ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಭಾರತದ ಯೋಗ ಪರಂಪರೆಯ ಮಹತ್ವವನ್ನು ಸಾರಿದರು.
ವಿಶ್ವಸಂಸ್ಥೆಯ ಮುಂದೆ ವಿಶ್ವ ಯೋಗದಿನಕ್ಕಾಗಿ ಬೇಡಿಕೆಯನ್ನು ಇಟ್ಟಿದ್ದರು. ಭಾರತದ ಕೋರಿಕೆಗೆ ವಿಶ್ವ ಸಂಸ್ಥೆ ಸಮ್ಮತಿಸಿ, ಪ್ರತಿ ವರ್ಷ ಜೂನ್ 21ರಂದು ವಿಶ್ವ ಯೋಗ ದಿನವೆಂದು ಘೋಷಿಸಿ, ಪ್ರಪಂಚದ್ಯಾದ್ಯಂತ ಆಚರಿಸಲು ಒಪ್ಪಿಗೆ ನೀಡಿತು.
ಕ್ರಿಪೂ 3ನೆಯ ಶತಮಾನದಲ್ಲಿದ್ದ ಪತಂಜಲಿ ಋಷಿಯ ಚಿಂತನೆಯ ಫಲವಾದ ಯೋಗ ಬರೀ ಶಾಸ್ತ್ರವಾಗದೆ, ಆಚರಣೆ, ಅಭ್ಯಾಸವಾಗಿ ಇಲ್ಲಿ ತನಕ ಬೆಳೆದು ಬಂದಿದೆ. ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ. ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.
ಶತ-ಶತಮಾನಗಳ ಭಾರತೀಯ ಪರಂಪರೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ತಿಳಿಯುವ ಸತ್ಯವೆಂದರೆ ಯೋಗ ಅಂದಿನ ಜನರ ಜೀವನದ ಒಂದು ಬಹು ಮುಖ್ಯ ಭಾಗವಾಗಿತ್ತು. ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯದ ಉನ್ನತಿಗೆ ಯೋಗ ಒಂದು ಬಹುಮುಖ್ಯ ಸಾಧನವಾಗಿದೆ. ಅಂದ, ಆರೋಗ್ಯ, ಆಯುಸ್ಸು ವೃದ್ಧಿಗೆ ಯೋಗ ಸಹಾಯಕವಾಗಿವೆ.
ಹಿಂದಿನ ಋಷಿ ಮುನಿಗಳು ಯೋಗವನ್ನು ಕಡ್ಡಾಯವಾಗಿ ಅಧ್ಯಯನ ಮಾಡುತ್ತಿದ್ದರು. ನಿರಂತರವಾಗಿ ಯೋಗ ಅಧ್ಯಯನ ಮಾಡುವುದರಿಂದ ಮನಸ್ಸಿನ ಓಟವನ್ನು ತಡೆಹಿಡಿಯಬಹುದಾಗಿದೆ. ಯೋಗ ಅಧ್ಯಯನದಿಂದ ಏಕಾಗ್ರತೆ ಹೆಚ್ಚುತ್ತದೆ. ದೇಹವನ್ನು ದಂಡಿಸಿ ಅಂಗಾಂಗಗಳನ್ನು ವಿವಿಧ ಭಂಗಿಯಲ್ಲಿ ಬಾಗಿಸುದರಿಂದ ನರಮಂಡಲಗಳಲ್ಲಿ ಸರಾಗವಾಗಿ ರಕ್ತ ಸಂಚಾರವಾಗುತ್ತದೆ ಇದರಿಂದ ಯಾವುದೇ ರೀತಿಯ ದೈಹಿಕ ನ್ಯೂನತೆಗಳು ಪ್ರತಿನಿತ್ಯ ಯೋಗಮಾಡುವ ವ್ಯಕ್ತಿಯನ್ನು ಕಾಡುವುದಿಲ್ಲ.
ಆಧುನಿಕತೆಯ ಪ್ರಭಾವದಿಂದ ನಾವು ತಿನ್ನುವ ಆಹಾರ ನಾವು ಸೇವಿಸುವ ಗಾಳಿ ನಾವು ವಾಸಿಸುವ ಪರಿಸರ ಎಲ್ಲವೂ ಮಾಲಿನ್ಯ ಗೊಳ್ಳುತ್ತಿದೆ. ಆಧುನಿಕ ಯುಗದಲ್ಲಿ ಮನುಷ್ಯ ತನ್ನ ಆರೋಗ್ಯ ವೃದ್ಧಿಗಾಗಿ ಯೋಗದ ಮೊರೆ ಹೋಗುತ್ತಿದ್ದಾನೆ. ಯೋಗಾಭ್ಯಾಸ ವಿಶ್ವಕ್ಕೆ ಭಾರತ ನೀಡಿದ ಅದ್ಬುತ ಕಾಣಿಕೆ. ಪ್ರಾಚೀನ ಋಷಿ ಮುನಿಗಳು ಯೋಗವನ್ನು ಆಸ್ವಾದಿಸಿ ಜಗತ್ತಿಗೆ ಅದರ ಮಹತ್ವವನ್ನು ತಿಳಿಸಿದ್ದಾರೆ.
ಭಾರತದಿಂದ ಜಗತ್ತಿಗೆ ಪರಿಚಯಗೊಂಡ ಯೋಗವನ್ನು ವಿಶ್ವದ ಅನೇಕ ರಾಷ್ಟ್ರಗಳು ಅನುಸರಿಸುತ್ತಿವೆ. ಬೇರೆ ಬೇರೆ ದೇಶದ ಯೋಗ ಆಸಕ್ತರು ಯೋಗ ಶಿಕ್ಷಣವನ್ನು ಕಲಿಯಲು ಭಾರತಕ್ಕೆ ಧಾವಿಸುತ್ತಿದ್ದಾರೆ. ತಾವು ಭಾರತದಲ್ಲಿ ಯೋಗ ಶಿಕ್ಷಣವನ್ನು ಕಲಿತು ತಮ್ಮ ತಮ್ಮ ದೇಶಗಳಿಗೆ ತೆರಳಿ ಅಲ್ಲಿ ಯೋಗ ಶಿಕ್ಷಣವನ್ನು ಆರಂಭಿಸುತ್ತಿದ್ದಾರೆ.
ಭಾರತದಿಂದ ಅನೇಕ ಮಂದಿ ಯೋಗ ಶಿಕ್ಷಕರು ವಿದೇಶಕ್ಕೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಯೋಗ ಅಧ್ಯಯನವನ್ನು ಮಾಡಿಸುತ್ತಿದ್ದಾರೆ. ಯಾವುದೇ ಅಡ್ಡ ಪರಿಣಾಮವಿಲ್ಲದೆ ಆರೋಗ್ಯ ವೃದ್ಧಿಗೆ ಸುಲಭ ಮಾರ್ಗವಾಗಿರುವ ಯೋಗವನ್ನು ಪ್ರತಿಯೊಬ್ಬರು ಅನುಸರಿಸುತ್ತಿದ್ದಾರೆ.
ಭಾರತದ ಸನಾತನ ಯೋಗ ಪರಂಪರೆ ಇಂದು ವಿಶ್ವದಾದ್ಯಂತ ಮಿನುಗುತ್ತಿರುವುದು ಭಾರತೀಯರಾದ ನಮಗೆ ಅತೀವ ಹೆಮ್ಮೆಯ ವಿಷಯವಾಗಿದೆ.
ರವಿಶಂಕರ್ ಗುರೂಜಿ, ಬಾಬಾ ರಾಮ್ ದೇವ್ ಹೀಗೆ ಅನೇಕ ಮಂದಿ ತಮ್ಮ ಸಂಸ್ಥೆಯ ವತಿಯಿಂದ ದೇಶ ವಿದೇಶಗಳಲ್ಲಿ ಯೋಗ ಶಿಬಿರವನ್ನು ಆಯೋಜಿಸಿ ಯೋಗ ತರಬೇತಿಯನ್ನು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದ ಯೋಗ ವಿಶ್ವವ್ಯಾಪಿಯಾಗಲಿ ಜಗತ್ತಿನ ಜನರೆಲ್ಲಾ ಯೋಗ ಕಲಿತು ರೋಗ ಮುಕ್ತ ಜೀವನ ನೆಡಸಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.
ಲೇಖನ: ಗೌರೀಶ್ ಆವರ್ಸೆ
ಚಿತ್ರಕೃಪೆ-ವೀಡಿಯೋ: ಸತೀಶ್ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post