ಕಲ್ಪ ಮೀಡಿಯಾ ಹೌಸ್ | ಅಜ್ಜಂಪುರ/ಚನ್ನರಾಯಪಟ್ಟಣ |
ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ Minister V Somanna ಅವರು ಇಂದು ಅಜ್ಜಂಪುರ ಮತ್ತು ಬೀರೂರು ಪ್ರದೇಶಗಳಲ್ಲಿ ಪ್ರಮುಖ ರೈಲ್ವೆ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಚನ್ನರಾಯಪಟ್ಟಣ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ರೈಲು ಸಂಖ್ಯೆ 11312 ಹಾಸನ–ಸೊಲ್ಲಾಪುರ ಎಕ್ಸ್‌ಪ್ರೆಸ್ ರೈಲಿಗೆ Hassan-Solapur Express ಹಸಿರು ನಿಶಾನೆ ತೋರಿದರು.
ಅಜ್ಜಂಪುರದ ಲೆವೆಲ್ ಕ್ರಾಸಿಂಗ್ ಸಂಖ್ಯೆ 138ರ ಬದಲಿಗೆ ನಿರ್ಮಾಣವಾಗಲಿರುವ ರಸ್ತೆ ಮೇಲ್ಸೇತುವೆ (ROB) ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಸುಮಾರು ₹50.48 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಲಿದ್ದು, ಸುರಕ್ಷತೆ ಹಾಗೂ ರಸ್ತೆ ಸಂಪರ್ಕವನ್ನು ಸುಧಾರಿಸುವ ನಿರೀಕ್ಷೆ ಇದೆ.
ಇದೇ ವೇಳೆ ಅಜ್ಜಂಪುರ–ಬೀರೂರು ರೈಲು ನಿಲ್ದಾಣಗಳ ನಡುವೆ ₹5.10 ಕೋಟಿ ವೆಚ್ಚದಲ್ಲಿ ಪಾದಚಾರಿ ಸುರಂಗ ಮಾರ್ಗ ನಿರ್ಮಾಣಕ್ಕೂ ಚಾಲನೆ ನೀಡಲಾಯಿತು. ಇದು ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ಸೌಲಭ್ಯ ಒದಗಿಸುವುದರ ಜೊತೆಗೆ ರೈಲು ಹಳಿಗಳ ಅನಧಿಕೃತ ದಾಟುವಿಕೆಯನ್ನು ತಡೆಯಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಅಜ್ಜಂಪುರ ರೈಲು ನಿಲ್ದಾಣವನ್ನು ಶೀಘ್ರದಲ್ಲೇ ಹೆಚ್ಚುವರಿ ಪ್ರಯಾಣಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಸ್ತುತ ವರ್ಷದಲ್ಲಿ 17 ಜೋಡಿ ರೈಲು ಸೇವೆಗಳನ್ನು ಕಾಯಂ ಮಾಡಲಾಗಿದ್ದು, ಪ್ರಯಾಣಿಕರ ದರವನ್ನು 30 ಶೇಕಡಾ ಕಡಿತಗೊಳಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದ ಅವರು, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕರ್ನಾಟಕದ 61 ರೈಲು ನಿಲ್ದಾಣಗಳನ್ನು ಸುಮಾರು ₹2,000 ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ನಂತರ ಚನ್ನರಾಯಪಟ್ಟಣ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ಹಾಸನ–ಸೊಲ್ಲಾಪುರ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಈ ನಿಲುಗಡೆ ಸ್ಥಳೀಯ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸುವಂತಾಗಿದೆ. ಈ ಭಾಗದ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಇದು ಸಹಕಾರಿ ಎಂದು ಸಚಿವರು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ 13,800 ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ನಿರ್ಮೂಲನೆ ಮಾಡಲಾಗಿದೆ. ಹಾಸನ, ಅರಸೀಕೆರೆ ಹಾಗೂ ಸಕಲೇಶಪುರ ರೈಲು ನಿಲ್ದಾಣಗಳನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಸದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಶ್ರೀ ಜಿ.ಎಚ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಶ್ರೀ ಎಸ್.ಎಲ್. ಭೋಜೇಗೌಡ, ಶಾಸಕ ಶ್ರೀ ಕೆ.ಎಸ್. ಆನಂದ್, ಶಾಸಕ ಶ್ರೀ ಎಚ್.ಕೆ. ಸುರೇಶ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















