ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದೆ ಶಿಸ್ತು, ಸಂಯಮದಿಂದ ಜೀವನ ನಡೆಸಲು ಕ್ರೀಡೆಯು ಸಹಾಯ ಮಾಡುತ್ತದೆ. ಬಾಲ್ಯದಿಂದಲೇ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಸಂಸ್ಕಾರಯುತ ಜೀವನವನ್ನು ನಡೆಸಬೇಕು ಎಂದು ಕಾರ್ಕಳ ನಗರ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಶೇಖರ್ ನಾಯ್ಕ್ ಹೇಳಿದರು.
ಇಲ್ಲಿನ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ ಸ್ಥಳೀಯ ಗಾಂಧೀ ಮೈದಾನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ಕ್ರೀಡಾಪಟುಗಳಿಂದ ಗೌರವ ವಂದನೆ ಸ್ವೀಕರಿಸಿ, ನಂತರ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಸಮಾಲೋಚಕಿಯಾದ ಡಾ.ಸಿಸ್ಟರ್ ಶಾಲೆಟ್ ಸಿಕ್ವೇರಾ ಅವರು ಕ್ರೀಡಾಳುಗಳ ಪರಿಚಯ ಸ್ವೀಕರಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡೆಯ ಮಹತ್ವವನ್ನು ಅರಿತುಕೊಂಡು ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡು ಶಾಲೆಗೆ ಹಾಗೂ ದೇಶಕ್ಕೆ ಕೀರ್ತಿ ತರುವವರಾಗಬೇಕು ಎಂದು ಹೇಳಿದರು.
ಸಂತೋಷ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆಯು ಸಹಾಯ ಮಾಡುತ್ತದೆ. ಎಲ್ಲರೂ ಉತ್ಸಾಹದಿಂದ ಈ ಕ್ರೀಡಾಹಬ್ಬದಲ್ಲಿ ಭಾಗವಹಿಸಿ ಎಂದು ಹೇಳಿದರು.
ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿಗಳಾದ ಅವೆಲಿನ್ ಲೂಯಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಕ್ರೀಡಾ ಪಥಸಂಚಲನ ಹಾಗೂ ಕ್ರೀಡಾಜ್ಯೋತಿ ಮೆರವಣಿಗೆ ನಡೆಯಿತು.

ವಿದ್ಯಾರ್ಥಿಗಳಾದ ಪ್ರಥಮ ವಾಣಿಜ್ಯ ವಿಭಾಗದ ಕೀರ್ತನ್ ಡಿ’ಸೋಜ ಸ್ವಾಗತಿಸಿ ಹತ್ತನೇ ತರಗತಿಯ ಆಯಿಷಾ ರೂಬ ವಂದಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಪಾವನ ಧನ್ಯರಾಜ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣ ಪ್ರಸಾದ್, ಪ್ರಕಾಶ್ ನಾಯ್ಕ್, ಲಾವಣ್ಯ ಕ್ರೀಡಾಕೂಟ ಸಂಘಟಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post