ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಪ್ರಸ್ತುತ ಸಮಾಜ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು ಇದರಿಂದಾಗಿ ಗುರು ಶಿಷ್ಯ ಸಂಬಂಧದ ಮೌಲ್ಯ ಕೂಡಾ ಕುಸಿಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೆಗೌಡ ಹೇಳಿದರು.
ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ ಕಿಂಗ್ #Christ King ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು #Teachers Day ಶಿಕ್ಷಕ ರಕ್ಷಕ ಸಂಘದ ಆಶ್ರಯದಲ್ಲಿ ಸಂಸ್ಥೆಯ ನೂತನ ಕಾಲೇಜು ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಸಂಬಂಧಗಳನ್ನು ಹಣದ ಮೂಲಕ ಅಳೆಯುತ್ತಿರುವುದು ಖೇದಕರ ವಿಷಯ, ಶಿಕ್ಷಕರು ಈ ಸಮಾಜದ ಕಣ್ಮಣಿಗಳು, ಅವರಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ, ಈ ಪ್ರಪಂಚದಲ್ಲಿ ಸರ್ವಶ್ರೇಷ್ಟ ನಾಯಕರನ್ನು ತಯಾರು ಮಾಡುವವರು ಯಾರಾದರೂ ಇದ್ದರೆ ಅದು ಶಿಕ್ಷಕರು ಮಾತ್ರ ಎಂದು ಹೇಳಿದರು.
ಇನ್ನೋರ್ವ ಅತಿಥಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯಗುರು ಸಂಜೀವ ದೇವಾಡಿಗ ಅವರು ಮಾತನಾಡಿ, ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಶಿಕ್ಷಕರು ತಮ್ಮ ವೃತ್ತಿಯ ಬಗ್ಗೆ ಪ್ರೀತಿ ಅಭಿಮಾನಗಳನ್ನು ಬೆಳಿಸಿಕೊಳ್ಳಬೇಕು ಎಂದು ಹೇಳಿದರು.
ಸರಕಾರಿ ಪ್ರೌಢಶಾಲೆ ರೆಂಜಾಳ ಇಲ್ಲಿನ ಮುಖ್ಯ ಶಿಕ್ಷಕಿ ಶ್ರೀಮತಿ ಸ್ವರ್ಣಲತಾ ಕೆ ಅವರಿಗೆ ‘ಕ್ರೈಸ್ಟ್‌ಕಿಂಗ್ ಶಿಕ್ಷಕ ರತ್ನ’ ಮತ್ತು ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಫ್ರೆಡ್ರಿಕ್ ರೆಬೆಲ್ಲೊ ಅವರಿಗೆ ‘ಕ್ರೈಸ್ಟ್‌ಕಿಂಗ್ ಕ್ರೀಡಾ ಶಿಕ್ಷಕಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರ್ಣಲತಾ ಅವರು ಉಳಿಪೆಟ್ಟನ್ನು ತಿಂದ ಕಲ್ಲು ಉತ್ತಮ ಮೂರ್ತಿಯಾಗುತ್ತದೆ, ಅದೇ ರೀತಿ ಕಷ್ಟವನ್ನುಂಡು ಬೆಳೆದರೆ ಉತ್ತಮ ವ್ಯಕ್ತಿತ್ವ ಮೂಡಿಬರುತ್ತದೆ ಎಂದು ಹೇಳಿದರು.
ಫ್ರೆಡ್ರಿಕ್ ರೆಬೆಲ್ಲೊ ಅವರು ಮಾತನಾಡಿ, ವಿದ್ಯಾರ್ಥಿಗಳು ಧೈರ್ಯ-ಸ್ಥೈರ್ಯಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು, ನಮ್ಮ ನಮ್ಮ ಪ್ರತಿಭೆಗಳನ್ನು ನಾವು ನಾವೇ ಗುರುತಿಸಿ, ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ ಶಿಕ್ಷಕರು ಮಕ್ಕಳನ್ನು ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳಬೇಕು, ನಮ್ಮ ದೇಶಕ್ಕಾಗಿ ಕಾಯಾ ವಾಚಾ ಮನಸಾ ದುಡಿಯುವುದೇ ನಿಜವಾದ ದೇಶಪ್ರೇಮ. ಭಾರತದ ಭವಿಷ್ಯ ನಿರ್ಮಾಣವಾಗುವುದು ತರಗತಿ ಕೊಠಡಿಗಳಲ್ಲಿ, ಅಲ್ಲಿ ಮಕ್ಕಳಿಗೆ ಸರಿಯಾದ ಮೌಲ್ಯಯುತ ಶಿಕ್ಷಣ ದೊರೆತಾಗ ಭಾರತ ವಿಶ್ವನಾಯಕನಾಗುತ್ತದೆ ಎಂದು ಹೇಳಿದರು.
ಶಿಕ್ಷಕ-ರಕ್ಷಕ ಸಂಘದ ಪದವಿಪೂರ್ವ ವಿಭಾಗದ ಅಧ್ಯಕ್ಷರಾದ ದಯಾನಂದ ಮಲೆಬೆಟ್ಟು ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಪದವಿಪೂರ್ವ ವಿಭಾಗದ ಪ್ರಾಚಾರ್ಯರಾದ ಲಕ್ಷ್ಮೀನಾರಾಯಣ ಕಾಮತ್ ಪ್ರಸ್ತಾವನೆಗೈದರೆ ಕನ್ನಡ ಉಪನ್ಯಾಸಕ ಉಮೆಶ್ ಬೆಳ್ಳಿಪ್ಪಾಡಿ ಪ್ರಶಸ್ತಿಗಳ ಪರಿಚಯಗೈದರು. ಸಂಸ್ಥೆಯ ಗಣಿತಶಾಸ್ತ್ರ ಉಪನ್ಯಾಸಕ ಅರುಣ್ ಸಂದೀಪ್ ಡಿ’ಸೋಜ, ಕಚೇರಿ ಸಹಾಯಕಿ ಶ್ರೀಮತಿ ಪೃಥ್ವಿ ಶೆಟ್ಟಿ ಮತ್ತು ಗ್ರಂಥಪಾಲಕಿ ಶ್ರೀಮತಿ ರೇಷ್ಮಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಸ್ಥೆಯ ಎಲ್ಲಾ ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ವೃಂದದವರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಆವೆಲಿನ್ ಲೂಯಿಸ್, ಸಂಸ್ಥೆಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಿಂದ ಹಾಗೂ ಪೋಷಕರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
ಶಕೀಲಾ ಜಿ ಶೆಟ್ಟಿ, ವಿದ್ಯಾ, ಮಮತಾ, ವಿಶ್ವಾನಾಥ ಪುಜಾರಿ, ಕಿಶನ್, ಪ್ರಕಾಶ್ ಡಿಸೋಜ, ಸುನಿಲ್ ಡಿಸೋಜ, ಜಾನ್ ತಾವ್ರೋ, ವನಿತಾ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ – ರಕ್ಷಕ ಸಂಘದ ಪ್ರಾಥಮಿಕ ವಿಭಾಗದ ಅಧ್ಯಕ್ಷ ಉದಯರವಿ ಸ್ವಾಗತಿಸಿ ಪ್ರೌಢಶಾಲಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಶರಿಟಾ ನೊರೋನ್ಹ ವಂದಿಸಿದರು. ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಶ್ರೀಮತಿ ಹೇಮಲತಾ ಮತ್ತು ಯಶಸ್ವಿನಿ ರಾವ್ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post