ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರಭು ಶ್ರೀರಾಮ ಹಿಂದೂಗಳ ಹೆಮ್ಮೆಯ ಆರಾಧ್ಯ ದೈವವಾಗಿದ್ದು ರಾಮಾಯಣ ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿದೆ. ರಾಮಾಯಣ ಎಂಬ ಶ್ರೀರಾಮನ ಕಥೆಯನ್ನು ಹೇಳುವ ಬೃಹದ್ಕಾವ್ಯವನ್ನು ರಚಿಸಿದ್ದು ಮಹರ್ಷಿ ವಾಲ್ಮೀಕಿಯವರು. ಈ ಮಹಾನ್ ಕಾವ್ಯವು ಒಟ್ಟು 24000 ಶ್ಲೋಕ ಹಾಗೂ 7 ಕಾಂಡಗಳಿಂದ ರೂಪುಗೊಂಡಿದ್ದು ರಾಮನ ಮಕ್ಕಳಾದ ಲವ-ಕುಶರಿಂದ ಈ ಕಾವ್ಯ ಪ್ರಚಲಿತವಾಗಿದೆ. ರಾಮಾಯಣ ಭಾರತದ ಸಂಸ್ಕೃತಿ ಮತ್ತು ಕಲೆ ಮೇಲೆ ಅತ್ಯಂತ ಪ್ರಭಾವ ಬೀರಿದ್ದು ನಮ್ಮ ದೇಶದ ಪ್ರಮುಖ ಸಾಹಿತ್ಯ ಕೃತಿಗಳಲ್ಲಿ ಒಂದಾಗಿದೆ.
ರಾಮ ಎಂಬ ಎರಡು ಅಕ್ಷರದ ಮಹಾಮಹಿಮೆಯನ್ನು ದಾಸ ಶ್ರೇಷ್ಟರಲ್ಲಿ ಒಬ್ಬರಾದ ಪುರಂದರ ದಾಸರು ಬಹಳ ಅರ್ಥಗರ್ಭಿತವಾಗಿ ತಿಳಿಸಿದ್ದಾರೆ. ರಾ ಎಂಬ ಅಕ್ಷರ ಉಚ್ಚರಿಸುವುದರಿಂದ ನಾವು ಬದುಕಿರುವವರೆಗೂ ನಮ್ಮ ದೇಹದ ರಕ್ತ ಮಾಂಸಗಳಲ್ಲಿ ಅಡಗಿ ಕುಳಿತಿರುವ ಅನೇಕ ಪಾಪ ಶೇಷಗಳೆಲ್ಲಾ ಹೊರ ಹೋಗಿ ಶರೀರ ಮತ್ತು ಮನಸ್ಸನ್ನು ಶುದ್ಧಿಗೊಳಿಸಿದರೆ ಮ ಎಂಬ ಅಕ್ಷರ ಉಚ್ಚರಿಸುವುದರಿಂದ ಹೊರಬಿದ್ದ ಪಾಪಗಳು ಮತ್ತೆ ದೇಹ ಸೇರದಂತೆ ಕವಚವಾಗಿ ನಮ್ಮ ದೇಹವನ್ನು ರಕ್ಷಿಸುತ್ತದೆ ಎಂದು ಪುರಂದರು ತಮ್ಮ ದಾಸವಾಣಿಯಲ್ಲಿ ವರ್ಣಿಸಿತ್ತಾ ಭೂಮಿಯಲ್ಲಿ ರಾಮನಾಮಕ್ಕಿಂತ ಮಿಗಿಲಾದ ಮತ್ತೊಂದು ಮಂತ್ರವಿಲ್ಲ ಎಂದು ಕಾಶಿ ವಿಶ್ವನಾಥನು ಅರಿತಿರುವ ಎಂದು ಹೇಳಿದ್ದಾರೆ.
ಶ್ರೀವಿಷ್ಣು ಸಹಸ್ರನಾಮವನ್ನು ಪಠಿಸಲು ಬೇಕಾಗುವ ಸಮಯನ್ನು ಕಡಿಮೆಗೊಳಿಸಲು ಅನ್ಯ ಮಾರ್ಗವಿದ್ದರೆ ತಿಳಿಸಬೇಕಾಗಿ ಎಂದು ಪಾರ್ವತಿಯು ಶಿವನನ್ನು ಕೋರುತ್ತಾಳೆ. ಪಾರ್ವತಿಯ ಮನವಿಯನ್ನು ಸ್ವೀಕರಿಸಿದ ಪರಮೇಶ್ವರನು ರಾಮನಾಮವು ವಿಷ್ಣು ಸಹಸ್ರನಾಮಕ್ಕೆ ಸಮವೆಂದು ಅನುಗ್ರಹಿಸುತ್ತಾನೆ.
ಭಗವಂತ ಶ್ರೀರಾಮನಾಗಿ ಮಾನವ ರೂಪದಲ್ಲಿ ಅವತರಿಸಲು ಹಾಗೂ ಸೀತಾಮಾತೆಯನ್ನು ಪುನಃ ಪಡೆಯಲು ನಮ್ಮ ಕರುನಾಡಿನ ಇಬ್ಬರು ಮಹಾನ್ ದಿವ್ಯ ಪುರುಷರ ಅತಿದೊಡ್ಡ ಪಾತ್ರವಿದೆ.
ಭಗವಂತ ಶ್ರೀರಾಮನಾಗಿ ಅವತರಿಸಿದ ಬಗೆ
ಅಂಗ ದೇಶದ ದೊರೆ ರೋಮಪಾದನು ದಶರಥ ಮಹಾರಾಜನ ಉಪಪತ್ನಿಯಿಂದ ಕೆಟ್ಟ ನಕ್ಷತ್ರದಲ್ಲಿ ಜನ್ಮಪಡೆದ ಶಾಂತಾ ಎಂಬ ಹೆಣ್ಣು ಮಗುವನ್ನು ದತ್ತು ಪಡೆಯುತ್ತಾನೆ ತತ್ಪರಿಣಾಮವಾಗಿ ಅಂಗದೇಶದಲ್ಲಿ 12 ವರ್ಷಗಳ ಕಾಲ ಭೀಕರ ಕ್ಷಾಮ ಬರಗಾಲ ಉಂಟಾಗುತ್ತದೆ ಎಲ್ಲೆಂದರಲ್ಲಿ ಸಾವು ನೋವು, ಅರಾಜಕತೆ, ಅಶಾಂತಿ, ಹಸಿವುಗಳ ಕೂಗು ಮುಗಿಲು ಮುಟ್ಟಿರುತ್ತದೆ. ಇಂತಹ ಸಂಕಷ್ಟ ಸಮಯದಲ್ಲಿ ತ್ರಿಲೋಕ ಸಂಚಾರಿ ನಾರದ ಮುನಿಗಳು ಅಂಗದೇಶಕ್ಕೆ ಭೇಟಿ ಕೊಡುತ್ತಾರೆ. ಕ್ಷಾಮದಿಂದ ಕಂಗೆಟ್ಟಿದ್ದ ರಾಜ ರೋಮಪಾದನು ನಾರದರರಿಗೆ ಅರ್ಘ್ಯ ಪಾದ್ಯಾದಿ ಉಪಚಾರಗಳಿಂದ ಸ್ವಾಗತಿಸಿ ಕ್ಷಾಮ ನಿವಾರಣೆಗಾಗಿ ಸಲಹೆ ಪಡೆಯುತ್ತಾನೆ. ಅಂತೆಯೇ ನಾರದರು ಮಹಾನ್ ತಪಸ್ವಿ ಋಷ್ಯಶೃಂಗರನ್ನು ಕರೆಸಿ ಪರ್ಜನ್ಯ ಯಾಗವನ್ನು ಮಾಡುವಂತೆ ತಿಳಿಸುತ್ತಾನೆ.
ರಾಜ ರೋಮಪಾದನು ಮಹಾಮಹಿಮ ನೈಷ್ಠಿಕ ಬ್ರಹ್ಮಚಾರಿಗಳಾದ ಋಷ್ಯಶೃಂಗ ಮುನಿಗಳನ್ನು ಅಂಗದೇಶಕ್ಕೆ ಕರೆಸಿಕೊಳ್ಳುತ್ತಾನೆ. ಋಷ್ಯಶೃಂಗರ ಪಾದ ಅಂಗದೇಶವನ್ನು ಸ್ಪರ್ಶಿಸುತ್ತಲೇ ಮಳೆ ಧಾರಾಕಾರವಾಗಿ ಸುರಿಯಲಾರಂಭಿಸುತ್ತದೆ. ರಾಜನ ಮನವಿಯಂತೆ ಮುನಿಗಳು ಪಾರ್ಜನ್ಯಯಾಗವನ್ನು ಮಾಡಿ ದೇಶವನ್ನು ಮಳೆಯಿಂದ ಸಮೃದ್ಧವನ್ನಾಗಿ ಇರಿಸುತ್ತಾರೆ. ರೋಮ ಪಾದನು ನಾರದರಿಗೆ ಕೊಟ್ಟ ಮಾತಿನಂತೆ ಋಷ್ಯಶೃಂಗರಿಗೆ ತನ್ನ ಮಗಳಾದ ಶಾಂತಾಳನ್ನು ಕೊಟ್ಟು ಮದುವೆ ಮಾಡುತ್ತಾನೆ ಋಷ್ಯಶೃಂಗರ ತಪಃಶಕ್ತಿಯಿಂದ ಅಂಗದ ದೇಶವು ಸುಭೀಕ್ಷವಾಗಿರುತ್ತದೆ.
ಇದೇ ಸಮಯದಲ್ಲಿ ಸಕಲ ವೈಭವದಿಂದ ರಾಜ ದಶರಥನು ಅಯೋಧ್ಯೆಯನ್ನು ಆಳುತ್ತಿರುತ್ತಾನೆ. ಆದರೆ ಪುತ್ರ ಸಂತಾನವಿಲ್ಲದೆ ಬಹಳ ಕೊರಗುತ್ತಿರುತ್ತಾನೆ. ತನ್ನ ಆಸ್ಥಾನದ ಮಂತ್ರಿ ಸುಮಂತ್ರಾನ ಬಳಿ ಅಶ್ವಮೇಧಯಾಗ ಮಾಡಿ ತನ್ನ ಪಾಪ ಕಳೆದುಕೊಂಡು ಸಂತಾನವನ್ನು ಹೊಂದುವ ಬಗ್ಗೆ ಹೇಳಿಕೊಳ್ಳುತ್ತಾನೆ. ರಾಜ ದಶರಥನ ಮಾತನ್ನು ಕೇಳಿದ ಮಂತ್ರಿಯು ಪಕ್ಕದ ರಾಜ್ಯದಲ್ಲಿರುವ ಋಷ್ಯಶೃಂಗರ ಮಹಿಮೆಯ ಬಗ್ಗೆ ತಿಳಿಸುತ್ತಾನೆ. ವಿಷಯವನ್ನು ಅರಿತ ದಶರಥನು ಆಸ್ಥಾನದ ಋಷಿ ಮುನಿಗಳಾದ ವಸಿಷ್ಠ ಹಾಗೂ ವಿಶ್ವಾಮಿತ್ರರ ಸಲಹೆಯಂತೆ ಋಷ್ಯಶೃಂಗರನ್ನು ಸ್ವತಃ ತಾನೇ ಹೋಗಿ ಅಯೋಧ್ಯೆಗೆ ಕರೆ ತರುತ್ತಾನೆ.
ಅಯೋಧ್ಯೆಗೆ ಬಂದ ಋಷ್ಯಶೃಂಗರು ದಶರಥನ ಕೊರಗನ್ನು ಅರಿತು ಅಥರ್ವಣ ವೇದೋಕ್ತ ಕ್ರಮವಾದ ಪುತ್ರಕಾಮೇಷ್ಠಿ ಯಾಗವನ್ನು ಮಾಡುತ್ತಾರೆ. ಯಾಗದಿಂದ ಪ್ರಸನ್ನನಾದ ಯಜ್ಙೇಶ್ವರನು ಚಿನ್ನದ ಪಾತ್ರೆಯಲ್ಲಿ ಪಾಯಸದೊಂದಿಗೆ ಬೆಂಕಿಯಿಂದಲೇ ಪ್ರಕಟಗೊಳ್ಳುತ್ತಾನೆ. ತಾನು ತಂದ ಪಾಯಸವನ್ನು ದಶರಥನಿಗೆ ಕೊಟ್ಟು ಅವನ ಮೂರೂ ಜನ ಪತ್ನಿಯರಿಗೆ ಹಂಚಲು ತಿಳಿಸುತ್ತಾನೆ. ಪಾತಸ ಸೇವಿಸದ ಕೌಸಲ್ಯ ಕೈಕೆ ಸುಮಿತ್ರೆಯರು ಗರ್ಭವತಿಯರಾಗುತ್ತಾರೆ. ಋಷ್ಯಶೃಂಗರು ನಡೆಸಿದ ಪುತ್ರಕಾಮೇಷ್ಠಿ ಯಾಗದ ಪರಿಣಾಮವಾಗಿ ಶ್ರೀವಿಷ್ಣುವೇ ರಾಮನಾಗಿ, ಶೇಷನೇ ಲಕ್ಷ್ಮಣನಾಗಿ, ಶಂಖ ಚಕ್ರಗಳೇ ಭರತ ಶತ್ರುಘ್ನರನ್ನಾಗಿ ದಶರಥನು ಸತ್ಸಂತಾನವನ್ನು ಪಡೆಯುತ್ತಾನೆ. ಕೌಸಲ್ಯ ಕಂದನಾಗಿ ಶ್ರೀರಾಮನು ವಿಳಂಬಿ ನಾಮ ಸಂವತ್ಸರ, ಉತ್ತರಾಯನ ವಸಂತ ಋತು, ಚೈತ್ರ ಮಾಸ ಶುಕ್ಲ ಪಕ್ಷ ನವಮಿಯ ಬುಧವಾರದಂದು ಕರ್ಕಾಟಕ ಲಗ್ನ ಅಧಿತಿದೇವಾತ್ಮಕವಾದ ಪುನರ್ವಸು ನಕ್ಷತ್ರ 4ನೇ ಪಾದ, ಚಂದ್ರನು ಸುಕ್ಷೇತ್ರಗತನಾಗಿದ್ದಾಗ ರವಿ, ಕುಜ, ಗುರು, ಶುಕ್ರ ಮತ್ತು ಶನಿಗ್ರಹಗಳು ತಮ್ಮ ಉಚ್ಚರಾಶಿಯಲಿದ್ದಾಗ ರಾಮನ ಅವತಾರವಾಯುತು. ಈ ಮೂಲಕ ಋಷ್ಯಶೃಂಗರು ಭಗವಂತನ ರಾಮನ ಅವತಾರಕ್ಕೆ ಪ್ರಮುಖ ಮೊದಲ ಕಾರಣಕರ್ತರಾಗುತ್ತಾರೆ.
ಋಷ್ಯಶೃಂಗರ ಜನನ
ವಿಭಾಂಡಕ ಋಷಿಗಳು ತಾವು ತಪಸ್ಸು ಮಾಡುತ್ತಿದ್ದ ಬೆಟ್ಟವನ್ನು ಹತ್ತಲಾಗದೇ ತುಂಗಾ ನದಿಯ ತಟದಲ್ಲಿ ಅಲೆಯುತ್ತರುತ್ತಾರೆ. ಈ ಸಮಯದಲ್ಲಿ ಸ್ನಾನಕ್ಕೆಂದು ತುಂಗೆ ನದಿಯಲ್ಲಿ ಇಳಿದಾಗ ಅಪ್ಸರೆಯರು ವಿಭಾಂಡಕರ ಚಿತ್ತಚಾಂಚಲ್ಯಗೊಳಿಸಲು ಜಲ ಕ್ರೀಡೆ ಆಡಲು ನದಿಗೆ ಧುಮುಕುತ್ತಾರೆ. ದೈವ ನಿಯಮವೋ ಏನೋ ಎಂಬಂತೆ ವಿಭಾಂಡಕರು ಕ್ಷಣಕಾಲ ವಿಚಲಿತರಾಗುತ್ತಾರೆ. ಆ ಕ್ಷಣಿಕ ಚಂಚಲತೆಯ ಪರಿಣಾಮವಾಗಿ ತಪಸ್ವಿಗಳಿಂದ ಸ್ಖಲನಗೊಂಡ ರೇತಸ್ಸು ನದಿಯಲ್ಲಿ ಬಿಡಲ್ಪಡುತ್ತದೆ. ಆ ಸಮಯದಲ್ಲಿ ನೀರನ್ನು ಕುಡಿಯಲು ಬಂದಂತಹ ಜಿಂಕೆಯೊಂದು ನೀರಿನೊಂದಿಗೆ ಬೆರೆತಿದ್ದ ವಿಭಾಂಡಕರ ರೇತಸ್ಸನ್ನು ಸೇವಿಸುತ್ತದೆ. ತತ್ಪರಿಣಾಮವಾಗಿ ಗರ್ಭಧರಿಸಿದ ಜಿಂಕೆಯು ನವಮಾಸ ಕಳೆದು ಪ್ರಾತಃಕಾಲದ ಶುಭ ಮಹೂರ್ತದಲ್ಲಿ ಪೊದೆಯೊಂದರಲ್ಲಿ ಗಂಡುಮಗುವಿಗೆ ಜನ್ಮ ನೀಡಿ ಹೊರಟು ಹೋಗುತ್ತದೆ.
ಎಂದಿನಂತೆ ತುಂಗಾನದಿಗೆ ಸ್ನಾನಕ್ಕೆಂದು ಬಂದ ವಿಭಾಂಡಕರಿಗೆ ಮಗುವಿನ ಅಳುವ ಶಬ್ದ ಕೇಳಿಸುತ್ತದೆ. ಶಿಶುವಿನ ರೋಧನೆ ಕೇಳಿಸಿದ ಕಡೆ ತೆರಳಿದಾಗ ಗಂಡು ಮಗುವೊಂದು ಆಶ್ರಯವಿಲ್ಲದೆ ಅಳುತ್ತರಿವುದು ಗೋಚರಿಸುತ್ತದೆ. ತಮ್ಮ ತ್ರಿಕಾಲ ಜ್ಞಾನದ ಮೂಲಕ ಇದು ತಮ್ಮ ವಂಶದ ಕುಡಿ ಎಂದು ಅರಿತು ಮಗುವನ್ನು ಸಲಹುತ್ತಾರೆ. ಜಿಂಕೆ ಗರ್ಭದಲ್ಲಿ ಜನಿಸಿದ ಗುರುತಿಗಾಗಿ ಶಿಶುವಿಗೆ ಒಂದು ಕೊಂಬು ಮೂಡಿತ್ತು (ಕೊಂಬು ಎಂದರೆ ಸಂಸ್ಕೃತದಲ್ಲಿ ಶೃಂಗ ಎಂದರ್ಥ) ಋಷಿ ಮೂಲದ ಶಿಶುವಾದ್ದರಿಂದ ವಿಭಾಂಡಕರು ಮಗುವಿಗೆ ಋಷ್ಯಶೃಂಗನೆಂದು ನಾಮಕರಣ ಮಾಡುತ್ತಾರೆ.
ನಮ್ಮ ನಾಡಿನ ತುಂಗಾ ನದಿಯ ತಟದಲ್ಲಿ ಜನ್ಮ ಪಡೆದ ಋಷ್ಯಶೃಂಗರು ತಾವು ಪೂಜಿಸುತ್ತಿದ್ದ ಲಿಂಗದಲ್ಲೇ ಐಕ್ಯರಾಗುತ್ತಾರೆ. ಆ ಪವಿತ್ರ ಪುಣ್ಯಸ್ಥಳವು ಈಗಿನ ಶೃಂಗೇರಿ ಸಮೀಪದಲ್ಲಿರುವ ಕಿಗ್ಗದಲ್ಲಿ ಋಷ್ಯಶೃಂಗೇಶ್ವರ ದೇಗುಲವೆಂದು ಪ್ರಖ್ಯಾತಿಯಾಗಿದೆ. ಇಂದಿಗೂ ಸಹ ಮಳೆಗಾಗಿ ಮತ್ತು ಸಂತಾನಕ್ಕಾಗಿ ಭಕ್ತರು ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಕೋರಿಕೆ ಸಲ್ಲಿಸಿ ಋಷ್ಯಶೃಂಗೇಶ್ವರ ದರ್ಶನ ಪಡೆದು ಧನ್ಯರಾಗುತ್ತಿದ್ದಾರೆ.
ಮಹಾನ್ ತಪಸ್ವಿ ಋಷ್ಯಶೃಂಗರ ತಪಸ್ಸಿನ ಮೂಲಕ ಶ್ರೀರಾಮನ ಅವತಾರಕ್ಕೆ ಕರ್ನಾಟಕ ಪ್ರಮುಖ ಕಾರಣವಾಗಿದೆ. ಮುಂದೆ ಬರುವ ಸಾವರ್ಣಿಕ ಮನ್ವಂತರದಲ್ಲಿ ಋಷ್ಯಶೃಂಗರು ಸಪ್ತಋಷಿಗಳಲ್ಲಿ ಒಬ್ಬರಾಗುತ್ತಾರೆ.
ಶೃಂಗೇರಿಯ ಪ್ರಕೃತಿಯ ಮಡಿಲಲ್ಲಿ ಅಡಗಿರುವ ದಿವ್ಯ ಶಕ್ತಿಯನ್ನು ಮನಗಂಡ ಶ್ರೀಶಂಕರ ಭಗವತ್ಪಾದರು ಶೃಂಗೇರಿಯಲ್ಲಿಯೇ ದಕ್ಷಿಣಾಮ್ನಾಯ ಶ್ರೀಶಾರದಾ ಪೀಠವನ್ನು ಸ್ಥಾಪಿಸುತ್ತಾರೆ.
ಅನೇಕ ರಾಜರಿಗೆ ಋಷ್ಯಶೃಂಗರು ಮಾರ್ಗದರ್ಶಕರಾಗಿದ್ದಾರೆ ಅದೇ ರೀತಿ ಶೃಂಗೇರಿ ಶ್ರೀಶಂಕರಾಚಾರ್ಯ ಗುರುಪರಂಪರೆಯವರು ಮಾರ್ಗದರ್ಶರಕರಾಗಿದ್ದು ಹೈದರಬಾದ್ ನಿಜಾಮರಿಂದ ಹಿಡಿದು ಅನೇಕ ರಾಜಮನೆತನದವರ ಸೇವೆ ಇಂದಿಗೂ ಶ್ರೀಶಾರದಾ ಸನ್ನಿಧಿಯಲ್ಲಿ ನಡೆಯುತ್ತಿರುವುದು ಇದಕ್ಕೆ ಸಾಕ್ಷಿ.
ಇತ್ತಿಚೆಗಷ್ಟೇ ಮೈಸೂರಿನ ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶೃಂಗೇರಿ ಗುರುಗಳ ಸಲಹೆಯಂತೆ ಬಂದು ಋಷ್ಯಶೃಂಗೇಶ್ವರ ದರ್ಶನ ಪಡೆದು ಸಂತಾನಕ್ಕಾಗಿ ಪ್ರಾರ್ಥಿಸಿದ್ದರು. ತತ್ಪರಿಣಾಮವಾಗಿ ಇಂದು ಒಡೆಯರ್ ದಂಪತಿಗಳು ಗಂಡು ಮಗುವಿನ ಸಂತಾನ ಪಡೆದಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸುತ್ತಾರೆ.
ಕರ್ನಾಟಕದ ಬಲವಂತ ಆದನು ಶ್ರೀರಾಮನ ಪರಮ ಭಕ್ತ
ಶೃಂಗೇರಿಯ ಸಮೀಪವಿರುವ ಗಂಗಾಮೂಲ: ಎಂಬ ಸ್ಥಳವು ಅತ್ಯಂತ ಪವಿತ್ರವಾದುದು. ರಾಕ್ಷಸ ಹಿರಣ್ಯಾಕ್ಷ ಭೂಮಿಯನ್ನು ಅಪಹರಿಸಿ ನೀರಿನಲ್ಲಿ ಮುಳುಗಿಸಿ ಅಡಗಿಸಿಡುತ್ತಾನೆ. ಭೂಮಿಯನ್ನು ರಕ್ಷಿಸಲು ಶ್ರೀಮನ್ನಾರಾಯಣನು ವರಹಾ ಅವತಾರವೆತ್ತಿ ತನ್ನ ಕೋರೆಯಿಂದ ಮುಳುಗಿದ್ದ ಭೂಮಿಯನ್ನು ಮೇಲೆ ಎತ್ತಿ ಯಥಾ ಸ್ಥಿತಿಯಲ್ಲಿ ಇಡುತ್ತಾನೆ. ವರಾಹ ತನ್ನ ಕೋರೆಯಿಂದ ಭೂಮಿಯನ್ನು ಮೇಲೆತ್ತುವ ಸಂದರ್ಭದಲ್ಲಿ 3 ಬಿಂದುಗಳಾಗಿ ಅಲ್ಲಿಂದ ನೇತ್ರಾವತಿ ತುಂಗ ಭದ್ರ ಎಂಬ 3ನದಿಗಳ ಉಗಮವಾಗುತ್ತವೆ. ನೇತ್ರಾವತಿ ನದಿಯು ಧರ್ಮಸ್ಥಳದ ಕಡೆಗೆ ಹರಿದರೆ ತುಂಗ ಭದ್ರ ನದಿಗಳು ಗಂಗಾಮೂಲದಲ್ಲಿ ಹುಟ್ಟಿ ಮುಂದೆ ಶಿವಮೊಗ್ಗ ಸಮೀಪವಿರುವ ಕೂಡಲಿ ಎಂಬಲ್ಲಿ ಸಂಗಮವಾಗುತ್ತವೆ.
ಇದು ತುಂಗ ಭದ್ರಾ ನದಿಯಾಗಿ ಹರಿಯುತ್ತದೆ. ಈ ನದಿ ಹೊಸಪೇಟೆಯಿಂದ ಮುಂದೆ ಸಾಗಿ ಆನೆಗುಂದಿ ಹಂಪಿಯನ್ನು ಬಳಸಿ ಸಾಗುತ್ತದೆ. ಆನೆಗುಂದಿ ಹಂಪಿ ಎಂದರೆ ರಾಮಾಯಣದಲ್ಲಿ ಬರುವ ಕಿಷ್ಕಿಂಧೆ. ಕಿಷ್ಕಿಂಧೆ ಸುಗ್ರೀವನ ರಾಜಧಾನಿ ಇಲ್ಲಿರುವ ಒಂದು ದೊಡ್ಡದಾದ ಬೆಟ್ಟದಲ್ಲಿ ಅಂಜನಾದೇವಿಯು ಆಂಜನೇಯನಿಗೆ ಜನ್ಮ ನೀಡಿದ್ದು ನಂತರದಲ್ಲಿ ಆ ಬೆಟ್ಟ ಅಂಜನಾದ್ರಿ ಬೆಟ್ಟವಾಗಿ ಜಗತ್ಪ್ರಸಿದ್ಧಿ ಪಡೆಯಿತು. ರಾಮಾಯಣದಲ್ಲಿ ಶ್ರೀರಾಮ-ಹನುಮರ ಮೊದಲ ಭೇಟಿ ಕಿಷ್ಕಿಂಧೆ ರಾಜಧಾನಿಯಲ್ಲಿ ಆಗಿದೆ ಎಂದು ಉಲ್ಲೇಖಿಸಲಾಗಿದೆ.
ಸೀತಾನ್ವೇಷಣೆ ಸಮಯ ಬಂದಾಗ ಸಹಸ್ರ ಸಮುದ್ರದ ಆಚೆಗಿನ ಲಂಕೆಗೆ ತೆರಳಲು ಯಾರ ಬಳಿಯೂ ಆಗುವುದಿಲ್ಲ. ತುಂಗಭದ್ರಾ ನೀರನಿ ಜೊತೆ ರಾಮನಾಮವ ಸೇವಿಸಿ ಬೆಳೆದ ಆಂಜನೇಯ ಸಮುದ್ರ ದಾಟಿ ಲಂಕೆಯಲ್ಲಿ ಅಪಹರಿಸಲ್ಪಟ್ಟ ಸೀತಾ ಮಾತೆಯ ಅನ್ವೇಷಣೆ ಮಾಡಿ ಬರುತ್ತಾನೆ. ಇಡೀ ರಾಮಾಯಣದಲ್ಲಿ ಶ್ರೀರಾಮನ ಅವತಾರ ಮತ್ತು ಆಂಜನೇಯನ ಕೊಡುಗೆ ಕರ್ನಾಟಕದ್ದೇ ಆಗಿದೆ.
ರಾಮಾಯಣಕ್ಕಿದೆ ಮತ್ತೊಂದು ಹೆಸರು
ರಾವಣನ ವಧೆಗಾಗಿ ಅವತರಿಸಿದನೆಂದು ಶ್ರೀರಾಮರಿಗೆ ದೇವತೆಗಳು, ಗಂಧರ್ವರು, ಯಕ್ಷರು, ಶರಣಾಗುತ್ತಾರೆ. ಭರತನು ರಾಮನಿಗೆ ಶರಣಾಗಿ ಪಾದುಕೆಯನ್ನು ಸಿಂಹಾಸನದಲಿಟ್ಟು ರಾಜ್ಯಭಾರ ಮಾಡುತ್ತಾನೆ. ರಾಕ್ಷಸರ ಉಪಟಳ ತಾಳಲಾರದೆ ದಂಡಕಾರಣ್ಯವಾಸಿಗಳಾದ ಋಷಿಮುನಿಗಳು ರಕ್ಷಿಸು ಎಂದು ರಾಮನಲ್ಲಿ ಶರಣಾಗುತ್ತಾರೆ. ಕಾಕಾಸುರನ ಶರಣಾಗತಿ. ವಾಲಿಯಿಂದ ರಕ್ಷಸಿಸುವಂತೆ ಸುಗ್ರೀವನ ಶರಣಾಗತಿ, ರಾವಣನ ಅಟ್ಟಹಾಸ ಅನೀತಿಯಿಂದ ಕೂಡಿದ ರಾಜ್ಯಭಾರವನ್ನು ಕೊನೆಗಾಣಿಸುವಂತೆ ವಿಭೀಷಣನ ಶರಣಾಗತಿ, ಮಹಾ ಭಕ್ತಿಯಿಂದ ಆಂಜನೇಯನ ಶರಣಾಗತಿ ಈ ಎಲ್ಲ ಅಂಶಗಳಿಂದ ರಾಮಾಯಣವನ್ನು ಶರಣಾಗತಿ ಶಾಸ್ತ್ರ ಎಂದು ಮತ್ತೊಂದು ಹೆಸರಿನಿಂದ ಕರೆಯಲಾಗುತ್ತದೆ.
ಸುಮಾರು ಐದಾರು ದಶಕಗಳಿಂದ ವಿವಾದಸ್ಪದವಾಗಿ ದೇಶವನ್ನು ಕಾಡಿದ್ದ ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣಕ್ಕೆ ಇದ್ದ ಅಡ್ಡಿ ಆತಂಕಗಳು ಸದ್ಯ ನಿವಾರಣೆಯಾಗಿದೆ. ಈ ಕುರಿತಂತೆ ನವೆಂಬರ್ 9ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಅಯೋಧ್ಯೆಯಲ್ಲಿಯೇ ರಾಮ ಮಂದಿರವನ್ನು ನಿರ್ಮಾಣ ಮಾಡಬೇಕು ಎಂದಿದ್ದು, ಇದಕ್ಕಾಗಿ ಟ್ರಸ್ಟ್ ರಚಿಸುವಂತೆ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.
ಲೇಖನ: ಎಚ್.ಎಂ. ವಿನಯ್ ಕುಮಾರ್
ಮಾಹಿತಿ: ಶಾಮ್ ಶಂಕರ್ ಭಟ್
Get in Touch With Us info@kalpa.news Whatsapp: 9481252093
Discussion about this post