ಮೆಲ್ಬೋರ್ನ್: ಇಲ್ಲಿನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೩ನೆಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 215 ರನ್ ಕಲೆ ಹಾಕಿದೆ.
ದಿನದಾಟ ಅಂತ್ಯಕ್ಕೆ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಕ್ರೀಸ್ ಕಾಯ್ದುಕೊಂಡಿದ್ದು, 47 ರನ್ ಗಳಿಸಿರುವ ಕೊಹ್ಲಿ ಅರ್ಧಶತಕದ ಹೊಸ್ತಿಲಲ್ಲಿದ್ದರೆ, 68 ರನ್ ಗಳಿಸಿರುವ ಪೂಜಾರ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಆಸಿಸ್ ವೇಗಿ ಪ್ಯಾಟ್ ಕಮಿನ್ಸ್ ಮೊದಲ ಆಘಾತ ನೀಡಿದರು. 8 ರನ್ ಗಳಿಸಿದ್ದ ಹನುಮ ವಿಹಾರಿ ಅವರನ್ನು ಔಟ್ ಮಾಡಿದರು. ಆದರೆ ಮತ್ತೊಂದು ಬದಿಯಲ್ಲಿದ್ದ ಮಯಾಂಕ್ ಅಗರ್ವಾಲ್ ಮಾತ್ರ ಪದಾರ್ಪಣೆ ಪಂದ್ಯದಲ್ಲೇ ತಮ್ಮ ತಾಕತ್ತು ಪ್ರದರ್ಶನ ಮಾಡಿದರು. ಪೂಜಾರ ಜೊತೆಗೂಡಿದ ಅವರು 76 ರನ್ ಗಳಿಸಿ ಮತ್ತದೇ ಕಮಿನ್ಸ್ ಬೌಲಿಂಗ್ ನಲ್ಲಿ ಔಟ್ ಆದರು.
ಆ ಬಳಿಕ ಜೊತೆಗೂಡಿದ ನಾಯಕ ಕೊಹ್ಲಿ ಮತ್ತು ಪೂಜಾರ ಭಾರತಕ್ಕೆ ಮತ್ತಾವುದೇ ಆಘಾತ ಎದುರಾಗದಂತೆ ನೋಡಿಕೊಂಡರು. ನಿಧಾನಗತಿಯಲ್ಲೇ ಬ್ಯಾಟಿಂಗ್ ಮಾಡಿ ರನ್ ಕಲೆಹಾಕಿದ ಈ ಜೋಡಿ ನಾಳೆಗೆ ಕ್ರೀಸ್ ಕಾಯ್ದುಕೊಂಡಿದೆ.
Discussion about this post