ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಅಕ್ಷರ ಜ್ಞಾನ ಇಲ್ಲದೆಯೂ ತುಳುವರು ತುಳುವ ಇತಿಹಾಸವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ತುಳುನಾಡಿನ ಊರಿನ ಹೆಸರುಗಳ ಹಿಂದೆ ಅದರ ಇತಿಹಾಸವೂ ಸೇರಿಕೊಂಡಿದೆ ಎಂದು ಬಂಟ್ವಾಳದ ಬಿ.ಸಿ.ರೋಡಿನ ವೀರ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯದ ಸಂಸ್ಥಾಪಕ ಮತ್ತು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ತುಕರಾಂ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ತುಳುನಾಡ ಇತಿಹಾಸ ದರ್ಶನ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿದರು.
ತುಳುನಾಡನ್ನು ಆಳಿದ ಅಬ್ಬಕ್ಕ ನಮ್ಮ ಸಾಧನೆಗೆ ಪ್ರೇರಕ ಶಕ್ತಿಯಿದ್ದಂತೆ. ಬುದ್ಧಿವಂತರಾದ ತುಳುವರು ಇತರರಿಂದ ಒಳ್ಳೆಯದನ್ನು ಪಡೆದು ಮರಳಿ ಒಳ್ಳೆಯದನ್ನೇ ಮಾಡುವವರು. ಮಹಾಕಾವ್ಯಗಳನ್ನು ಓದದಿದ್ದರೂ ಯಕ್ಷಗಾನದಂತಹ ಕಲೆಗಳ ಮೂಲಕವೇ ಅರಿತುಕೊಳ್ಳುವ ಸಂಸ್ಕೃತಿ ತುಳುವರಲ್ಲಿ ಬೆಳೆದುಬಂದಿದೆ ಎಂದು ತುಳುನಾಡಿನ ಐತಿಹಾಸಿಕ ಪರಂಪರೆಯ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪ ಪ್ರಾಚಾರ್ಯ ಡಾ. ಪ್ರಕಾಶ್ ಮಾತನಾಡಿ, ತುಳುವ ಇತಿಹಾಸ ಅರಿತುಕೊಂಡು ನಾವು ಹಿರಿಯರ ಆದರ್ಶದಂತೆ ಬಾಳಿ ಬದುಕಬೇಕು. ತುಳುನಾಡು ಪ್ರಾಚೀನ ಕಾಲದಲ್ಲಿ ಯಾಂತ್ರಿಕವಾಗಿಯೂ ಬಹಳ ಮುಂದುವರಿದಿತ್ತು ಅನ್ನುವುದಕ್ಕೆ ನಮಗೆ ಬಹಳಷ್ಟು ಉದಾಹರಣೆಗಳು ಸಿಗುತ್ತವೆ ಎಂದು ಹೇಳಿದರು.
ಸಂಸ್ಥೆಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಪ್ ಕಿಶೋರ್ ಲೋಬೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚರಣ್‌ರಾಜ್ ಸ್ವಾಗತಿಸಿ ಮನಿಟಾ ಮೈಕಲ್ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸುಕನ್ಯಾ ಜೈನ್ ಅತಿಥಿಗಳನ್ನು ಪರಿಚಯಿಸಿ ವಿದ್ಯಾರ್ಥಿನಿ ಶ್ರೇಯಾ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















