ಕಲ್ಪ ಮೀಡಿಯಾ ಹೌಸ್ | ಕನಕಪುರ |
ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ನೀಡಿ ಎಂದು ನಾನು ಎಂದೂ ಕೇಳಿರಲಿಲ್ಲ. ಅಂತಹ ಮನಸ್ಥಿತಿಯೂ ನನ್ನದಲ್ಲ. ಕನಕಪುರಕ್ಕೆ ಮುಂದಿನ ದಿನಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ಯೋಜನೆ ಮಂಜೂರಾತಿ ಮಾಡಲು ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ Health Minister Dr. Sudhakar ಸ್ಪಷ್ಪಪಡಿಸಿದರು.
ಇನ್ಫೋಸಿಸ್ ಫೌಂಡೇಶನ್ ಸಹಯೋಗದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಕನಕಪುರದಲ್ಲಿ ನಿರ್ಮಾಣವಾದ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

ಕನಕಪುರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ನೀಡಲು ನಾನು ಎಂದೂ ಕೇಳಿರಲಿಲ್ಲ. ಅಂತಹ ಮನಸ್ಥಿತಿ ನನಗಿಲ್ಲ. ಹಿಂದಿನ ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಇದನ್ನು ಘೋಷಿಸಲಾಗಿತ್ತು. ನಂತರ ಬಿ.ಎಸ್.ಯಡಿಯೂರಪ್ಪನವರು ಅನುದಾನ ನೀಡಿದರು. ಮುಂದಿನ ದಿನಗಳಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡಲು ಎಲ್ಲಾ ಬಗೆಯ ಪ್ರಯತ್ನ ಮಾಡಲಾಗುವುದು ಎಂದರು.

Also read: ವಿಐಎಸ್‌ಎಲ್ ಉಳಿಸಲು ಪ್ರಧಾನಿಯವರ ಮನವೊಲಿಸುವಂತೆ ಆದಿಚುಂಚನಗಿರಿ ಶ್ರೀಗಳಿಗೆ ಕಾರ್ಮಿಕರ ಮನವಿ
ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯದ ಅಭಿವೃದ್ಧಿಯನ್ನು ಸರ್ಕಾರವೇ ಮಾಡಬೇಕೆಂದು ಬಯಸುವುದು ತಪ್ಪು. ವಿವಿಧ ಸಂಘ, ಸಂಸ್ಥೆಗಳ ಸಹಕಾರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು ಅಗತ್ಯ. ದೇಶದಲ್ಲಿ 2014 ರಿಂದ 2021 ರವರೆಗೆ, 1 ಲಕ್ಷ ಕೋಟಿ ರೂ.ಗೂ ಅಧಿಕ ಸಿಎಸ್‌ಆರ್ ನಿಧಿಯನ್ನು ವಿವಿಧ ಕಾರ್ಯಗಳಿಗೆ ಬಳಸಲಾಗಿದೆ. ಅದರಲ್ಲೂ ಕರ್ನಾಟಕ, ಆಂಧ್ರಪ್ರದೇಶ ಮೊದಲಾದ ದಕ್ಷಿಣದ ರಾಜ್ಯಗಳಲ್ಲಿ ಶೇ.33 ರಷ್ಟನ್ನು ಬಳಸಲಾಗಿದೆ. ಆರೋಗ್ಯ, ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಹೆಚ್ಚು ಒತ್ತು ದೊರೆತಿದೆ ಎಂದರು.

ಇದಕ್ಕಾಗಿ ಜಿಲ್ಲೆ, ತಾಲೂಕು ಮಟ್ಟದಲ್ಲೂ ಸಮಸ್ಯೆಗಳನ್ನು ಗುರುತಿಸಿ ಕ್ರಮ ವಹಿಸಲಾಗಿದೆ. ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪನವರು, 125 ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದು, ಅದರಂತೆ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ನಗರದ ಬಡವರಿಗೆ ನಮ್ಮ ಕ್ಲಿನಿಕ್ ನೀಡಿರುವುದು ಹೊಸ ಪರಿಕಲ್ಪನೆಯಾಗಿದೆ. ನಗರದ ಬಡವರಿಗೆ ಪ್ರಾಥಮಿಕ ಆರೋಗ್ಯ ಸೇವೆ ನೀಡುವ ಕೇಂದ್ರಗಳು ಈವರೆಗೆ ಇರಲಿಲ್ಲ. 438 ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲುದ್ದೇಶಿಸಿದ್ದು, 118 ಕ್ಲಿನಿಕ್‌ಗಳು ಕಾರ್ಯಾರಂಭವಾಗಿದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, 600 ಕ್ಕೂ ಹೆಚ್ಚು ಹಾಸಿಗೆಗಳ ಆಸ್ಪತ್ರೆಯನ್ನು ರಾಮನಗರದಲ್ಲಿ ನಿರ್ಮಿಸಲಾಗಿದೆ. ಜೊತೆಗೆ ಹೊಸ ಮೆಡಿಕಲ್ ಕಾಲೇಜು ನೀಡಲು ನಿರ್ಧಾರವಾಗಿದೆ. ಸಿಂಡಿಕೇಟ್‌ನಲ್ಲೂ ಅದು ಒಪ್ಪಿಗೆ ಪಡೆದು, ಮುಂದಿನ ತಿಂಗಳಲ್ಲಿ ಶಿಲಾನ್ಯಾಸ ನೆರವೇರುವ ಸಾಧ್ಯತೆ ಇದೆ ಎಂದರು.
ಬಿಜೆಪಿ ಪ್ರಣಾಳಿಕೆಗೆ ಸಂಬಂಧಿಸಿದಂತೆ ತಂಡದವರೊಂದಿಗೆ ಚರ್ಚೆ ನಡೆಸಲಾಗಿದೆ. ನಾಳೆ ಮತ್ತೊಂದು ಸಭೆ ನಡೆಯಲಿದೆ. ಇದರಲ್ಲಿ ಯಾರನ್ನು ಭೇಟಿ ಮಾಡಿ ಚರ್ಚಿಸಬೇಕೆಂದು ತೀರ್ಮಾನವಾಗಲಿದೆ. ಅತ್ಯಂತ ನೈಜ ಹಾಗೂ ನೂರಕ್ಕೆ ನೂರು ಅನುಷ್ಠಾನವಾಗುವಂತಹ ಅಂಶಗಳು ಪ್ರಣಾಳಿಕೆಯಲ್ಲಿ ಇರಲಿದೆ ಎಂದರು.
ಅಧಿಕಾರದ ಬಗ್ಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಹೇಳಿರುವುದು ಅವರ ಅಭಿಪ್ರಾಯವಾಗಿದೆ. ಅದು ರಾಜ್ಯದ ಜನರ ಅಭಿಪ್ರಾಯವಲ್ಲ. ಮುಂದಿನ ಚುನಾವಣೆಯಲ್ಲಿ ಜನರು ಅಭಿಪ್ರಾಯ ಹೇಳುತ್ತಾರೆ. ಸಿದ್ದರಾಮಯ್ಯನವರ ಸರ್ಕಾರದ ತಂಡವನ್ನು 2018 ರಲ್ಲೇ ಜನರು ಮನೆಗೆ ಕಳುಹಿಸಿದ್ದಾರೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post