ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಕೊರೋನಾ ಹರಡುವಿಕೆ ತಡೆಗಟ್ಟುವಲ್ಲಿ ಪ್ರಥಮ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದು ಜಿಪಂ ಸದಸ್ಯೆ ರಾಜೇಶ್ವರಿ ಎಚ್. ಗಣಪತಿ ಹೇಳಿದರು.
ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಎಸ್. ಬಂಗಾರಪ್ಪ ಫೌಂಡೇಶನ್‍ನಿಂದ ಶುಕ್ರವಾರ ಆಶಾಕಾರ್ಯಕರ್ತೆಯರಿಗೆ ಅಭಿನಂದಿಸಿ, ಗೌರವ ಪೂರ್ವಕವಾಗಿ ಉಡಿ ತುಂಬಿ, ಸೀರೆ ಮತ್ತು ಛತ್ರಿಯನ್ನು ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೊರೋನಾ ಯೋಧರಾಗಿ ಕಾರ್ಯನಿರ್ವಹಿಸುತ್ತಿರುವ ಆಶಾಕಾರ್ಯಕರ್ತೆಯರ ಶ್ರಮ ಅವರ್ಣನೀಯ, ನಿತ್ಯ ಮನೆ ಮನೆ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ಕಾಳಜಿವಹಿಸುತ್ತಿರುವ ಆಶಾಕಾರ್ಯಕರ್ತೆಯರಿಗೆ ಸುಕ್ಷೇತ್ರ ಚಂದ್ರಗುತ್ತಿಯಲ್ಲಿ ಶ್ರಾವಣ ಮಾಸದಲ್ಲಿ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸವೆನಿಸುತ್ತಿದೆ ಎಂದ ಅವರು, ಆಶಾ ಕಾರ್ಯಕರ್ತೆಯರ ಸೇವೆಯನ್ನು ಸರ್ಕಾರ ಖಾಯಂಗೊಳಿಸಿ ಜೀವನ ಭದ್ರತೆಯನ್ನು ನೀಡಬೇಕು ಎಂದರು.
ತಾಪಂ ಸದಸ್ಯ ಎನ್.ಜಿ. ನಾಗರಾಜ ಮಾತನಾಡಿ, ಕೊರೋನಾ ಹರಡುವಿಕೆ ತಡೆಗಟ್ಟುವಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರು ಮೊದಲ ಸಾಲಿನಲ್ಲಿದ್ದಾರೆ. ಎಸ್. ಮಧುಬಂಗಾರಪ್ಪ ಅವರ ಮಾರ್ಗದರ್ಶನದಲ್ಲಿ ತಾಲ್ಲೂಕಿನಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಮುಂದುವರೆದ ಭಾಗವಾಗಿ ಆಶಾ ಕಾರ್ಯಕರ್ತೆಯರಿಗೆ ಕೃತಜ್ಞತಾ ಮನೋಭಾವದಿಂದ ಅಭಿನಂದಿಸಲಾಗುತ್ತಿದೆ ಎಂದರು.
ಎಸ್. ಬಂಗಾರಪ್ಪ ಅಭಿಮಾನಿ ಬಳಗದ ಮಾರ್ಯಪ್ಪ ಬೆನ್ನೂರು ಮಾತನಾಡಿ, ಕುಟುಂಬ ನಿರ್ವಹಣೆಯ ಜೊತೆಗೆ ಆಶಾಕಾರ್ಯಕರ್ತೆಯರು ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರ ಕಾರ್ಯವನ್ನು ಗೌರವಯುತವಾಗಿ ಕಾಣಬೇಕು. ತಮ್ಮ ಜೀವದ ಹಂಗು ತೊರೆದು ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಆಶಾಕಾರ್ಯಕರ್ತೆರಿಗೆ ಸರ್ಕಾರ ಸೌಲಭ್ಯಗಳನ್ನು ಒದಗಿಸಬೇಕು. ಕೆಲಸವನ್ನು ಖಾಯಂಗೊಳಿಸಿ, ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ, ತಾಪಂ ಸದಸ್ಯ ಸುನೀಲ್ ಗೌಡ, ಪ್ರಮುಖರಾದ ಉಮಾಪತಿ ನಾಯ್ಕ್, ರೇಣುಕಾಪ್ರಸಾದ್, ಎಂ.ಪಿ. ರತ್ನಾಕರ, ಮೋಹನ್ ಕಾನಡೆ, ನಾರಾಯಣಪ್ಪ ಜೋಳದಗುಡ್ಡೆ, ಸತ್ಯವತಿ ನಾಯ್ಕ್, ಶ್ರುತಿ ಕೃಷ್ಣಪ್ಪ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
Get In Touch With Us info@kalpa.news Whatsapp: 9481252093
Discussion about this post