ಸಾಂದರ್ಭಿಕ ಶಿಶುವಾಗಿ ಹೊರಬಂದ ‘ಕುಮಾರ ಮಾರ್ಗ’ದ ಸಮ್ಮಿಶ್ರ ಸರ್ಕಾರ ತನ್ನ ಶತದಿನ ಪೂರೈಸಿದ ಸಂತೋಷವನ್ನು ಅನುಭವಿಸದ ಸ್ಥಿತಿಯಲ್ಲಿ ನಿಂತಿದೆ. ಕಾರ್ಯಕರ್ತರು ಕುಮಾರಣ್ಣಂಗೆ ಜೈ ಎಂದು ಕೂಗಿ ಸಂಭ್ರಮಿಸುತ್ತಿದ್ದಾರೆ.
ಆದರೆ ಕುಮಾರ ಪರ್ವ ಮಾವಿನ ತೋರಣ ಕಟ್ಟಿ ಗೃಹ ಪ್ರವೇಶ ಮಾಡಿ ದೀಪ ಹಚ್ಚಿ ಚಪ್ಪರದ ಪೂಜೆ ಮಾಡಿ ಸುಮ್ಮನೆ ಕುಳಿತಿದೆ. ಗ್ರಹಗತಿಗಳ ಲೆಕ್ಕಚಾರದಲ್ಲಿ ಗೃಹಪ್ರವೇಶವಾದರು ಸರ್ಕಾರವೆಂಬ ಸಂಸಾರವಿನ್ನು ಜನರಿಗೆ ಸ್ಪಷ್ಟವಾಗಿ ಕಾಣಸಿಗುತ್ತಿಲ್ಲ ಎಂಬುದಂತು ಸತ್ಯ.
ಅತ್ತ ದರಿ, ಇತ್ತ ಪುಲಿ
ಸಾಲಮನ್ನವೆಂಬ ಏಕೈಕ ಅಜೆಂಡಾ ಹಿಡಿದು ಬಂದ ಸರ್ಕಾರ ಯಾರ್ಯಾರದೋ ಮುಲಾಜಿಗಿ ಸಿಲುಕಿ ನರಳುತ್ತಿರುವುದು ಸ್ಪಷ್ಟ. ತನ್ನ ಸಹವಾಸಿ ಕಾಂಗ್ರೆಸ್ ಪಕ್ಷ ಅಧಿಕಾರಸ್ಥರ ಮತ್ತು ಅಧಿಕಾರ ವಂಚಿತರ ಗುಂಪುಗಳಾಗಿ ಒಡೆದು ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿ ಕುಳಿತಿದೆ. ಮಾನ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರಿಗೆ ಅತ್ತ ದರಿ ಇತ್ತ ಪುಲಿ ಎಂಬ ಅನುಭವವಾಗುತ್ತಿರಬೇಕು.
ಸಾಲಮನ್ನದ ಆಶ್ವಾಸನೆಯನ್ನೇ ಅಸ್ತ್ರವಾಗಿ ಬಳಸಿದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರು ವಿಧಾನಸಭೆಯಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡಿ ಮುಖ್ಯಮಂತ್ರಿಗಳನ್ನು ರೊಚ್ಚಿಗೆಬ್ಬಿಸಿ ತುರ್ತು ಸಾಲಮನ್ನಾ ಘೋಷಣೆ ಮಾಡುವ ಹಾಗೆ ಮಾಡಿದರು. ಮುಖ್ಯಮಂತ್ರಿಗಳು ಒಂದಷ್ಟು ಪೂರ್ವಾಲೋಚನೆಯ ಸಭೆ ಮಾಡಿ, ಎಕ್ಸಿಕ್ಯುಟಿವ್ ಪ್ಲಾನ್ ಇಲ್ಲದೆ ಘೋಷಿಸಿಯೂ ಬಿಟ್ಟರು. ವಿಪಕ್ಷಕ್ಕೇನು ಸಾಲಮನ್ನಾ ಮಾಡಿಸಿ ನಾಳೆಗೆ ರೈತರನ್ನು ಋಣಮುಕ್ತರನ್ನಾಗಿ ಮಾಡಬೇಕೆಂದಲ್ಲ, ಸಾಲಮನ್ನದ ಸಿಹಿ ಕಹಿಗಳ ಅನುಭವ ಮತ್ತು ಲೆಕ್ಕಾಚಾರ ಹಾಕಿ ಮುಂದಿನ ದಿನಗಳಲ್ಲಿ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಏಕೈಕ ಉದ್ದೇಶವಷ್ಟೇ. ಆತುರಕ್ಕೆ ಬಿದ್ದ ಆಂಜನೇಯರಂತೆ ಮಾನ್ಯ ೀಷಿಸಿದರು. ಘೋಷಿಸಿದ ನಂತರ ಹಣಕಾಸಿನ ಲೆಕ್ಕಚಾರ ಪ್ರಾರಂಭವಾಯಿತು, ಕಾನೂನಿನ ಅಡಚಣೆಗಳು ಗೋಚರವಾದವು.
ನೋಟ್ ಬ್ಯಾನ್ ನಂತರದ ಕೆಲವು ದಿನಗಳಲ್ಲಿ ಕೇಂದ್ರ ಸರ್ಕಾರ ದಿನಕ್ಕೊಂದು ಕಾನೂನು ಅಥವಾ ಮಾರ್ಗಸೂಚಿ ತಂದಂತೆಯೆ ಕುಮಾರಸ್ವಾಮಿಯವರು ಸಾಲಮನ್ನಾಕ್ಕೆ ಹಲವು ಮಾರ್ಗಸೂಚಿಗಳನ್ನು ತಂದರು. ಈ ಎಲ್ಲಾ ಮಾರ್ಗಸೂಚಿಗಳನ್ನು ಕೇಳಿದ ರೈತ ಇದು ಸಾಲಮನ್ನಾ ಅಲ್ಲ ಯಾವುದೋ ಸ್ಕೀಂ, ಇದರ ಫಲಾನುಭವಿಗಳು ನಾವಲ್ಲ ಎಂಬ ನಿರ್ಧಾರಕ್ಕೆ ಬಂದರು. ಆಶ್ವಾಸನೆಯಿಂದ ಘೋಷಣೆ ರೂಪಕ್ಕೆ ಬಂದಂದ್ದು ಇಂದು ಭರವಸೆಯಾಗಿ ಕಣ್ಣ ಮುಂದೆ ನಿಂತಿದೆ.
ಎರಡು ಕಥನದ ಕುಮಾರಣ್ಣ
ಸಾಲಮನ್ನಾದ ಕಥನ ಒಂದಾದರೆ ಸಮನ್ವಯ ಸಮಿತಿಯು ಕುಮಾರಣ್ಣನ ಮತ್ತೊಂದು ಕಥನ. ಸಮನ್ವಯ ಸಮಿತಿಯೇ ಸರ್ಕಾರಕ್ಕೆ ಗರಗಸ, ಅದರ ಅಧ್ಯಕ್ಷರು ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಪತ್ರದ ಮೇಲೆ ಪತ್ರವನ್ನು ಬರೆದು ಬಜೆಟ್, ಸಾಲಮನ್ನಾ, ಬಸ್ ಪಾಸ್, ಖಾತೆ ಹಂಚಿಕೆ ಎಲ್ಲದರಲ್ಲೂ ಪತ್ರ ಚಳುವಳಿ ಆರಂಭಿಸಿ ಮುಖ್ಯಮಂತ್ರಿಗಳ ನಿದ್ರಾಭಂಗ ಮಾಡಿದ್ದಾರೆ ಎಂಬುದು ನಮಗೆ ನಿತ್ಯ ಸುದ್ದಿಯಾಗುತ್ತಿದೆ.
ಏಕಕಾಲಕ್ಕೆ ನಾಲ್ಕು ಸಿಎಂ ಕಂಡ ರಾಜ್ಯ
ಸಿಎಂ, ಡೆಪ್ಯುಟಿ ಸಿಎಂ, ಸೂಪರ್ ಸಿಎಂ ಮತ್ತು ಸುಪ್ರಿಂ ಸಿಎಂ ಹೊಂದಿರುವ ಏಕಮಾತ್ರ ಸರ್ಕಾರವೆಂದರೆ ಅದು ಪ್ರಸ್ತುತ ಕರ್ನಾಟಕ ಸರ್ಕಾರ. ಕಳೆದ ಭಾಜಪ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ಮೂರು ಮುಖ್ಯಮಂತ್ರಿ ಮತ್ತು ಎರಡು ಉಪಮುಖ್ಯಮಂತ್ರಿಗಳನ್ನು ಸರದಿಯಾಗಿ ನೀಡಿದರೆ ಈ ಸರ್ಕಾರ ಒಂದೇ ಅವಧಿಯಲ್ಲಿ ನಾಲ್ಕು ಸಿಎಂಗಳನ್ನು ನಮಗೆ ತೋರಿಸಿ ಚತುರ್ಮುಖ ಬ್ರಹ್ಮನಂತೆ ಚತುರ್ಮುಖ ಸಿಎಂ ಕುರ್ಚಿಯನ್ನು ನಮ್ಮ ದೃಷ್ಠಿಕೋನದಲ್ಲಿಟ್ಟಿದೆ.
ಮುಖ್ಯಮಂತ್ರಿಗಳನ್ನು ಕೆಲವೊಮ್ಮೆ ಮಾಧ್ಯಮದಲ್ಲಿ ನೋಡಿದಾಗ ಸಿಂಗಲ್ ಮ್ಯಾನ್ ಆರ್ಮಿ ಎಂಬಂತೆ ಕಾಣಿಸುತ್ತದೆ. ಅವರ ಯೋಜನೆಗಳ ಸಮರ್ಥನೆಗಳಿಗೆ ಮಿತ್ರ ಪಕ್ಷದಿಂದಿರಲಿ ಸ್ವಪಕ್ಷದಲ್ಲೂ ಯಾರೂ ಕಾಣುತ್ತಿಲ್ಲ ಎನ್ನುವುದು ಮಾನ್ಯ ಮುಖ್ಯಮಂತ್ರಿಯವರ ಗಮನದಲ್ಲಿರಬಹುದು.
ಹಿಡಿತವೆಲ್ಲಿದೆ ಮುಖ್ಯಮಂತ್ರಿಗಳಿಗೆ
ಸಂಪೂರ್ಣ ಸಾಲಮನ್ನಾ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ವರಮಹಾಲಕ್ಷ್ಮಿಗೆ ಮೈಸೂರು ರೇಷ್ಮೆ ಸೀರೆ, ಪಡಿತರ ಅಕ್ಕಿ, ಬಜೆಟ್ ಈ ಎಲ್ಲಾ ಘೋಷಣೆಗಳು ಗೊಂದಲದ ಗೂಡಾಗಿವೆ. ಮುಖ್ಯಮಂತ್ರಿಗಳ ಹೇಳಿಕೆಯೆ ಒಂದು ಸಂಬಂಧಿಸಿದ ಮಂತ್ರಿ ಮಹೋದಯರ ಹೇಳಿಕೆಯೇ ಒಂದು. ಇದು ಮಾನ್ಯ ಮುಖ್ಯಮಂತ್ರಿಗಳಿಗೆ ತಮ್ಮ ಮಂತ್ರಿ ಮಂಡಳದ ಹಿಡಿತ ಇಲ್ಲವೆಂದು ತೋರಿಸುತ್ತದೆ.
ಇದರ ಮಧ್ಯೆ ಕರ್ನಾಟಕವನ್ನು ಕೇಕ್‌ನಂತೆ ಕಟ್ಟುಮಾಡಿ ಹೋಳುಮಾಡಲು ಮುಂದಾದ ಸಂಘಟನೆಗಳು ಅದಕ್ಕೆ ರಾಜಕೀಯದ ಪರೋಕ್ಷ ಬೆಂಬಲಗಳು, ಟ್ರಿಕ್‌ಸ್ ಗಳು, ಪೊಲಿಟಿಕಲ್ ಡ್ರಾಮಗಳು!! ಇದೆಲ್ಲದರ ನಡುವೆ ಕುಮಾರಣ್ಣನ ಕಣ್ಣೀರು, ಡ್ಯಾಂಗಳ ತುಂಬ ನೀರು, ಅತ್ತ ಬರಗಾಲ, ಇತ್ತ ಪ್ರವಾಹ. ಪರಿಹಾರವೂ ಇಲ್ಲ, ಪರೋಪಾಯವೂ ಇಲ್ಲ.
ಕುಮಾರಣ್ಣಂಗೆ ಜೈ ಒಂದೇ ಉಳಿದಿದೆ
ಕೊಚ್ಚಿಹೋದ ಕೊಡಗಿಗೆ ಮುಖ್ಯಮಂತ್ರಿ ಭೇಟಿ ದಾರಿಯಲ್ಲಿ ಮೋದಿ ಮೋದಿ ಎಂದ ಗುಂಪು. ಪ್ರವಾಹದಲ್ಲೂ ರಾಜಕಾರಣ ಬೆರಸಿದ ಕೊಳಕು ಮನಸ್ಸುಗಳು, ಎಲ್ಲವನ್ನು ಸಹಿಸಿದ ಮುಖ್ಯವಂತ್ರಿ, ಆದರೆ ಸೂಪರ್ ಸಿಎಂ ಬಿಸ್ಕೆಟ್ ಎಸೆತ. ನೂರು ದಿನದಲ್ಲಿ ನೂರಾರು ನ್ಯೂನತೆಗಳು. ಇದೆಲ್ಲದರಿಂದ ತಬ್ಬಿಬ್ಬಾದ ಕಾರ್ಯಕರ್ತ ಹೇಳಲು ಉಳಿದಿರುವುದು ಮಾತ್ರ ಕುಮಾರಣ್ಣಂಗೆ ಜೈ.
ಸಾಲಮನ್ನಾಕ್ಕೆ ಹಣ ಹೊಂದಿಸಲು ನೀವು ನಮ್ಮಂತಹ ಮಧ್ಯಮ ವರ್ಗದ ಜನರ ಮೇಲೆ ತೆರಿಗೆ, ವಿದ್ಯುತ್ ಶುಲ್ಕ, ಹಾಲಿನ ದರ, ಬಸ್ ಪ್ರಯಾಣದರ ಎಲ್ಲವನ್ನು ಏರಿಸಿದರೂ ಪುಣ್ಯಾತ್ಮರಾದ ಕನ್ನಡಿಗರು ಅದನ್ನು ಸಹಿಸಿ ನಿಮಗೆ ಬೆಂಬಲ ನೀಡಿದರು ಆದರೆ ಅದರ ಫಲಶೃತಿ ಮಾತ್ರ ಶೂನ್ಯ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಜನರ ವಿಶ್ವಾಸ ಮತ್ತು ಸರ್ಕಾರದ ಆತ್ಮವಿಶ್ವಾಸ ಎರಡು ಸಾಬೀತಾಗಿದೆ. ಆಡಳಿತ ಪಕ್ಷವೊಂದು ಪಕ್ಷೇತರರಿಗಿಂತ ಕಡಿಮೆ ಗೆಲುವು ಸಾಧಿಸುವುದನ್ನು ಊಹಿಸಲು ಸಾಧ್ಯವಿಲ್ಲ.
ವೈಯಕ್ತಿಕವಾಗಿ ಕರುಣಾಮಯಿ, ರೀಚಬಲ್ ಮುಖ್ಯಮಂತ್ರಿ, ಸಹಾಯ ಮನೋಭಾವ ಹೊಂದಿರುವ ನಿಮಗೆ ಆಡಳಿತದ ಯಂತ್ರವನ್ನು ಹದಕ್ಕೆ ತರುವುದು ಕಷ್ಠವೂ ಅಲ್ಲ-ಅಸಾಧ್ಯವೂ ಅಲ್ಲ, ನಿಮ್ಮ ಹಿಂದೆ ಒಂದು ಬೃಹತ್ ರಾಜಕೀಯ ತಂತ್ರಗಾರಿಕೆಯ ಕಾರ್ಖಾನೆಯೆ ಇದೆ. ಆದರೆ ಸರ್ಕಾರ ಟೇಕ್ ಆಫ್ ಆಗದೇ ಇದ್ದರೆ ಜನ ನಿಮ್ಮನ್ನು ನಂಬುವುದಾದರು ಹೇಗೆ?
ಅಂತರಂಗದಲ್ಲಿ ಪ್ರಶ್ನಿಸಿಕೊಳ್ಳಿ ಒಮ್ಮೆ
ಜನಸ್ಪಂದನದಲ್ಲಿ ಸ್ಪಂದಿಸುವ ನೀವು, ಗ್ರಾಮ ವಾಸ್ತವ್ಯ ಮಾಡಿ ಕುಮಾರಸ್ವಾಮಿಯಿಂದ ಕುಮಾರಣ್ಣನಾದ ನೀವು ಗಳಿಸಿದ ಜನರ ವಿಶ್ವಾಸ ಅಸಾಮಾನ್ಯ, ನಿಮ್ಮ ಮೇಲೆ ವೈಯಕ್ತಿಕವಾಗಿ ಭರವಸೆ ಇಡುವ ಜನ ನಿಮ್ಮ ಪಕ್ಷ ಮತ್ತು ಸರ್ಕಾರದ ಮೇಲೆ ವಿಶ್ವಾಸ ಇಡದಿರುವುದು ಸೋಜಿಗದ ಸಂಗತಿ. ನಿಮ್ಮ ಪಕ್ಷ ಮತ್ತು ಸರ್ಕಾರದ ನಿರ್ಧಾರಗಳು ಜನರಿಗೆ ಅಥವಾ ಅವರ ಭಾವನೆಗಳಿಗೆ ಸರಿ ಹೊಂದದಿರುವುದೇ ಅದಕ್ಕೆ ಮುಖ್ಯ ಕಾರಣವಿರಬಹುದು ಎಂದೆನ್ನಿಸುತ್ತದೆ. ಈ ವಿಚಾರವಾಗಿ ನೀವು ನಿಮ್ಮ ಅಂತರಂಗದಲ್ಲಿ ಪ್ರಶ್ನಿಸಿದರೆ ನಿಮಗೆ ಉತ್ತರ ಸಿಗಬಹುದು.
ಮಾನ್ಯ ಮುಖ್ಯಮಂತ್ರಿಗಳೇ ಯಾವ ಪೂಜೆಯ ಫಲವೋ ನಿಮಗೆ ಈ ಬಾರಿ ಒಂದು ಸುಂದರ ಅವಕಾಶ ದೊರಕಿದೆ. ಭಾರತದ ರಾಜಕೀಯ ಮನಃಸ್ಥಿತಿ ಮತ್ತು ಪರಿಸ್ಥಿತಿ ಎರಡೂ ಬದಲಾಗಿದೆ, ಜನರೂ ಸಹ ಬದಲಾಗಿದ್ದಾರೆ. ಒಂದು ಕುಟುಂಬ, ಒಂದು ಪಕ್ಷಕ್ಕೆ ಜೋತು ಬೀಳದೆ ದೇಶದ ಪರಿಸ್ಥಿತಿಗೆ ಅನುಗುಣವಾಗಿ ಸಮರ್ಥ ನಾಯಕರನ್ನು ಆರಿಸುವ ಅರಿವು ಮತ್ತು ಜಾಗರೂಕತೆ ಮತದಾರರಾದ ಜನರ ಮನಸ್ಸಿಗೆ ಬಂದಿದೆ. ವಂಶವಾಹಿ ಆಡಳಿತಗಳಿಗೆ ಒಂದು ಪೂರ್ಣವಿರಾಮ ಹಾಕುವ ದಿನಗಳು ಸನಿಹವಿದೆ.
ಆಮಿಶ, ಪೊಳ್ಳು ಭರವಸೆ, ಆಶ್ವಾಸನೆಗಳಿಗೆ ಬಗ್ಗದೆ ಕೇವಲ ಕೆಲಸಗಾರರನ್ನು ಆಯ್ಕೆಮಾಡುವ ದೊಡ್ಡ ಸಮೂಹವೇ ಭಾರತದಲ್ಲಿ ನಿಂತಿದೆ. ಈಗ ನೀವು ಜನರ ವಿಶ್ವಾಸ ಗಳಿಸುವುದು ಅತಿಮುಖ್ಯ. ಬಹಳ ಜನರಿಗೆ ಈಗ ಪುಕ್ಕಸಟ್ಟೆ ಸಿಗುವ ಸ್ಕೀಂಗಳು ಬೇಡವಾಗಿದೆ, ರಾಜಕೀಯದ ನಾಟಕಗಳನ್ನು ಅರಿಯುವ ಬುದ್ದಿವಂತಿಕೆ ಜನರಿಗೆ ಬಂದಿದೆ, ಓಲೈಕೆಯ ರಾಜಕಾರಣವನ್ನು ಜನ ತಿರಸ್ಕರಿಸಿ ನಿಂತಿದ್ದಾರೆ. ಈಗ ಜನರಿಗೆ ಬೇಕಿರುವುದು ಅನುಕಂಪದ ಸರ್ಕಾರವಲ್ಲ, ಓಲೈಕೆಯ ಸರ್ಕಾರವಲ್ಲ ಕೇವಲ ಆಡಳಿತಾತ್ಮಕ ಸರ್ಕಾರ. ಆಡಳಿತಾತ್ಮಕ ಸರ್ಕಾರವಷ್ಟೇ ಜನರ ನಿರೀಕ್ಷೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಏರಿದರೂ, ನೋಟ್ ಬ್ಯಾನ್ ಆದರೂ, ರುಪಾಯಿ ಮೌಲ್ಯ ಕುಸಿದರು ಜನ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡದಿರುವುದು ಅವರ ಆಡಳಿತಾತ್ಮಕ ಸರ್ಕಾರವನ್ನು ಮೆಚ್ಚಿ , ಒಪ್ಪಿ ಮತ್ತು ಅವರು ಆ ನಂಬಿಕೆ ಗಳಿಸಿರುವುದರಿಂದ. ತಾವು ದಯಮಾಡಿ ಓಲೈಕೆ ರಾಜಕಾರಣ ಮತ್ತು ಮಿತ್ರಪಕ್ಷಕ್ಕೆ ಭಾಗದೇ ಕರ್ನಾಟಕದ ಅಭಿವೃದ್ದಿಗೆ ಪೂರಕವಾದ ಕಠಿಣ ನಿರ್ಧಾರವನ್ನು ತೆಗೆದು ಕೊಂಡರೆ ಜನ ನಿಮ್ಮನ್ನು ಬೆಂಬಲಿಸುತ್ತಾರೆ. ಇಲ್ಲದಿದ್ದರೆ ಕೇವಲ ಎರಡು ಮೂರು ಜಿಲ್ಲೆಗೆ ಸೀಮಿತವಾದ ಸರ್ಕಾರವೆಂದು ಬಿಂಬಿಸುತ್ತಾರೆ.
ಆಡಳಿತ ನಿಮ್ಮದು ಮುಂದಿನ ನಿರ್ಧಾರ ನಮ್ಮದು! ಇದು ಈಗಿನ ರಾಜಕೀಯದ ದುನಿಯ!! ಇದನ್ನು ಅರಿತರೆ ಒಳಿತು ಮರೆತರೆ ಕೆಡಿತು. ಆದಷ್ಟು ಬೇಗ ಸರ್ಕಾರ ಟೇಕ್ ಆಫ್ ಆಗಲಿ, ಕರ್ನಾಟಕದ ಅಭಿವೃದ್ಧಿಯಾಗಲಿ…
-ಪುನೀತ್ ಜಿ. ಕೂಡ್ಲೂರು, ಮೈಸೂರು
Discussion about this post