ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ | ವರದಿ: ಡಿ.ಎಲ್. ಹರೀಶ್, ಬೆಂಗಳೂರು
ರಾಜ್ಯದಲ್ಲಿ ಅಂಬೇಡ್ಕರ್ #Ambedkar ನಿಪ್ಪಾಣಿಗೆ ಬಂದು ಹೋದ ನೆನಪಿಗೆ ಶತಮಾನ ಸಂಭ್ರಮ ಆಚರಿಸದಂತೆ ನಕಲಿ ಗಾಂಧಿಗಳು ಷಡ್ಯಂತ್ರ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ #Union Minister Pralhad Joshi ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ, ಬಿಜೆಪಿ ಆಯೋಜಿಸಿದ್ದ ‘ಭೀಮ ಹೆಜ್ಜೆ ಶತಮಾನ ಸಂಭ್ರಮ’ ಒಂದು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ ಹೈಕಮಾಂಡೇ ರಾಜ್ಯ ಸರ್ಕಾರಕ್ಕೆ ಸೂಚಿಸುವ ಮೂಲಕ ಅಂಬೇಡ್ಕರ್ ಗೌರವಾರ್ಥದ ಸಮಾರಂಭವನ್ನು ತಡೆದಿದೆ ಎಂದು ದೂರಿದರು.
ಖರ್ಗೆ ಅವರು ಕ್ಷಮೆ ಕೇಳಲಿ:
ರಾಜ್ಯ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರ ಭೀಮ ಹೆಜ್ಜೆ ಶತಮಾನ ಸಂಭ್ರಮ ಆಚರಿಸದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ #Mallikarjun Kharge ಮತ್ತು ಸಚಿವ ಪ್ರಿಯಾಂಕ ಖರ್ಗೆ ಅವರು ದಲಿತ ಸಮುದಾಯದ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
“ಯಾವುದೋ ಒತ್ತಡದಿಂದ ಈ ಪ್ರಮಾದವಾಗಿದೆ. ಇದಕ್ಕಾಗಿ ದೇಶದ ಕ್ಷಮೆ ಕೇಳುತ್ತೇವೆ. ಮುಂದೆ ಯಾವುದೇ ರೀತಿ ಚ್ಯುತಿ ಬರದಂತೆ ಅಂಬೇಡ್ಕರ್ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮಗಳನ್ನು ನಡೆಸುವುದಾಗಿ” ಹೇಳಲಿ ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಿ: ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ, ಅವರು ಮಾಡಿದಂತಹ ಅಪ್ರತಿಮ ಕಾರ್ಯಗಳಿಗೆ, ತ್ಯಾಗ ಬಲಿದಾನಕ್ಕೆ ಗೌರವ ಕೊಟ್ಟು ಖರ್ಗೆ ಅವರು ದೇಶದ ಕ್ಷಮೆಯಾಚಿಸಬೇಕು. ಇನ್ನು ಮುಂದೆಯಾದರೂ ಕಾಂಗ್ರೆಸ್ ಆಡಳಿತ ಇರುವ ಎಲ್ಲಾ ಕಡೆ ಅಂಬೇಡ್ಕರ್ ಅವರ ಕಾರ್ಯಕ್ರಮಗಳನ್ನು ಗೌರವದಿಂದ ಆಚರಿಸುವಂತೆ ಸರ್ಕಾರಗಳಿಗೆ ಸೂಚನೆ ನೀಡಬೇಕು ಎಂದು ಜೋಶಿ ಸಲಹೆ ನೀಡಿದರು.
ಕಾಂಗ್ರೆಸ್‌ನಲ್ಲಿ ಖರ್ಗೆ ಮಾತು ನಡೆಯಲ್ಲ: ನಕಲಿ ಗಾಂಧಿಗಳಿರುವ ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸ್ವತಃ ಎಐಸಿಸಿ ಅಧ್ಯಕ್ಷರೇ ಆಗಿದ್ದರೂ ಅವರ ಮಾತು ಏನೂ ನಡೆಯುವುದಿಲ್ಲ. ರಾಜ್ಯ ಸರ್ಕಾರದಲ್ಲೂ ಅಷ್ಟೇ..ಎಂದು ಟಾಂಗ್ ಕೊಟ್ಟ ಸಚಿವ ಪ್ರಲ್ಹಾದ ಜೋಶಿ, ಮೊದಲು ರಾಜ್ಯದಲ್ಲಿ ಸರ್ಕಾರದಿಂದ ಭೀಮ ಹೆಜ್ಜೆ ಶತಮಾನ ಸಂಭ್ರಮ ಆಚರಿಸದ ಬಗ್ಗೆ ಸಮುದಾಯದ ಕ್ಷಮೆಯಾಚಿಸಲಿ ಎಂದು ಹೇಳಿದರು.
ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕಾರ ಮಾಡಿದಂತಹ ದೀಕ್ಷಾ ಭೂಮಿಯನ್ನು ಅಭಿವೃದ್ಧಿಪಡಿಸಿರುವುದೇ NDA ಸರ್ಕಾರ. ನಕಲಿ ಗಾಂಧಿಗಳಿಂದ ಕೂಡಿದ್ದ ಕಾಂಗ್ರೆಸ್ ಸರ್ಕಾರವಲ್ಲ. ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಇತಿಹಾಸ ಸರಿ ಗೊತ್ತಿದ್ದಂತೆ ಇಲ್ಲ ಎಂದು ಪ್ರಲ್ಹಾದ ಜೋಶಿ ಟೀಕಿಸಿದರು.
ಭಾರತರತ್ನದಂತಹ ಪುರಸ್ಕಾರವನ್ನು ಸ್ವಯಂ ಆಗಿ ತಮಗೆ ತಾವೇ ಘೋಷಿಸಿಕೊಂಡ ಇಂದಿರಾಗಾಂಧಿ, ನೆಹರು ಅವರು ಕೊನೆಗೂ ಅಂಬೇಡ್ಕರ್ ಅವರಿಗೆ ನೀಡಲಿಲ್ಲ. ಕನಿಷ್ಠಪಕ್ಷ ದೆಹಲಿಯಲ್ಲಿ ಅಂಬೇಡ್ಕರ್ ಸ್ಮಾರಕಕ್ಕೆ ಜಾಗ ಸಹ ಕೊಡದಾದರು. ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗುವುದಿಲ್ಲವೇ? ಎಂದು ಜೋಶಿ ಚಾಟಿ ಬೀಸಿದರು.
ಮಹಾತ್ಮಗಾಂಧಿ ಶತಮಾನ ಸಂಭ್ರಮ ಖುಷಿ: ರಾಜ್ಯ ಸರ್ಕಾರ ಮಹಾತ್ಮ ಗಾಂಧಿ ಅವರು ಬೆಳಗಾವಿಗೆ ಬಂದು ಹೋದ ನೆನಪಿಗೆ ಶತಮಾನ ಸಂಭ್ರಮ ಆಚರಿಸಿತು. ಅದೊಂದು ರೀತಿ ಸರ್ಕಾರದ ದುಡ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶದಂತಿತ್ತು. ಏನೇ ಆದರೂ ಬೆಳಗಾವಿಗೆ ಮಹಾತ್ಮಗಾಂಧಿ ಅವರು ಬಂದಿದ್ದನ್ನು ಸ್ಮರಿಸಿತು ಎಂಬುದೇ ಒಂದು ಖುಷಿಯ ವಿಚಾರ. ಆದರೆ, ಅದೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಅಂಬೇಡ್ಕರ್ ಬಂದು ಹೋದ ನೂರು ವರ್ಷದ ನೆನಪನ್ನು ನಕಲಿ ಗಾಂಧಿವಾದಿಗಳ ಮಾತು ಕಟ್ಟಿಕೊಂಡು ಕೈ ಬಿಟ್ಟಿತು ಎಂಬುದು ತೀವ್ರ ನೋವಿನ ಸಂಗತಿ ಎಂದು ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post