ಕಲ್ಪ ಮೀಡಿಯಾ ಹೌಸ್ | ಹೊಸಹಳ್ಳಿ(ಶಿವಮೊಗ್ಗ) |
ಪದ್ಮಶ್ರೀ ಪ್ರಶಸ್ತಿ ವಿಜೇತ, ಗಮಕ ಗಂಧರ್ವ ಹೊಸಹಳ್ಳಿ ಆರ್. ಕೇಶವಮೂರ್ತಿ (88) Keshavamurthy ಅವರು ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ.
ವಯೋಸಹಜ ಅಸ್ಥಸ್ಥತೆಯಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೇಶವಮೂರ್ತಿ ಅವರ ಕುರಿತು
1934ರ ಫೆ.22ರಂದು ಶಿವಮೊಗ್ಗ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಜನಿಸಿದ ಕೇಶವಮೂರ್ತಿಗಳು ಮೂಲತಃ ಕೃಷಿಕ ಮನೆತನದವರು. ಇವರ ತಂದೆ ರಾಮಸ್ವಾಮಿ ಶಾಸ್ತ್ರಿಗಳು, ತಾಯಿ ಲಕ್ಷ್ಮಿದೇವಮ್ಮ. ಇವರ ತಂದೆ ಸಂಸ್ಕೃತ ವಿದ್ವಾಂಸರು, ಜೊತೆಗೆ ಗಾಯಕರು. ಇವರ ಸೋದರ ರಾಮಾಶಾಸ್ತ್ರಿಗಳು ಗಮಕ ಹಾಗೂ ಸಂಗೀತ ವಿದ್ವಾಂಸರು. ಇದೇ ಇವರಿಗೆ ಪ್ರೇರಣೆಯಾಗಿತ್ತು.
ಕಳೆದ ನಾಲ್ಕು ದಶಕಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಗಮಕ ಕಾರ್ಯಕ್ರಮಗಳನ್ನು ನೀಡುತ್ತಿರುವ ಕೇಶವಮೂರ್ತಿಗಳು, ಹಿರಿಯ ವ್ಯಾಖ್ಯಾನಕಾರರಾಗಿದ್ದ ವ್ಯಾಖ್ಯಾನ ವಾಚಸ್ಪತಿ ಮತ್ತೂರು ಲಕ್ಷ್ಮೀಕೇಶವ ಶಾಸ್ತಿçಯವರ ವ್ಯಾಖ್ಯಾನದೊಂದಿಗೆ ಸಮಗ್ರ ಕುಮಾರವ್ಯಾಸ ಭಾರತದ 135 ಧ್ವನಿ ಸುರುಳಿಗಳು, ಮಾರ್ಕಂಡೇಯ ಅವಧಾನಿ ಅವರ ವ್ಯಾಖ್ಯಾನದೊಂದಿಗೆ 35 ಧ್ವನಿ ಸುರುಳಿಗಳಲ್ಲಿ ಜೈಮಿನಿ ಭಾರತ ಹೊರ ಬಂದಿದೆ.
ಗಮಕದ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಇವರ ಕೊಡುಗೆ ಅಪಾರ ಮತ್ತು ಅನನ್ಯವಾಗಿದೆ. ವಾರಣಾಸಿ, ಕಾನ್ಪುರ, ಜೈಪುರ, ಮುಂಬೈ, ಪುನಾ ಘರಾಣೆಗಳಂತೆಯೇ ಕೇಶವಮೂರ್ತಿಯವರ ಶೈಲಿ ಕೂಡ ಖ್ಯಾತಿಪಡೆದುಕೊಂಡಿದೆ. ಇವರ ಸಾಧನೆಯನ್ನು ಇದೀಗ ಇಡೀ ಗ್ರಾಮವೇ ಕೊಂಡಾಡುತ್ತಿದ್ದು, ಇವರ ಕಲೆ, ಸಾಧನೆಯಿಂದಾಗಿ ಇದೀಗ ಹೊಸಹಳ್ಳಿಯು ಗಮಕ ಗ್ರಾಮ ಎಂಬ ಹೆಸರನ್ನು ತಂದುಕೊಟ್ಟಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post