ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದ್ವಾದಶೈತಾನಿ ನಾಮಾನಿ ಕಪೀಂದ್ರಸ್ಯ ಮಹಾತ್ಮನಃ
ಸ್ವಾಪಕಾಲೇ ಪಠೇನ್ನಿತ್ಯಂ ಯಾತ್ರಾಕಾಲೇ ವಿಶೇಷತಃ
ತಸ್ಯಮೃತ್ಯು ಭಯಂನಾಸ್ತಿ ಸರ್ವತ್ರ ವಿಜಯೀ ಭವೇತ್॥
ಸನಾತನ ಪರಂಪರೆಯಲ್ಲಿ ಕಾಶಿ ಅಥವಾ ವಾರಣಾಸಿ ಕ್ಷೇತ್ರಕ್ಕೆ ವಿಶೇಷ ಐತಿಹ್ಯವಿದೆ. ಬಹುತೇಕ ಹಿಂದೂಗಳೂ ತಮ್ಮ ಜೀವಮಾನದಲ್ಲೊಮ್ಮೆ ಕಾಶಿ ಯಾತ್ರೆ ಮಾಡಬೇಕು ಎಂಬ ಮನೋಭಿಷ್ಟ ಹೊಂದಿರುತ್ತಾರೆ. ಆದರೆ, ಎಲ್ಲರಿಗೂ ಕಾಶಿಗೆ ಹೋಗಲು ಸಾಧ್ಯವಾಗುವುದಿಲ್ಲ. ಇಂತಹ ವ್ಯಕ್ತಿಗಳು ಕರ್ನಾಟಕದ ಈ ಮೂರು ಪುಣ್ಯ ಕ್ಷೇತ್ರಗಳಿಗೆ ಒಂದೇ ದಿನ ಭೇಟಿ ನೀಡಿ, ದೇವರ ದರ್ಶನ ಪಡೆದರೆ ಕಾಶಿಗೆ ಹೋದಷ್ಟೇ ಪುಣ್ಯ ಲಭಿಸುತ್ತದೆ. ಹಾಗಾದರೆ, ಯಾವುವು ಆ ಮೂರು ಕ್ಷೇತ್ರಗಳು? ನೋಡೋಣ ಬನ್ನಿ.
ಅದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣ. ನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಈ ಸ್ಥಳದಲ್ಲಿ ನೆಲೆಸಿದ್ದಾನೆ ಶ್ರೀ ಹುಚ್ಚರಾಯ ಸ್ವಾಮಿ.
ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಶ್ರೀ ಆಂಜನೇಯ, ಪ್ರಾಣದೇವರು, ಹನುಮಂತ ಎಂದೆಲ್ಲಾ ಭಕ್ತರಿಂದ ಕರೆಯಲ್ಪಡುವ ಚಿರಂಜೀವಿ ಇಲ್ಲಿ ಶ್ರೀ ಹುಚ್ಚರಾಯ ಸ್ವಾಮಿಯಾಗಿ ನೆಲೆ ನಿಂತಿದ್ದಾನೆ.
ನೂರಾರು ವರ್ಷಗಳ ಹಿಂದೆ ಇಲ್ಲಿಗೆ ಸಮೀಪವಿದ್ದ ದೇವಾಲಯವೊಂದನ್ನು ದುಷ್ಟರು ಕೆಡವಿ ಮೂರ್ತಿಯನ್ನು ಕೆರೆಗೆ ಹಾಕುತ್ತಾರೆ. ಹಾಗೇ, ಹಲವು ವರ್ಷಗಳ ನಂತರ ಈ ಪ್ರದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ಪಾಳೇಗಾರನೊಬ್ಬನಿಗೆ ಸ್ವಪ್ನದಲ್ಲಿ ಕಾಣಿಸಿಕೊಳ್ಳುವ ಆಂಜನೇಯ ಸ್ವಾಮಿ, ‘ಇಲ್ಲಿನ ಕೆರೆಯಲ್ಲಿ ನಾನಿದ್ದೇನೆ. ನನ್ನ ಮೇಲೆ ಬಟ್ಟೆ ಒಗೆಯುವುದು, ಸ್ನಾನ ಮಾಡುವುದನ್ನು ಮಾಡುತ್ತಿದ್ದಾರೆ. ಇದನ್ನು ತಪ್ಪಿಸಿ ನನ್ನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡು ಎಂದು ಆದೇಶಿಸುತ್ತಾನೆ.
ಇದನ್ನು ಅನುಸರಿಸಿದ ಪಾಳೆಗಾರ, ಇಲ್ಲಿಗೆ ಆಗಮಿಸಿ ಕೆರೆಯ ನೀರನ್ನು ಖಾಲಿ ಮಾಡಿಸಿ ನೋಡಿದಾಗ ದೊಡ್ಡ ಬಾನಿಯಲ್ಲಿ ಮಣ್ಣಿಗೆ ಅಂಟಿಕೊಂಡಿದ್ದ ಮೂರ್ತಿಯಿರುತ್ತದೆ. ಇದನ್ನು ಮೇಲಕ್ಕೆ ಎತ್ತುವಾಗ ಹಾರೆಯ ಪೆಟ್ಟಿಗೆ ಆಂಜನೇಯ ಸ್ವಾಮಿಯ ಮೂಗಿನ ಭಾಗ ಒಡೆದು ಹೋಗುತ್ತದೆ. ಇದರಿಂದ ಬೇಸರಗೊಂಡ ಪಾಳೆಗಾರನ ಸ್ವಪ್ನದಲ್ಲಿ ಒಂದು ದಿನ ಮತ್ತೆ ಕಾಣಿಸಿಕೊಳ್ಳುವ ದೇವರು, ದಂಡಕಿ ನದಿಯಲ್ಲಿ ದೊರೆಯುವ ಮತ್ಸ್ಯ ಸಾಲಿಗ್ರಾಮವನ್ನು ಮೂಗಿನ ಭಾಗದಲ್ಲಿ ಇರಿಸಿ, ಪ್ರತಿಷ್ಠಾಪನೆ ಮಾಡುವಂತೆ ಆದೇಶಿಸುತ್ತಾನೆ. ಇದರಂತೆ ಈ ವಿಚಾರವನ್ನು ತಿಳಿದುಕೊಂಡ ಪಾಳೇಗಾರ ಸಾಲಿಗ್ರಾಮ ತರಲು ಜನರನ್ನು ಕಳುಹಿಸುತ್ತಾನೆ.
ಕೆಲವು ದಿನಗಳ ನಂತರ, ಮತ್ತೆ ಸ್ವಪ್ನದಲ್ಲಿ ಬರುವ ಸ್ವಾಮಿ, ಮೂರ್ತಿಯನ್ನು ಗಾಡಿಯಲ್ಲಿ ತೆಗೆದುಕೊಂಡು ಹೋಗು. ಎಲ್ಲಿ ಗಾಡಿಯ ಅಚ್ಚು ಮುರಿಯುತ್ತದೋ ಅಲ್ಲಿಯೇ ಪ್ರತಿಷ್ಠಾಪನೆ ಮಾಡು ಎಂದು ಆದೇಶಿಸುತ್ತಾನೆ.
ಇದರಂತೆ, ಮೂರ್ತಿಯನ್ನು ಗಾಡಿಯಲ್ಲಿಟ್ಟು ತೆಗೆದುಕೊಂಡು ಬರುವ ವೇಳೆ ಈಗ ದೇವಾಲಯವಿರುವ ಜಾಗದಲ್ಲಿದ್ದ ಓರ್ವ ಸನ್ಯಾಸಿಯ ಕುಟೀರದ ಬಳಿ ಮುರಿದು ಹೋಗುತ್ತೆ. ಆದರೆ, ಸನ್ಯಾಸಿ ಇದಕ್ಕೆ ಒಪ್ಪದೇ ತಿರಸ್ಕರಿಸುತ್ತಾರೆ.
ಆದರೆ, ಮುಂದೊಂದು ದಿನ ಮತ್ಸ್ಯ ಸಾಲಿಗ್ರಾಮ ಈ ಊರಿಗೆ ಬಂದ ನಂತರ ದೇವರು ಸನ್ಯಾಸಿಯ ಕನಸಿನಲ್ಲಿ ಬಂದು ಹಿಂದೆ ರಾಜ ನಿನ್ನ ಬಳಿ ಕೇಳಿದಂತೆ ಈ ಜಾಗವನ್ನು ದೇವಾಲಯಕ್ಕೆ ಕೊಡು. ಹಾಗೆಯೇ ನಿನ್ನ ಹೆಸರನ್ನೇ ದೇವರಿಗೆ ಇಡುವಂತೆ ಕೋರಿಕೋ ಎಂದು ಆದೇಶಿಸುತ್ತಾನೆ. ಆನಂತರ ಪಾಳೇಗಾರನನ್ನು ಭೇಟಿಯಾಗುವ ಸನ್ಯಾಸಿ ತನ್ನ ಸ್ಥಳವನ್ನು ಸ್ವೀಕರಿಸುವಂತೆಯೂ ಹಾಗೂ ದೇವರಿಗೆ ತನ್ನ ಹೆಸರು ಇಡುವಂತೆಯೂ ಹೇಳುತ್ತಾರೆ. ಆ ಸನ್ಯಾನಿಯ ಹೆಸರು ಹುಚ್ಚಪ್ಪ ಒಡೆಯರ್.
ತತಕ್ಷಣವೇ ಕಾರ್ಯಪ್ರವೃತ್ತನಾದ ಪಾಳೇಗಾರ ಪ್ರತಿಷ್ಠಾಪನೆಗೆ ಚೈತ್ರ ಮಾಸದ ಶುಕ್ಲ ಪಕ್ಷದ ಪೌರ್ಣಮಿಯನ್ನು ನಿಗದಿಪಡಿಸುತ್ತಾನೆ. ಇದೇ ವೇಳೆಯಲ್ಲಿ ಯತಿಶ್ರೇಷ್ಠರಲ್ಲಿ ಒಬ್ಬರಾದ ಶ್ರೀ ವ್ಯಾಸತೀರ್ಥರ ಸ್ವಪ್ನದಲ್ಲಿ ಕಾಣಿಸಿಕೊಳ್ಳುವ ಆಂಜನೇಯ ಸ್ವಾಮಿ ಈ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಂತೆ ಆದೇಶಿಸುತ್ತಾನೆ. ಇದರಂತೆ, ಪಾಳೇಗಾರನನ್ನು ಭೇಟಿಯಾಗುವ ವ್ಯಾಸತೀರ್ಥರು ಸ್ವತಃ ತಮ್ಮ ಅಮೃತ ಹಸ್ತದಿಂದ ಶಿಕಾರಿಪುರದಲ್ಲಿ ಹುಚ್ಚರಾಯ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.
ಇಂತಹ ಸ್ವಾಮಿಯ ದರ್ಶನ ಪಡೆದ ಲಕ್ಷಾಂತರ ಮಂದಿಯ ಕಷ್ಟ ಕಾರ್ಪಣ್ಯಗಳು ದೂರಾಗಿ, ತಮ್ಮ ಮನೋಭಿಲಾಷೆ ಈಡೇರಿದೆ.
ಪ್ರತಿವರ್ಷ ಇಲ್ಲಿ ವಿಜೃಂಭಣೆಯಿಂದ ಸ್ವಾಮಿಯ ರಥೋತ್ಸವ ಜರುಗುತ್ತದೆ. ಇಂದಿನ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ನಂತರ ದೇವಾಲಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೊಂದು ಸಮುದಾಯ ಭವನ, ಅತ್ಯಂತ ಸುಂದರ ಹಾಗೂ ಸ್ವಚ್ಛವಾದ ಕಲ್ಯಾಣಿಗೆ ಕಾರಣಕರ್ತರಾಗಿದ್ದಾರೆ.
ನಾವು ಆರಂಭದಲ್ಲಿ ಹೇಳಿದಂತೆ ಮೂರು ಪುಣ್ಯ ಕ್ಷೇತ್ರಗಳಲ್ಲಿ ಶಿಕಾರಿಪುರದ ಹುಚ್ಚರಾಯ ಸ್ವಾಮಿ ಕ್ಷೇತ್ರ ಮಹತ್ವವಾದುದು. ಒಂದೇ ದಿನ, ಅದರಲ್ಲೂ ಚೈತ್ರ ಮಾಸ, ಶ್ರಾವಣ ಮಾಸ, ಅಧಿಕ ಮಾಸದಲ್ಲಿ ಈ ಮೂರು ಕ್ಷೇತ್ರಗಳನ್ನು ದರ್ಶನ ಮಾಡಿದರೆ ಮಹಾಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗಾದರೆ, ಇನ್ನುಳಿದ ಎರಡು ಕ್ಷೇತ್ರಗಳು ಯಾವುವು? ಅವು ಹಾವೇರಿ ಜಿಲ್ಲೆಯ ಕದರಮಂಡಲಗಿ ಕಾಂತೇಶ ಹಾಗೂ ಹಿರೇಕೆರೂರು ತಾಲೂಕು ಸಾತೇನಹಳ್ಳಿಯ ಶಾಂತೇಶ. ಈ ಎರಡು ಕ್ಷೇತ್ರಗಳ ಬಗ್ಗೆ ಮುಂದಿನ ಲೇಖನದಲ್ಲಿ ಹೇಳುತ್ತೇವೆ.
Get In Touch With Us info@kalpa.news Whatsapp: 9481252093

















