ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಸಂವಿಧಾನದ ಬಗ್ಗೆ ಪ್ರತಿಯೊಬ್ಬರಲ್ಲಿ ಗೌರವವಿರಬೇಕು. ಸಂವಿಧಾನದ ಅರಿವು ಬಹಳ ಮುಖ್ಯ. ದೇಶದ ಯುವಕರು ಪ್ರಜಾಪ್ರಭುತ್ವದ ಕಾವಲುಗಾರರಾಗಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.
ಕೆಎಲ್’ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋ ಟೆಕ್ನಾಲಜಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ವಿಷಯದ ಕುರಿತು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಧಾರವಾಡದಲ್ಲಿ ನಾನು ಓದಿದವನು. ಹುಬ್ಬಳ್ಳಿಯ ಜನಜೀವನ, ವಿಶೇಷತೆಗಳು ನನಗೆ ಹಸಿರಾದ ನೆನಪುಗಳನ್ನು ಕಟ್ಟಿಕೊಡುತ್ತವೆ. ವಿದ್ಯಾರ್ಥಿ ಜೀವನ ವ್ಯಕ್ತಿತ್ವ ನಿರ್ಮಾಣಕ್ಕೆ ಧಾರವಾಡ ನನಗೆ ಕೊಟ್ಟಿದೆ. ಇಲ್ಲಿನ ಚಟುವಟಿಕೆಗಳನ್ನು ಮೆಲುಕು ಹಾಕಿದಾಗ ಇವೆಲ್ಲವನ್ನೂ ನಾವು ಮಾಡಿದ್ದೇವಾ ಎಂಬ ಪ್ರಶ್ನೆ ಉದ್ಭವಿಸುತ್ತವೆ ಎಂದರು.
ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಸಂಗೀತದ ಮೇರು ಪರ್ವತವಾಗಿದ್ದಾರೆ. ಧಾರವಾಡ ಪೇಡೆ, ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಸೇರಿದಂತೆ ಅನೇಕ ಸ್ಥಳಗಳು ಹೆಸರುವಾಸಿಯಾಗಿವೆ. ಬೆಂಗಳೂರನ್ನು ಮೀರಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ ಬೆಳೆಯುತ್ತಿದೆ. ಚುನಾವಣಾ ಬಗ್ಗೆ ನಾಡಿನ ಜನತೆಗೆ ತಿಳಿಸುವ ಕೊಡುವ ನಿಟ್ಟಿನಲ್ಲಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಸಂವಾದ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಗುರುದತ್ತ ಹೆಗಡೆ ಅವರು ಅತ್ಯುತ್ತಮ ದಕ್ಷ ಐಎಎಸ್ ಅಧಿಕಾರಿಯಾಗಿದ್ದಾರೆ. 75 ನೆಯ ಸ್ವಾತಂತ್ರವನ್ನು ಮನೆ ಮನೆಯಲ್ಲಿ ತಿರಂಗಾ ಹಾರಿಸುವ ಮೂಲಕ ಆಚರಣೆ ಮಾಡಲಾಯಿತು. ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದವರು ನಮ್ಮ ನಡುವೆ ಇದ್ದಾರೆ. ಬ್ರಿಟಿಷರು, ಪೋರ್ಚುಗೀಸರು, ಡಚ್ಚರು, ಮೊಘಲರು ನಮ್ಮನ್ನು ಆಳಿದ್ದಾರೆ. ಶತಶತಮಾನಗಳ ಕಾಲ ಪರಕೀಯರು ಆಳ್ವಿಕೆ ನಡೆಸಿದ್ದಾರೆ.
ವ್ಯಾಪಾರಕ್ಕಾಗಿ ಬಂದವರು ನಮ್ಮನ್ನು ಆಳಿದರು. ವಿದೇಶಿಗರ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಹೋರಾಟಗಾರರ ಸ್ಮರಣೆಯನ್ನು ನಾವು ಮಾಡಿಕೊಳ್ಳಬೇಕು. ಬ್ರಿಟಿಷರು ಭಾರತೀಯರ ಹೋರಾಟದ ಕಿಚ್ಚನ್ನು ಎದುರಿಸದೇ ನಮಗೆ ಸ್ವಾತಂತ್ರ ನೀಡಿದರು. ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿ ಶಿಕ್ಷಣ ನಮಗೆ ಸಿಗಬೇಕೆಂದು ಶಿಕ್ಷಣ ಬದಲಾವಣೆ ಮಾಡಲಾಗಿದೆ. ಗಾಂಧಿ, ಸುಭಾಷ್ ಚಂದ್ರ ಬೋಸ್, ಮದನ ಲಾಲ್ ಧಿಂಗ್ರ ಅವರ ತ್ಯಾಗ ಬಲಿದಾನ ನೆನಯಬೇಕಾಗಿದೆ ಎಂದು ತಿಳಿಸಿದರು.
ಇತಿಹಾಸದಲ್ಲಿ ನಾವು ಛತ್ರಪತಿ ಶಿವಾಜಿ ಮತ್ತು ಸ್ವಾಮಿ ವಿವೇಕಾನಂದರು ಅವರನ್ನು ಮರೆಯಬಾರದು. ಇವರು ಜಗತ್ತಿಗೆ ನಮ್ಮ ಧೈರ್ಯ ಮತ್ತು ಜ್ಞಾನವನ್ನು ತಿಳಿಸಿಕೊಟ್ಟರು. ವಿದೇಶದಿಂದ ಆಹಾರವನ್ನು ತರಿಸಿಕೊಳ್ಳುತ್ತಿದ್ದೆವು. ಇಂದು ಆಹಾರ ಸ್ವಾವಲಂಬನೆ, ಆಹಾರ ಭದ್ರತೆಯನ್ನು ಸಾಧಿಸಿದ್ದೇವೆ. 30 ಕೋಟಿ ಜನಸಂಖ್ಯೆ ಇದ್ದಾಗ 295 ಕೋಟಿ ತಲಾದಾಯ ಹೊಂದಿದ್ದೇವು. 2018 ರ ಅಂಕಿ ಅಂಶಗಳ ಪ್ರಕಾರ ರೂ. 1, 12,835 ತಲಾದಾಯ ಹೊಂದಿದ್ದೇವೆ. ಚಂದ್ರಯಾನ ಮೂಲಕ ಬಾಹ್ಯಾಕಾಶ ವಿಜ್ಞಾನದಲ್ಲಿ ಸಾಧನೆ ಮಾಡಿದ್ದೇವೆ. ಜಗತ್ತಿನ ವಿಜ್ಞಾನಿಗಳ ಸಾಲಿಗೆ ಸೇರುವ ಮಟ್ಟದಲ್ಲಿ ಭಾರತೀಯ ವಿಜ್ಞಾನಿಗಳು ಸಾಧನೆ ಮಾಡಿದ್ದಾರೆ. ಜಗತ್ತಿನ ಬೇರೆ ಬೇರೆ ದೇಶದವರು ಭಾರತದಲ್ಲಿ ಉತ್ತಮ ಉನ್ನತ ಶಿಕ್ಷಣ ದೊರೆಯುತ್ತಿದೆ ಎಂಬುದನ್ನು ಅರಿತು ಭಾರತಕ್ಕೆ ಬರುತ್ತಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಭಾರತ ಮೈಲಿಗಲ್ಲು ಸಾಧಿಸಲಾಗಿದೆ. ಕೊರೋನಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೊರೋನಾ ಮಹಾಮಾರಿಯನ್ನು ಎದುರಿಸಿದ ರೀತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದೇವೆ ಎಂದರು.
ಆಶಾ, ಅಂಗನವಾಡಿ ಕಾರ್ಯಕರ್ತರು, ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕರೋನಾ ತಡೆಗಟ್ಟಲು ಮುಂದಾಗಿದ್ದರು. ಭಾರತದ 140 ಕೋಟಿ ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಭಾರತ ಗುರುತಿಸಿಕೊಳ್ಳುತ್ತಿದೆ. ವಿವಿಧ ಕ್ರೀಡಾಕೂಟಗಳಲ್ಲಿ ಪದಕಗಳ ಬೇಟೆ ಸಾಧನೆಗೈಯುತ್ತಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನದಿಂದ ಈ ಎಲ್ಲ ಶ್ರೇಷ್ಠ ಸಾಧನೆಗಳು ಆಗಿವೆ. ಸಾಮಾನ್ಯ ಗುಡುಗಾಡು ಪ್ರದೇಶದ ಮಹಿಳೆ ರಾಷ್ಟ್ರದ ರಾಷ್ಟ್ರಾಧ್ಯಕ್ಷರಾಗಿದ್ದಾರೆ, ಚಹಾ ಮಾರುತ್ತಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ ಎಂಬುದು ಸಂವಿಧಾನದ ಕೊಡುಗೆಯಾಗಿದೆ. ದೇಶದಲ್ಲಿ ಬಡತನ, ನಿರುದ್ಯೋಗ, ಭಯೋತ್ಪಾದನೆ ಸೇರಿದಂತೆ ವಿವಿಧ ಸಮಸ್ಯೆಗಳು ಭುಗಿಲೆದ್ದಿವೆ. ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ನಾವು ಪಾಲಿಸಬೇಕಿದೆ ಎಂದು ಪ್ರತಿಪಾದಿಸಿದರು.
ಕಳೆದ 30 ವರ್ಷಗಳಲ್ಲಿ ಹಲವು ಚುನಾವಣೆಗಳನ್ನು ಎದುರಿಸಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಜೆಗಳು ಕರ್ತವ್ಯ ಅರಿತು ಮತ ಚಲಾವಣೆ ಮಾಡಬೇಕು. ಮುಕ್ತ ಮನಸ್ಸಿನಿಂದ ಮತದಾನ ಮಾಡಬೇಕಿದೆ. ನಮಗೆ ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮತಗಳು ವ್ಯಾಪಾರದ ಸರಕಾಗಬಾರದು. ಇಡೀ ಜಗತ್ತಿನಲ್ಲಿ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರ ಮತ್ತೊಂದಿಲ್ಲ. ಬೇರೆ ಬೇರೆ ದೇಶಗಳಲ್ಲಿ ಅರಾಜಕತೆ ಭುಗಿಲೆದ್ದಿವೆ. ಚುನಾವಣಾ ನೀತಿ ಸಂಹಿತೆ ನಿಯಮಗಳನ್ನು ನಾವು ಪಾಲಿಸಬೇಕು. ಪತ್ರಿಕಾ ರಂಗ ಸಂವಿಧಾನದ ನಾಲ್ಕನೇ ಅಂಗವಾಗಿದೆ. ಇತಿಹಾಸವನ್ನು ನಮಗೆ ನೀಡಿದ ಕೀರ್ತಿ ಪತ್ರಿಕಾ ರಂಗಕ್ಕೆ ಸಲ್ಲುತ್ತದೆ. ಪತ್ರಕರ್ತರು, ವೈದ್ಯರು, ವಕೀಲರು ಸೇರಿದಂತೆ ಇತರರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು. ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಿದೆ. ಹಣವನ್ನು ನ್ಯಾಯ ಮಾರ್ಗದಿಂದ ಗಳಿಸಬೇಕು. ನಮ್ಮಲ್ಲಿ ಮೊದಲು ಪರಿವರ್ತನೆ ಆಗಬೇಕು. ಸರ್ಕಾರದ ಸೌಲಭ್ಯಗಳು ಅರ್ಹರಿಗೆ ದೊರೆಯಬೇಕಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸಂವಿಧಾನದ 10 ನೇ ಅನುಸೂಚಿಯಲ್ಲಿ ಸೇರಿಸಲಾಗಿದೆ. ಚುನಾವಣೆ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿದೆ. ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಲಾಯಿತು. ಆಧಾರ್ ಕಾರ್ಡ್’ನ್ನು ಚುನಾವಣಾ ಗುರುತಿನಿ ಚೀಟಿಗೆ ಜೋಡಣೆ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಸರಿ ಎನಿಸದಿದ್ದ ಪಕ್ಷದಲ್ಲಿ ನೋಟಾ ಆಯ್ಕೆ ಮಾಡಬಹುದು. ಚುನಾವಣಾ ಖರ್ಚು ವೆಚ್ಚಕ್ಕೆ ಮಿತಿ ಹಾಕಲಾಗಿದೆ ಎಂದರು.
ಜನರು ಮೊದಲು ಸರಿಯಾದರೆ, ವ್ಯವಸ್ಥೆ ಸರಿಯಾಗುತ್ತದೆ. ಯುವಕರು ನನ್ನ ಮತ ಮಾರಾಟಕ್ಕಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಈ ಅಭಿಯಾನ ಜನಾಂದೋಲನದ ರೀತಿಯಲ್ಲಿ ಬೆಳೆಯಬೇಕು. ಭಾರತವು ಯುವ ದೇಶವಾಗಿದೆ. ಸಮಾಜದಲ್ಲಿನ ಹಿರಿಯರ ವರ್ಗದ ಮೌನ ಬೆಲೆ ತೆರಬೇಕಾಗಿದೆ. ಹಿರಿಯರು ಸಮಾಜದ ಆಗುಹೋಗುಗಳ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹೊರಹಾಕಬೇಕು. ಚುನಾವಣಾ ಆಯೋಗ ವರ್ಷವೀಡಿ ಕಾರ್ಯಪ್ರವೃತ್ತವಾಗಬೇಕು. ಮತದಾರರನ್ನು ಜಾಗೃತಗೊಳಿಸಬೇಕಾಗಿದೆ. ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವ ಶಕ್ತಿಯನ್ನು ಹೊಂದಬೇಕು. ರಾಜಕೀಯ ಪಕ್ಷಗಳು ದೊಡ್ಡ ಜವಾಬ್ದಾರಿ ಅರಿತು ಹೆಜ್ಜೆಯಿಡಬೇಕಿದೆ ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ನಾನು ಕೂಡ ಶಿರಸಿ ವಿಧಾನಸಭಾ ಕ್ಷೇತ್ರದವನು. ಮಕ್ಕಳಿಗೆ ಸಂವಿಧಾನದ ಪ್ರಸ್ತಾವನೆ ಅರ್ಥ ಪೂರ್ಣವಾಗಿ ತಿಳಿಸಿಕೊಡಬೇಕು. ಆದ್ದರಿಂದ ಈ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಮತದಾನದ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕುವೆಂಪು ಅವರ ಚುನಾವಣೆ ಕುರಿತಾದ ಕವನವನ್ನು ವಾಚನ ಮಾಡಿದರು. ಚುನಾವಣೆಯ ಅವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.
ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಅಶೋಕ ತೇಲಿ, ತಾಪಂ ಇಒ ಗಂಗಾಧರ್ ಕಂದಕೂರ್, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೇಕ್ಕೆರಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಶಂಕರಾನAದ ಬನಶಂಕರಿ, ಕೆಎಲ್’ಇ ಟೆಕ್’ನ ರಿಜಿಸ್ಟಾçರ್ ಬಸವರಾಜ ಅನಾಮಿ ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಫಾತೀಮಾ ಪ್ರೌಢಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post