ಕಲ್ಪ ಮೀಡಿಯಾ ಹೌಸ್ | ಕಾರ್ಕಳ(ಉಡುಪಿ) |
ಸಮಾಜ ಸೇವೆ ಎಂದರೆ ಅದು ಒಂದು ದಿನದ್ದಲ್ಲ. ಬದಲಾಗಿ ಜೀವನ ಪರ್ಯಂತದ ಕಾರ್ಯವಾಗಿದೆ ಎಂದು ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ ಸಲಹೆ ನೀಡಿದರು.
ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರಾಷ್ಟ್ರೀಯ ಸೇವಾ ಯೋಜನೆ ಪ್ರಯುಕ್ತ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವತಿಯಿಂದ ನಡೆದ ‘ನಶಾ ಮುಕ್ತ ಭಾರತ ಅಭಿಯಾನ’ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಇಂತಹ ಶಿಬಿರಗಳು ನೈಜ ಜೀವನದ ಪಾಠ ಕಲಿಸುವ ಪಾಠಶಾಲೆಯಂತಿವೆ. ಸಮಾಜ ಸೇವೆ ಎಂದರೆ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಅದು ಜೀವನಪೂರ್ತಿ ಅಳವಡಿಸಿಕೊಳ್ಳಬೇಕಾದ ಮನೋಭಾವ ಎಂದು ಕರೆ ನೀಡಿದರು.
ಸಂಸ್ಥೆಯ ಸಹ ಸಂಸ್ಥಾಪಕರಾದ ಎಸ್.ಎಲ್. ಅಶ್ವತ್ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿದರೆ, ಶಿಕ್ಷಣದ ಗುರಿ ಸಾರ್ಥಕವಾಗುತ್ತದೆ ಎಂದರು.
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಬಂಟ್ಸ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ ರವರು, ಇಂದಿನ ಯುವಕರು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಳ್ಳುವಲ್ಲಿ ಮುಂಚೂಣಿಯಲ್ಲಿರಬೇಕು. ಶಿಬಿರಗಳಲ್ಲಿ ಬೆಳೆದ ಅನುಭವವು ಭವಿಷ್ಯದ ನಾಯಕರಾಗಿ ರೂಪಗೊಳ್ಳಲು ಸಹಾಯಕವಾಗುತ್ತದೆ ಎಂದರು.
ಉದ್ಯಮಿ ವಿಜಯ್ ಶೆಟ್ಟಿ ರವರು ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಕಾಡೆಮಿಕ್ ಯಶಸ್ಸಿನಲ್ಲೇ ಅಲ್ಲ, ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಾಗ ಮಾತ್ರ ನಿಜವಾದ ಶಿಕ್ಷಣದ ಅರ್ಥ ಸಾರ್ಥಕವಾಗುತ್ತದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಮತ್ತು ಇಸ್ರೋದ ನಿವೃತ್ತ ವಿಜ್ಞಾನಿ ಜನಾರ್ಧನ ಇಡ್ಯಾ ಮಾತನಾಡಿ, ಜೀವನದಲ್ಲಿ ದೊಡ್ಡ ಸ್ಥಾನ ಪಡೆಯುವುದಕ್ಕಿಂತ, ಒಳ್ಳೆಯ ಮಾನವಿಯ ಮೌಲ್ಯಗಳನ್ನು ಅಳವಡಿಸಿಕೊಂಡು ನಾಗರಿಕನಾಗುವುದು ಮುಖ್ಯ. ಈ ಶಿಬಿರದ ಅನುಭವಗಳು ನಿಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆಎಂದರು.
ನ್ಯಾಯವಾದಿ ಮತ್ತು ನೋಟರಿ ನಂದಿನಿ ಶೆಟ್ಟಿ ಮಾತನಾಡಿ, ಎನ್’ಎಸ್’ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ವೇದಿಕೆ ಆಗಿದೆ’ ಎಂದು ಅಭಿಪ್ರಾಯಪಟ್ಟರು.
ಎಂಪಿಎಂ ಕಾಲೇಜು ಪ್ರಾಂಶುಪಾಲ ಶ್ರೀವಮಾ ಅಜ್ರಿ ಮಾತನಾಡಿ, ಯುವಕರು ರಾಷ್ಟ್ರದ ಶಕ್ತಿ. ಅವರಿಂದ ಪ್ರಾರಂಭವಾಗುವ ಪ್ರತಿಯೊಂದು ಸಣ್ಣ ಸೇವಾ ಚಟುವಟಿಕೆ ದೇಶದ ಅಭಿವೃದ್ಧಿಗೆ ದಾರಿ ತೋರಿಸಬಹುದು ಎಂದು ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಅನ್ನಪೂರ್ಣ ಕಾಮತ್ ಮಾತನಾಡಿ, ಎನ್’ಎಸ್’ಎಸ್ ಘಟಕದ ವತಿಯಿಂದ ನಡೆದ ಕಾರ್ಯವೈಖರಿಗಳನ್ನು ಶ್ಲಾಘಿಸಿದರು.
ವಿದ್ಯಾರ್ಥಿಗಳು ಶ್ರಮ, ಶಿಸ್ತು ಮತ್ತು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದ್ದು ಪ್ರಶಂಸನೀಯ. ಎನ್’ಎಸ್’ಎಸ್ ಕೇವಲ ಕಾರ್ಯಕ್ರಮವಲ್ಲ, ಅದು ವ್ಯಕ್ತಿತ್ವ ನಿರ್ಮಾಣದ ಪಾಠವಾಗಿದೆ ಎಂದರು.
ಪೌರ ಕಾರ್ಮಿಕರಿಗೆ ಸನ್ಮಾನ
ಸಮಾರೋಪ ಕಾರ್ಯಕ್ರಮದಲ್ಲಿ 25 ವರ್ಷಗಳಿಗಿಂತಲೂ ಸುದೀರ್ಘ ಅವಧಿಯಿಂದ ಪೌರಕಾರ್ಮಿಕರಾಗಿ ದುಡಿದು ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಸುಧೀರ್, ಪೂವಪ್ಪ, ರವಿ, ನಾಗೇಶ್, ಸಂಜೀವ ಇವರನ್ನು ಎನ್’ಎಸ್’ಎಸ್ ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಅತಿಥಿಗಳ ಸಮ್ಮುಖದಲ್ಲಿ ಶಿಬಿರವಾಣಿಯನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳಾದ ಹಿತ ಮತ್ತು ಅಕ್ಷತಾ 7 ದಿನಗಳ ಎನ್’ಎಸ್’ಎಸ್ ಘಟಕದ ಅನುಭವಗಳ ಕುರಿತು ಮಾತನಾಡಿದರು.
ಎಲ್ಲಾ ಅತಿಥಿಗಳನ್ನು ಕಾರ್ಯಕ್ರಮದ ಸವಿನೆನಪಿನ ಧ್ಯೋತಕವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ಬಿ, ವಿದ್ವಾನ್ ಗಣಪತಿ ಭಟ್, ಆದರ್ಶ ಎಂ.ಕೆ. ರವರು ಗೌರವ ಉಪಸ್ಥಿತಿ ವಹಿಸಿದ್ದರು.
ಉಪನ್ಯಾಸಕರಾದ ಸಂತೋಷ್ ಸ್ವಾಗತಿಸಿ, ಶಿಬಿರಾಧಿಕಾರಿ ಉಮೇಶ್ ವಂದನಾರ್ಪ ಮಾಡಿದರು. ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ಕಾರ್ಯಕ್ರಮ ನಿರೂಪಿಸಿ, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post