ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಅಂಕ ಪಡೆಯುವುದೊಂದೇ ಉತ್ತಮ ವಿದ್ಯಾರ್ಥಿಗಳ ಲಕ್ಷಣವಲ್ಲ, ಇದರ ಜೊತೆಗೆ ಪ್ರಾಮಾಣಿಕತೆ, ವಿಧೇಯತೆ ವಿದ್ಯಾರ್ಥಿಗಳಲ್ಲಿ ಇರಬೇಕು ಎಂದು ಕಾರ್ಕಳ ವೆಂಕಟರಮಣ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಉಷಾ ನಾಯಕ್ ಹೇಳಿದರು.
ಇಲ್ಲಿನ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಸರ್ವಾಂಗೀಣ ವ್ಯಕ್ತಿತ್ವದ ಬೆಳೆವಣಿಗೆಗೆ ಮಕ್ಕಳು ಗಮನ ಕೊಡಬೇಕು. ಭವ್ಯ ಭಾರತದ ಕನಸು ನನಸಾಗಬೇಕಾದರೆ ಯುವ ಜನತೆಯ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.
ಹಿರಿಯಂಗಡಿಯ ಸ್ವಸ್ತಿಶ್ರೀ ನೇಮಿಸಾಗರ ವರ್ಣೀಜಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಉಷಾ ಪಡಿವಾಳ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಗರಿಷ್ಟ ಪ್ರಯತ್ನಗಳ ಮೂಲಕ ಸಾಧನೆಯ ಕಡೆಗೆ ಸಾಗಬೇಕು ಎಂದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ, ಕಾರ್ಕಳ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಅಪೇಕ್ಷಾ ಶೆಟ್ಟಿ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
Also read: ಶಿವಮೊಗ್ಗದ ಪಿಇಎಸ್-ಪಾಸಿಟಿವ್ ಮೈಂಡ್ ಆಸ್ಪತ್ರೆ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಸದಸ್ಯರಾದ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆಯನ್ನು ರಾಜ್ಯ, ರಾಷ್ಟ್ರ, ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದು ಆ ಸಂಸ್ಥೆಯ ವಿದ್ಯಾರ್ಥಿಗಳು. ಹೆತ್ತವರ, ಹಿರಿಯರ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರೀಡೆ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಂಸ್ಥೆಯ ವಿದ್ಯಾರ್ಥಿಗಳ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ಲಕ್ಷ್ಮೀನಾರಾಯಣ ಕಾಮತ್, ಉಪ ಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮೇರಿಯನ್ ಡಿಸೋಜ, ಶಿಕ್ಷಕ-ರಕ್ಷಕ ಸಂಘದ ಆಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕಿಯರಾದ ಭಾರತಿ ನಾಯಕ್, ಸುನೀತಾ, ಅನಿತಾ ಲೋಬೊ ವಿವಿಧ ಕಾರ್ಯಕ್ರಮ ನಿರೂಪಿಸಿದರು. ರಸಾಯನಶಾಸ್ತ್ರ ಉಪನ್ಯಾಸಕಿ ನಯನಾ ಸ್ವಾಗತಿಸಿ, ಗಣಿತ ಉಪನ್ಯಾಸಕ ಮಣಿಕಂಠನ್ ವಂದಿಸಿದರು. ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಮತ್ತು ರಸಾಯನಶಾಸ್ತ್ರ ಉಪನ್ಯಾಸಕಿ ಸೌಮ್ಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















