ಶ್ರೀನಗರ: ಜಮ್ಮು ಕಾಶ್ಮೀರದಲ್ಲಿರುವ ಭಾರತ ಪಾಕ್ ಅಂತರ ರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ಥಾನ ಯೋಧರು ನಡೆಸಿದ ಅಪ್ರಚೋದಿತ ದಾಳಿಗೆ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯ ಇಬ್ಬರು ಯೋಧರು ವೀರಸ್ವರ್ಗ ಸೇರಿದ್ದಾರೆ.
ಜಮ್ಮು ಕಾಶ್ಮೀರದ ಅಂಕೋರ್ ಸೆಕ್ಟರ್‌ನಲ್ಲಿ ನಿನ್ನೆ ತಡರಾತ್ರಿ ಪಾಕ್ ನಡೆಸಿದ ದಾಳಿಯಲ್ಲಿ ಶತ್ರುಗಳ ಗುಂಡಿಗೆ ಎದೆಕೊಟ್ಟ ಇಬ್ಬರು ಯೋಧರು ತಾಯಿ ಭಾರತಿಯ ಪಾದಗಳಲ್ಲಿ ಲೀನವಾಗಿದ್ದಾರೆ.
ಭಾರತ-ಪಾಕ್ ಗಡಿಯಲ್ಲಿ ಶಾಂತಿ ಕಾಪಾಡಬೇಕು ಎಂಬ ಉದ್ದೇಶದಿಂದ ಎರಡೂ ದೇಶಗಳು ಒಂದು ದಿನದ ಹಿಂದೆಯಷ್ಟೇ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಪಾಪಿ ಪಾಕಿಸ್ಥಾನ ಬೆನ್ನ ಹಿಂದೆಯೇ ತನ್ನ ಕುತಂತ್ರಿ ಬುದ್ದಿಯನ್ನು ತೋರಿದೆ.
ಇದರ ಜೊತೆಯಲ್ಲೇ ಗಡಿಯಲ್ಲಿ ನಿನ್ನೆ ತಡರಾತ್ರಿ ಶತ್ರುಗಳ ನಾಗರಿಕ ವಸತಿ ಪ್ರದೇಶಗಳ ಮೇಲೆ ಗ್ರೆನೇಡ್ ದಾಳಿಯನ್ನೂ ನಡೆಸಿದ್ದಾರೆ ಎನ್ನಲಾಗಿದೆ.
ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಯಲ್ಲಿ ಉಗ್ರರು ನಡೆಸಿದ ಗ್ರೆನೇಡ್ ದಾಳಿಗೆ ಸಿಆರ್‌ಪಿಎಫ್‌ನ ನಾಲ್ವರು ಯೋಧರು ಹಾಗೂ ನಾಲ್ವರು ನಾಗರಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಸಿಆರ್‌ಪಿಎಫ್ ವಾಹನಗಳನ್ನು ಗುರಿಯಾಗಿಸಿಕೊಂಡು ಗ್ರೆನೇಡ್ ದಾಳಿ ನಡೆಸಲಾಗಿದ್ದು, ಸೇನಾ ವಾಹನದ ಅಡಿಯಲ್ಲಿ ಸಿಲುಕಿ ಪ್ರತಿಭಟನಾಕಾರ ಸತ್ತ ಎಂಬ ಕಾರಣಕ್ಕಾಗಿ ಪ್ರತಿಕಾರ ತೆಗೆದುಕೊಂಡಿದ್ದಾರೆ ಎನ್ನಲಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
Discussion about this post