹರಡುವಿಕೆ ತಡೆಗಟ್ಟಲು ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದರು. ಮಾತ್ರವಲ್ಲದೇ ಸ್ವತಃ ತಹಶೀಲ್ದಾರ್ ಅವರು ಲಾಠಿ ಹಿಡಿದು ರಸ್ತೆಗೆ ಇಳಿದಿದ್ದರು. ತಾಲೂಕಿನ ಎಲ್ಲ ಸಂಘ ಸಂಸ್ಥೆಯವರ ಹಾಗೂ ಜನರ ಸಹಕಾರದಿಂದ ಮತ್ತು ವಿವಿಧ ಇಲಾಖೆಯ ಸಹಕಾರದಿಂದ ಅನೇಕ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ನಿಮ್ಮಿಂದ ತಾಲೂಕಿಗೆ ಹತ್ತು ತಿಂಗಳಿನಿಂದಲೂ ನಿರಂತರ ಸೇವೆಯನ್ನು ಜನರು ಪಡೆದಿರುತ್ತಾರೆ ಹಾಗೆ ಇಂತಹ ಅಧಿಕಾರಿಗಳ ವರ್ಗಾವಣೆ ನಿಜಕ್ಕೂ ಬೇಸರ ತರಿಸುತ್ತದೆ. ಆದರೆ ಅನಿವಾರ್ಯ ಪರಿಸ್ಥಿತಿಯಿಂದ ಸೊರಬ ತಾಲೂಕಿನಿಂದ ಚನ್ನಗಿರಿ ತಾಲೂಕಿಗೆ ವರ್ಗಾವಣೆ ಆಗಿರುವುದು. ಜನಸಾಮಾನ್ಯರಲ್ಲೂ ಕೂಡ ಬೇಸರ ತರಿಸುತ್ತದೆ. ಒಬ್ಬ ಅಧಿಕಾರಿ ವರ್ಗಾವಣೆಯಾದಾಗ ಜನತೆಯ ಕಣ್ಣಂಚಲ್ಲಿ ನೀರು ಬರುತ್ತದೆ ಎಂದರೆ, ಆ ಅಧಿಕಾರಿಯ ಸೇವೆ, ಕಾರ್ಯ ಮತ್ತು ಪ್ರಾಮಾಣಿಕತೆಯನ್ನು ಅಳೆಯಬಹುದು. ತಾಲ್ಲೂಕಿನ ಜನತೆ ತಮ್ಮನ್ನು ಸದಾ ಸ್ಮರಿಸುತ್ತದೆ ಎಂದು ಭಾವುಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಶ್ರೀರಂಜನಿ ಪ್ರವೀಣ ಕುಮಾರ್ ದೊಡ್ಮನೆ, ಅಫ್ರಿನ್ ಮೆಹಬೂಬ್ ಬಾಷಾ, ಸುಲ್ತಾನಾ ಬೇಗಂ ಸಿರಾಜುದ್ಧೀನ್, ಪತ್ರಕರ್ತರಾದ ಜೆ.ಎಸ್. ನಾಗರಾಜ್ ಜೈನ್, ಸೈಯದ್ ಅನ್ಸರ್ ಇತರರಿದ್ದರು.
Get in Touch With Us info@kalpa.news Whatsapp: 9481252093
Discussion about this post