ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನ್ಯಾಯಾಯಲಯದ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯನ್ನು ರಂಗಪ್ಪ ವೃತ್ತದವರೆಗೆ ವಿಶಾಲವಾಗಿ ನಿರ್ಮಿಸುವ ಮೂಲಕ ನಾಗರಿಕರ ಸಂಚಾರಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ನಗರದ ವಕೀಲರ ಸಂಘದವರು ಶಾಸಕ ಬಿ.ಕೆ. ಸಂಗಮೇಶ್ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.
ಸುಂದರ ನಗರದ ನಿರ್ಮಾಣಕ್ಕೆ ಅಗತ್ಯವಾದ ಗುಣಮಟ್ಟದ ವಿಶಾಲ ರಸ್ತೆ ಹಾಗೂ ರಸ್ತೆ ಬದಿ ಸಾಲುಮರಗಳನ್ನು ಬೆಳೆಸುವಿಕೆ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸದರಿ ನ್ಯಾಯಾಲಯದ ರಸ್ತೆ ವಿಶಾಲಗೊಳಿಸುವದರ ಜೊತೆಗೆ ಉತ್ತಮ ಫುಟ್’ಪಾತ್ ಹಾಗೂ ಸದರಿ ರಸ್ತೆಯ ಉಭಯ ಪಾರ್ಶ್ವಗಳಲ್ಲಿ ಸಿಸಿಗಳನ್ನು ನೆಟ್ಟು ಮರಗಳನ್ನು ಬೆಳೆಸಲು ಸೂಕ್ತ ವ್ಯವಸ್ಥೆ ಮಾಡಬೇಕೆಂದು ವಕೀಲರು ಶಾಸಕರಿಗೆ ಮನವಿ ಮಾಡಿ ಮಾತನಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಭದ್ರಾವತಿ ನಗರವನ್ನು ಸುಂದರ ನಗರವನ್ನಾಗಿ ಮಾಡಲು ವಕೀಲರು ತೋರುತ್ತಿರುವ ಆಸಕ್ತಿಗೆ ಸಂತಸವಾಗಿದೆ. ಇದೇ ರೀತಿ ನಗರದ ಬೇರೆ ರಸ್ತೆಗಳಾದ ಸಿಎನ್ ರಸ್ತೆ ಅಗಲೀಕರಣವೂ ಸಹ ಅತ್ಯಗತ್ಯವಾಗಿದ್ದು ಅದಕ್ಕೂ ನಿಮ್ಮ ಸಹಕಾರ ಅಗತ್ಯ. ಭದ್ರಾವತಿಯಲ್ಲಿ ಹಿಂದೆಂದೂ ಕಾಣದಂತಹ ರಸ್ತೆಗಳು ನಿರ್ಮಾಣವಾಗುತ್ತಿದೆ. ಈಗ ನ್ಯಾಯಾಲಯದ ಮುಂದಿರುವ ರಸ್ತೆಯನ್ನು ನಿಗಧಿತವಾದ ಅಳತೆಗೆ ಅಗಲೀಕರಣ ಮಾಡಲು ನನ್ನ ಸಂಪೂರ್ಣ ಸಹಕಾರವಿದೆ. ರಸ್ತೆ ಅಗಲೀಕರಣ ಮಾಡುವಾಗ ಕೆಲವರ ಕಟ್ಟಡಗಳು ಹೋಗುತ್ತವೆ ಎಂದರು.
ಊರಿನ ಒಳಿತಿಗಾಗಿ ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ನಮಗೆ ಸೇರಿದ ಕೆಲವು ಕಟ್ಟಡಗಳು ರಸ್ತೆ ಬದಿಯಲ್ಲಿಯೇ ಯಿವೆ ರಸ್ತೆ ಅಗಲೀಕರಣಕ್ಕೆ ಅವುಗಳ ಕೆಲವು ಭಾಗವನ್ನು ಒಡೆಯಲೇ ಬೇಕಾದ್ದರಿಂದ ನಾವು ಅದಕ್ಕೆ ಸಮ್ಮತಿಸಿದ್ದೇವೆ. ಅದೇ ರೀತಿ ನಾಗರಿಕರು ಸಹ ಇದನ್ನು ಅರ್ಥಮಾಡಿಕೊಂಡು ಸಹಕರಿಸಬೇಕು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಆಯುಕ್ತ ಮನೋಹರ್, ನ್ಯಾಯಾಲಯದ ಎದುರಿಗಿರುವ ಕಟ್ಟಡಗಳ ಮಾಲೀಕರಿಗೆ ನಗರಸಭೆಯಿಂದ ದಾಖಲಾತಿಗಳನ್ನು ಹಾಜರುಪಡಿಸುವಂತೆ ನೋಟೀಸ್ ನೀಡಿದ್ದು, ಅವರು ನೀಡಿರುವ ದಾಖಲಾತಿಗಳನ್ನು ಪರೀಶೀಲಿಸಿ ಆ ಕಟ್ಟಡಗಳು ಅಕ್ರಮವಾಗಿ ನಿರ್ಮಿಸಿದ್ದರೆ ಅವುಗಳನ್ನು ತೆರವುಗೊಳಿಸಲಾಗುತ್ತದೆ. ಒಂದೊಮ್ಮೆ ದಾಖಲಾತಿಯಿದ್ದರೆ ಅವರಿಗೆ ಪರಿಹಾರ ನೀಡಿ ಆಜಾಗವನ್ನು ರಸ್ತೆ ಅಗಲೀಕರಣಕ್ಕೆ ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ. ಈ ಕುರಿತು ಶಾಸಕರು ನಿರ್ಧಾರ ಕೈಗೊಳ್ಳಬೇಕು ಎಂದರು.
ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮಂಜುನಾಥ ಮಾತನಾಡಿ, ನ್ಯಾಯಾಲಯದ ಮುಂದಿರುವ ರಸ್ತೆಯನ್ನು ಅಡ್ಜೆಸ್ಟ್ ಮಾಡಿ ನಿರ್ಮಿಸಲಾಗುತ್ತಿದೆ. ವಿಶಾಲ ರಸ್ತೆ ಮಾಡಬೇಕಾದರೆ ಕೆಲವು ಕಟ್ಟಡಗಳನ್ನು ತೆರವುಗೊಳಿಸಿ ಮಾಡಬೇಕಾಗುತ್ತದೆ ಎಂದರು.
ಶಾಸಕ ಬಿ.ಕೆ. ಸಂಗಮೇಶ್ ಪ್ರತಿಕ್ರಿಯಿಸಿ, ಊರಿನ ಒಳಿತಿಗಿಂತ ಯಾವುದೂ ದೊಡ್ಡದಲ್ಲ ನ್ಯಾಯಾಲಯದ ಮುಂದಿರುವ ರಸ್ತೆ ರಂಗಪ್ಪ ವೃತ್ತದವರೆಗೆ ನಿಗದಿತವಾದ ರೀತಿ ಸಮರ್ಪಕವಾಗಿ ವಿಶಾಲ ರಸ್ತೆ ನಿರ್ಮಾಣಕ್ಕೆ ನಾವು ಬದ್ಧರಿದ್ದು ಈ ದಿಸೆಯಲ್ಲಿ ಅಲ್ಲಿ ರಸ್ತೆ ಬದಿಗೆಯಿರುವ ಕಟ್ಟಡಗಳು ಅಕ್ರಮವಾಗಿದ್ದರೆ ಅದನ್ನು ತೆರವುಗೊಳಿಸಿ ರಸ್ತೆ ನಿರ್ಮಿಸಲಾಗುವುದು. ಒಂದೊಮ್ಮೆ ಆ ಕಟ್ಟಡಗಳ ಮಾಲಿಕರು ಸಮರ್ಪಕವಾದ ದಾಖಲಾತಿ ಹೊಂದಿರುವುದನ್ನು ತೋರಿಸಿದರೆ ಅವರಿಗೆ ಪರಿಹಾರ ನೀಡಿ ಜಾಗವನ್ನು ವಶಪಡಿಸಿಕೊಂಡು ರಸ್ತೆ ನಿರ್ಮಾಣ ಮಾಡುವ ಕುರಿತು ಗಮನಹರಿಸಲಾಗುವುದು. ರಸ್ತೆ ಅಗಲೀಕರಣಕ್ಕೆ ರಸ್ತೆ ಬದಿಯ ಮರಗಳನ್ನು ಕಡಿದಿರುವುದರಿಂದ ರಸ್ತೆ ಅಗಲೀಕರಣವನ್ನು ವಿಶಾಲವಾಗಿ ಮಾಡಲೇಬೇಕಾಗುತ್ತದೆ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ವಿ. ವೆಂಕಟೇಶ್, ಉಪಾಧ್ಯಕ್ಷ ವೈ. ಜಯರಾಂ, ಕಾರ್ಯದರ್ಶಿ ರಾಜು, ಸಹಕಾರ್ಯದರ್ಶಿ ಮೋಹನ್, ಖಜಾಂಚಿ ರಂಗಪ್ಪ ಹಾಗೂ ಹಿರಿಯ ವಕೀಲರಾದ ಎಸ್. ನಾರಾಯಣರಾವ್, ಎಚ್. ಮಹೇಶ್, ಎ.ಟಿ. ರವಿ, ಬಿ.ಎಸ್. ಮಹೇಶ್ ಕುಮಾರ್, ಬಿ.ಎಸ್. ನಾಗರಾಜ, ಎಚ್.ಎಲ್. ವಿಶ್ವನಾಥ್, ಹೇಮಂತ, ಬಸವರಾಜ, ಮುಂತಾದವರು ಶಾಸಕರ ಬೇಟಿಯ ವೇಳೆ ಹಾಜರಿದ್ದು ಸದರಿ ರಸ್ತೆಯ ಅಗಲೀಕರಣದ ಕುರಿತು ಅವರಿಗೆ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸೋಮಶೇಖರ್ ಅವರು ಹಾಜರಿದ್ದರು.
Get in Touch With Us info@kalpa.news Whatsapp: 9481252093
Discussion about this post