ಜಮ್ಮು: ಭಾರತ, ಕಾಶ್ಮೀರ ಹಾಗೂ ಭಾರತೀಯ ಸೇನೆಯ ವಿರುದ್ಧ ಹೇಳಿಕೆ ನೀಡಿರುವ ಗುಲಾಂ ನಬಿ ಆಜಾದ್ ಹಾಗೂ ಸೈಫುದ್ದೀನ್ ಸೋಜ್ ಪರವಾಗಿ ಕಾಂಗ್ರೆಸ್ ಕ್ಷಮೆ ಕೇಳಿ, ಅವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವನ್ನು ಕಾಂಗ್ರೆಸ್ ತೋರುವುದೇ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಸರ್ಕಾರ ಪತನಗೊಂಡ ನಂತರ ಇದೇ ಮೊದಲ ಬಾರಿಗೆ ಶ್ರೀನಗರಕ್ಕೆ ಭೇಟಿ ನೀಡಿದ ವೇಳೆ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸೈನಿಕರ ಕುರಿತಾಗಿ ಅವಮಾನಕರವಾಗಿ ಮಾತನಾಡಿರುವ ಗುಲಾಂ ನಬಿ ಆಜಾದ್ ಹಾಗೂ ಕಾಶ್ಮೀರದ ವಿಚಾರದಲ್ಲಿ ದೇಶ ವಿರೋಧಿಯಾಗಿ ಹೇಳಿಕೆ ನೀಡಿರುವ ಸೈಫುದ್ದೀನ್ ಸೋಜ್ ಅವರುಗಳ ವಿರುದ್ಧ ಕಾಂಗ್ರೆಸ್ ಕ್ರಮಕೈಗೊಳ್ಳುವುದೇ ಎಂದು ಪ್ರಶ್ನಿಸಿದರು.
ಒಂದೆಡೆ ಆಜಾದ್ ಹೇಳಿರುವುದನ್ನು ನಾನು ಮತ್ತೆ ನನ್ನ ಬಾಯಿಯಿಂದ ಹೇಳಲಾರೆ. ಆದರೆ, ಅವರು ಹೇಳಿಕೆ ನೀಡಿದ ತತಕ್ಷಣ ಎಲ್‌ಇಟಿ ಉಗ್ರ ಸಂಘಟನೆ ಆಜಾದ್ ಅವರ ಹೇಳಿಕೆಯನ್ನು ಬೆಂಬಲಿಸುತ್ತದೆ ಎಂದರೆ ಏನರ್ಥ ಎಂದು ಶಾ ಪ್ರಶ್ನಿಸಿದರು.
ಆಜಾದ್ ಹೇಳಿಕೆ ಹಾಗೂ ಆನಂತರದ ಎಲ್‌ಇಟಿ ಸಮರ್ಥನೆಗೆ ಕಾಂಗ್ರೆಸ್ ಸ್ಪಷ್ಟೀಕರಣ ನೀಡಬೇಕು ಎಂದು ಶಾ ಆಗ್ರಹಿಸಿದರು.
ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ನಿಲುವು ಸರಿಯಾಗಿದೆ. ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವುದು ಸೂಕ್ತ ಎಂದು ಅವರು ಹೇಳಿದ್ದು ಸರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಸೈಫುದ್ದೀನ್ ಸೋಜ್ ವಿರುದ್ದ ಅಮಿತ್ ಶಾ ಕಿಡಿ ಕಾರಿದರು.
ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಇದು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ಹಾಗೆಯೇ ಬಿಜೆಪಿ ಇಂತಹ ಬೆಳವಣಿಗೆಗಳಿಗೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದರು.















