ಅದು ಸುಬ್ರಮಣ್ಯನ ಕ್ಷೇತ್ರ!!! ನಾಗನ ರೂಪದಲ್ಲಿ ಅವನ ನಿತ್ಯ ಆರಾಧನೆ ಅಲ್ಲಿ ನಿತ್ಯ -ನಿರಂತರ. ಸರ್ಪದೋಷದ ಕುರಿತಾಗಿ ಅಪರಿಮಿತ ನಂಬಿಕೆ ಇರುವ ಆಸ್ತಿಕ ವರ್ಗ ಅಲ್ಲಿಗೆ ತೆರಳಿ ಸುಬ್ರಮಣ್ಯನ ದರ್ಶನ ಪಡೆದು ಬಹಳ ಮಡಿಯಿಂದ ಸರ್ಪಸಂಸ್ಕಾರ, ಆಶ್ಲೇಷ ಬಲಿ ಪೂಜೆ ಪುನಸ್ಕಾರಗಳನ್ನು ಮಾಡುವ ಸಂಪ್ರದಾಯ ನಮ್ಮದು! ವರ್ಷಕ್ಕೆ ಒಂದೆರಡು ಬಾರಿ ಹರಕೆ ತೀರಿಸಲೆಂದೇ ಇಂತಹ ಹೆಸರುವಾಸಿ ತೀರ್ಥಕ್ಷೇತ್ರಗಳನ್ನು ಸಂದರ್ಶಿಸುವ ಭಕ್ತರು, ಪೂಜೆ-ದರ್ಶನ-ಪುಣ್ಯ ಸಂಪಾದನೆಯ ನೆಪದಲ್ಲಿ ಆ ಹಸಿರು ಪರಿಸರ-ನದಿ ನಾಲೆಗಳ ಮೇಲೆ ಮಾಡುತ್ತಿರುವ ಅತ್ಯಾಚಾರ ನೋಡಿ ಹೇಳಲಾಗದ ಸಂಕಟ ಆಗಿದೆ…. ದೇವರ ಕುರಿತು,ಧರ್ಮದ ಕುರಿತು ಪೂರ್ಣ ಮಾಹಿತಿ ಇಲ್ಲದ ಡಾಂಭಿಕತನ ನಮ್ಮನ್ನು ಆವರಿಸಿದೆ. Yes, we might have become religious but certainly not spiritual.
ಬೆಳಗ್ಗೆ ಎದ್ದು TV ಹಾಕಿದರೆ ಸಾಕು Almost ಎಲ್ಲಾ ಚಾನಲ್’ಗಳಲ್ಲೂ ಹಣೆ ತುಂಬಾ ಕುಂಕುಮ, ಗಂಧ, ಭಸ್ಮ ಇನ್ನು ಏನೆನೋ ಕರಿದೂ-ಬಿಳುದೂ ಎಲ್ಲಾ ಬಳ್ಕೊಂಡು, ಎಲ್ಲಾ ಬಣ್ಣದ ಮಣಿ-ರುದ್ರಾಕ್ಷಿ ಸರಗಳನ್ನು ಧರಿಸಿ, ತರತರಾವರಿ ವೇಷ ಹಾಕಿಕೊಂಡು ಭವಿಷ್ಯ-ಶಾಸ್ತ್ರ-ಜ್ಞಾನ ಹೇಳಲು ಬರುವ ಮಹರ್ಷಿ-ಯೋಗಿ-ಗುರೂಜಿ ಇನ್ನೂ ಏನೆನೋ ಬಿರುದಾಂಕಿತ ಧರ್ಮಜ್ಞರು ಶಾಸ್ತ್ರ, ಪುರಾಣ, ಆಚಾರ, ವಿಚಾರದ ಕುರಿತು ಗಂಟೆಗಟ್ಟಲೆ ಉಪನ್ಯಾಸ ಮಾಡುವ ಮಧ್ಯೆ ಒಮ್ಮೆಯಾದರೂ ನದಿ-ನಾಲೆಗಳಿಗೆ ಕಸ ಎಸೆದ್ರೆ ತಾಯಿ ಕೊಂದಷ್ಟು ಪಾಪ ಬರತ್ತೆ, ಕಂಡ್ಕಂಡಲ್ಲಿ ಎಣ್ಣೆ ಕುಡ್ದು ಬಾಟ್ಲಿ ಬಿಸಾಡಿದ್ರೆ ತಂದೆ ಕೊಂದಷ್ಟು ಪಾಪ ಬರತ್ತೆ. ಹಳೆ ಬಟ್ಟೆಗಳನ್ನು ಹರಿಯುವ ನೀರಿಗೆ ಬಿಸಾಡಿದ್ರೆ ಅಯ್ಯಪ್ಪ ಶಾಪ ಕೊಡ್ತಾನೆ, ಊಟ -ಅನ್ನ ಸಂತರ್ಪಣೆಗಳಲ್ಲಿ ಪ್ಲಾಸ್ಟಿಕ್ ಲೋಟ-ಬಾಟ್ಲು ಉಪಯೋಗಿಸಿದ್ರೆ ಅನ್ನದಾನ ಮಾಡಿದ ಪುಣ್ಯ ಬರೊದಿಲ್ಲ, ದೇವರಿಗೆ ಸಮರ್ಪಿಸಿದ ಹಳೆಯ ಹೂವುಗಳನ್ನು(ನೈಮಾಲ್ಯ) ಪ್ಲಾಸ್ಟಿಕ್ ಕವರ್’ನಲ್ಲಿ ಸುತ್ತಿ ಹರಿಯುವ ನದಿಗೆ ಎಸೆದ್ರೆ ರೌರವ ನರಕ ಬರತ್ತೆ ಅಂತ ಒತ್ತಿ ಒತ್ತಿ ಹೇಳಿದ್ರೆ ಇವತ್ತು ನಮ್ಮ ಪುಣ್ಯಕ್ಷೇತ್ರಗಳಿಗೆ ಇಂತ ಶೋಚನೀಯ ಸ್ಥಿತಿ ಬರ್ತಿರ್ಲಿಲ್ಲ ಅಂತ ಅನ್ಸತ್ತೆ.
ಇನ್ನು, ನಮ್ಮ ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸುವ ಅರ್ಚಕರು, ಪುರೋಹಿತರು ತಾವು ಮಾಡಿಸುವ ಪೂಜೆ-ಆಚರಣೆಯಲ್ಲಿ ಪರಿಸರಕ್ಕೆ ಸಂಬಂಧಪಟ್ಟ ವಿಷಯಗಳನ್ನು ಗಮನಿಸಲೇಬೇಕಾದ ಅನಿವಾರ್ಯತೆ ಈಗ ಬಂದಿದೆ.
ಪ್ಲಾಸ್ಟಿಕ್ ಲೋಟ-ದೊನ್ನೆಗಳಲ್ಲಿ ಪ್ರಸಾದ ಹಂಚುವ ಕೆಲಸ ಮೊದಲು ನಿಲ್ಲಬೇಕು…. ಪ್ಲಾಸ್ಟಿಕ್ ಕವರ್’ನಲ್ಲಿ ದೇವರಿಗಾಗಿ ತಂದಿರುವ ಹಣ್ಣು ಕಾಯಿಗಳನ್ನು ಅವರು ಮುಟ್ಟಲೂ ಬಾರದು.
ನದಿ -ನೆಲವನ್ನು ತಾಯಿ ಎಂದು ಭಾವಿಸುವ ಸಂಸ್ಕೃತಿ ನಮ್ಮದು. ಬರೀ ಹಣೆಗೆ ಕುಂಕುಮವಿಟ್ಟು ಕೇಸರಿ ಶಾಲು ಹೊದ್ದರೆ ಸಾಕಾಗುವುದಿಲ್ಲ…… ಒಂದು ಪ್ಲಾಸ್ಟಿಕ್ ಕಸ ಎಸೆಯುವುದಕ್ಕೂ ಆ ಭಾವನೆ ನಮ್ಮನ್ನು ಬಿಡಲೇಬಾರದು ಆಗ ಮಾತ್ರ ನಾವು ನಿಜರ್ಥದಲ್ಲಿ ಧಾರ್ಮಿಕರೆಂದು ಬೀಗಬಹುದೇನೋ….
ಯುವಾ ಬ್ರಿಗೇಡ್ ಮಿತ್ರರು ಶ್ರೀ ಚಕ್ರವರ್ತಿ ಸೂಲಿಬೆಲೆಯವರ ಸಾರಥ್ಯದಲ್ಲಿ ಸುಬ್ರಮಣ್ಯ ಶ್ರೀಕ್ಷೇತ್ರದಲ್ಲಿ ಹರಿಯುವ ಕುಮಾರಧಾರ ನದಿಯ ಒಡಲಿನಿಂದ ಕಸದ ಕಣಜವನ್ನೇ ಹೊರ ತೆಗೆದು ನಮ್ಮ ಮುಂದೆ ಪೇರಿಸಿಟ್ಟಿದ್ದಾರೆ!!
ನಮ್ಮದೇ ದೇವರ ಸನ್ನಿಧಿಯಲ್ಲಿ, ನಮ್ಮ ಶ್ರದ್ಧೆಯ ನೆಲದಲ್ಲಿ, ನಾವು ಮಾಡಿರುವ ಘನಂಧಾರಿ ಕೆಲಸವನ್ನು ಎತ್ತಿ ಹಿಡಿದಿದ್ದಾರೆ. ಅಸಲಿಗೆ ಇವು ಕಸಗಳಲ್ಲ! ತಾವು ಮಹಾ ಧಾರ್ಮಿಕರೆಂದು ಬೀಗುವ ಭಕ್ತರ ಮನಃಸ್ಥಿತಿಗೆ ಹಿಡಿದ ಕನ್ನಡಿ!!! ದೇವಸ್ಥಾನದಲ್ಲಿರುವ ದೇವರನ್ನು ಮೆಚ್ಚಿಸುವ ಭರಾಟೆಯಲ್ಲಿ ಪ್ರಕೃತಿಯ ಕಣ ಕಣದಲ್ಲಿ ಬೆರೆತುಹೋಗಿರುವ ಭಗವಂತನನ್ನು ಕಾಣುವಲ್ಲಿ ನಾವು ಕುರುಡಾಗಿದ್ದೇವೆ. ಇದಲ್ಲವೇ ನಮ್ಮ ಆಶಾಡಭೂತಿಯ ಪರಮಾವಧಿ?!!!! ಈಗಾದ್ರು ಗೊತ್ತಾಯ್ತಾ ಮೋದಿಯವರ ಸ್ವಚ್ಛಭಾರತ ಅಭಿಯಾನದ ಕಲ್ಪನೆಯ ಮಹತ್ವ?!!
-ವಿನಯ್ ಶಿವಮೊಗ್ಗ
Discussion about this post