ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |
ಹಿರಿಯ ನಾಗರೀಕರು ತಮ್ಮ ಜೀವನವನ್ನು ಘನತೆ ಹಾಗು ನೆಮ್ಮದಿಯಿಂದ ಮುನ್ನಡೆಸಲು ಸಹಕಾರಿಯಾಗಬಹುದಾದ ಮಹತ್ವದ ಶಿಫಾರಸ್ಸನ್ನು ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಾಡಿದೆ.
ಬೆಂಗಳೂರಿನ ಜಯನಗರದ ವೃದ್ಧ ದಂಪತಿ ಹಾಗು ಅವರ ಮಕ್ಕಳಿಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸುವಾಗ, ಹೈಕೋರ್ಟ್ ಪೋಷಕರು ಹಾಗು ಹಿರಿಯ ನಾಗರಿಕರ ನಿರ್ವಹಣೆ ಹಾಗು ಕಲ್ಯಾಣ ಕಾಯಿದೆಯ ಕಲಂ 9ರಲ್ಲಿ ಹಿರಿಯ ನಾಗರಿಕರಿಗೆ ನೀಡಬಹುದಾದ ಮಾಸಿಕ ಪಾಲನಾ ಭತ್ಯೆ ಹತ್ತು ಸಾವಿರ ರೂಪಾಯಿ ಮೀರಬಾರದು ಎಂಬ ಮಿತಿಯನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ತೆಗೆದೊಕೊಳ್ಳಲು ಇದು ಸಕಾಲ ಎಂದು ತಿಳಿಸಿದೆ.
ಈ ಕಾಯಿದೆಯ ಅಡಿ, ತಮ್ಮ ನಿರ್ವಹಣೆಯನ್ನು ಖುದ್ದು ಮಾಡಿಕೊಳ್ಳಲಾಗದ ಹಿರಿಯ ನಾಗರಿಕರು, ತಮ್ಮ ವಯಸ್ಕ ಮಕ್ಕಳು ಅಥವಾ ಮೊಮ್ಮಕ್ಕಳಿಂದ ಜೀವನ ನಿರ್ವಹಣೆಗೆ ಬೇಕಾದ ಹಣವನ್ನು ಪಡೆದುಕೊಳ್ಳಲು ಅವಕಾಶವಿದೆ. ಕಾಯಿದೆಯ ಅಡಿ ರಚನೆಯಾದ ಉಪ-ವಿಭಾಗಾಧಿಕಾರಿ ನೇತೃತ್ವದ ಟ್ರಿಬ್ಯೂನಲ್, ಹಿರಿಯ ನಾಗರಿಕರ ಅಹವಾಲುಗಳನ್ನು ಆಲಿಸಿ, ಮಾಸಿಕ ಭತ್ಯೆ ಪಾವತಿಗೆ ಸಂಬಂಧಿಸಿದ ಆದೇಶವನ್ನು ನೀಡುತ್ತದೆ. ಹೀಗೆ ಪಡೆದುಕೊಳ್ಳುವ ಹಣ ತಿಂಗಳಿಗೆ ರೂಪಾಯಿ ಹತ್ತು ಸಾವಿರ ದಾಟಬಾರದು ಎಂದು ಕಾಯಿದೆಯ ಕಲಂ 9 ತಿಳಿಸುತ್ತದೆ.“ಈ ಕಾಯಿದೆ 2007ರಲ್ಲಿ ಜಾರಿಗೆ ಬಂದಿತು. ಅಂದು ಹಣದುಬ್ಬರದಿಂದ ಹೆಚ್ಚಾದ ವೆಚ್ಚದ ಸೂಚ್ಯಂಕ (Cost Inflation Index) 129 ಆಗಿದ್ದರೆ, ಇಂದು ಅದು 363ಕ್ಕೆ ಬಂದು ನಿಂತಿದೆ. ಅಂದರೆ, 2007ನೇ ಇಸವಿಯಲ್ಲಿ ನೂರು ರೂಪಾಯಿಗೆ ದೊರೆಯುತ್ತಿದ್ದ ವಸ್ತುವಿನ ಬೆಲೆ ಇಂದು ಸುಮಾರು ಒಂದು ಸಾವಿರ ರೂಪಾಯಿ ಆಗಿದೆ. ಆಹಾರ, ವಸತಿ, ಔಷದ ಸೇರಿದಂತೆ ಎಲ್ಲ ವಸ್ತುಗಳು ದುಬಾರಿಯಾಗಿವೆ. ಜೀವನ ನಿರ್ವಹಣೆ ವೆಚ್ಚ ಏರುತ್ತಿದೆ ಆದರೆ ಹಿರಿಯ ನಾಗರಿಕರ ಭತ್ಯೆ ಮಾತ್ರ ಹತ್ತು ಸಾವಿರ ರೂಪಾಯಿಗೆ ನಿಂತಿದೆ,” ಎಂದು ಹೈಕೋರ್ಟ್ ತಿಳಿಸಿದೆ.
ಜನಕಲ್ಯಾಣಕ್ಕೆ ರೂಪಿತವಾದ ಶಾಸನಗಳು ಸಾರ್ಥಕತೆ ಪಡೆದುಕೊಳ್ಳುವುದು, ಅವುಗಳ ಪ್ರಯೋಜನ ಜನಸಾಮಾನ್ಯರಿಗೆ ತಲುಪಿದಾಗ. ದೇಶವೊಂದು ಸಾಧಿಸಿದ ಅಭಿವೃದ್ಧಿಯನ್ನು ಅಳೆಯಲು ಭೌತಿಕ ಪ್ರಗತಿ ಏಕಮಾತ್ರ ಮಾನದಂಡವಲ್ಲ ಬದಲಿಗೆ ಅಲ್ಲಿಯ ಹಿರಿಯರು ಹಾಗು ಮಕ್ಕಳು ಎಷ್ಟು ಸಂತೋಷ ಹಾಗು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂಬುದನ್ನು ಕೂಡ ಪರಿಗಣಿಸಬೇಕಾಗುತ್ತದೆ.
ಅಲ್ಪಪ್ರಮಾಣದ ಹಣವನ್ನು ಭತ್ಯೆಯಾಗಿ ನೀಡುವುದರಿಂದ ಹಿರಿಯ ನಾಗರಿಕರು ಘನತೆಯ ಜೀವನ ನಡೆಸಲು ಸಾಧ್ಯವಿಲ್ಲ. ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ, ಕಾಯಿದೆಯ ಕಾಲಂ 9ರಲ್ಲಿರುವ ಹತ್ತು ಸಾವಿರ ರೂಪಾಯಿ ಮಿತಿಯನ್ನು ತಗೆದು ಹಾಕಿ, ಈ ಮೊತ್ತವನ್ನು ಏರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತಿಸಲಿ ಎಂದು ಹೈಕೋರ್ಟ್ ತಿಳಿಸಿದೆ.
ಆತ್ಮೀಯ ಓದುಗರೇ,
ಕಲ್ಪ ಮೀಡಿಯಾ ಹೌಸ್(ರಿ.) ಅಡಿಯಲ್ಲಿ ಪ್ರಕಟವಾಗುತ್ತಿರುನ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಮ್ಮ ಓದುಗರಿಗಾಗಿ `ಕಾನೂನು ಕಲ್ಪ’ ಎಂಬ ಹೊಸ ಅಂಕಣವನ್ನು ಆರಂಭಿಸಲಾಗಿದ್ದು, ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ಶಿವಮೊಗ್ಗ-ಭದ್ರಾವತಿಯ ಖ್ಯಾತ ವಕೀಲರು ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ಶ್ರೀ ವೀರೇಂದ್ರ ಪಿ.ಎಂ. ಅವರು ಯಾವುದೇ ರೀತಿಯ ಕಾನೂನು ಸಮಸ್ಯೆಗಳು, ಕಾನೂನಿನ ಕುರಿತಾಗಿನ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ತಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಬಹುದು. ಆ ಪ್ರಶ್ನೆಗಳಿಗೆ ವಕೀಲರಾದ ಶ್ರೀ ವೀರೇಂದ್ರ ಪಿ.ಎಂ. ಅವರು ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳು ಸ್ಪಷ್ಟ, ಸ್ಪುಟ, ನೇರವಾಗಿರಲಿ.
ನಿಮ್ಮ ಪ್ರಶ್ನೆಗಳನ್ನು ಈ ಕೆಳಗಿನ ವಾಟ್ಸಪ್ ಸಂಖ್ಯೆ 9481252093 (ವಾಟ್ಸಪ್ ಮಾತ್ರ) ಅಥವಾ ಇ-ಮೇಲ್ info@kalpa.news ಗೆ ಕಳುಹಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post