ನವದೆಹಲಿ: ರಾಜಕೀಯದಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎನ್ನುವುದು ಇನ್ನು ಮತ್ತೊಮ್ಮೆ ಸಾಬೀತಾಗಿದ್ದು, ಇದಕ್ಕೆ ಸಾಕ್ಷಿಯಾಗಿರುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಲಾಯಂ ಸಿಂಗ್ ಯಾದವ್!
ಹೌದು! ಲೋಕಸಭೆ ಕೊನೆಯ ಅಧಿವೇಶನದ ಕಲಾಪದಲ್ಲಿ ಮಾತನಾಡಿರುವ ಸಮಾಜವಾದಿ ಪಕ್ಷದ ನೇತಾರ ಮುಲಾಯಂ ಸಿಂಗ್ ಯಾದವ್, 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ಪ್ರತಿಯೊಬ್ಬರನ್ನೂ ಒಗ್ಗೂಡಿಸಿಕೊಂಡು ಹೋಗಲು ಪ್ರಯತ್ನಿಸಿರುವ ಅವರ ಕಾರ್ಯಶೈಲಿಯನ್ನು ನಾನು ಅಭಿನಂದಿಸುತ್ತೇನೆ. ಅವರು ತುಂಬಾ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಅವರತ್ತ ಯಾರೊಬ್ಬರು ಬೊಟ್ಟು ಮಾಡಿ ತೋರಿಸುವಂತಿಲ್ಲ ಎಂದು ಅನಿರೀಕ್ಷಿತ ಹೇಳಿಕೆ ನೀಡಿದ್ದಾರೆ.
ಸೋನಿಯಾ ಗಾಂಧಿ ಅವರ ಬಲಭಾಗದಲ್ಲಿ ನಿಂತು ಮುಲಾಯಂ ಅವರು ಭಾಷಣ ಮಾಡಿದ್ದು, ತಮ್ಮ ಬಗ್ಗೆ ಹೊಗಳಿಕೆ ಮಾತನ್ನಾಡಿ, ಅಭಿನಂದಿಸಿರುವುದಕ್ಕೆ ಕುಳಿತಲ್ಲಿಂದಲ್ಲಿಯೇ ಪ್ರಧಾನಿ ಮೋದಿ ಅವರು ಮುಲಾಯಂಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದ್ದಾರೆ.
ಮುಲಾಯಂ ಪುತ್ರ ಅಖಿಲೇಶ್ ಅವರು ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ಬಹುಕಾಲದ ಶತ್ರುವಾಗಿದ್ದ ಬಹುಜನ್ ಸಮಾಜ ಪಕ್ಷದ ಜೊತೆ ಸಮಾಜವಾದಿ ಪಕ್ಷ ಕೈಜೋಡಿಸಿದ್ದಾರೆ. ಈ ನಡುವೆಯೇ ಮುಲಾಯಂ ಹೇಳಿಕೆ ಆಶ್ಚರ್ಯವನ್ನು ಉಂಟು ಮಾಡಿದೆ.
Discussion about this post