ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವೈಜ್ಞಾನಿಕ ಹಿನ್ನೆಲೆಯ ಪ್ರತಿ ಭಾರತೀಯ ಹಬ್ಬಗಳು ಪ್ರಕೃತಿ ಆರಾಧನೆಯ ಮಹತ್ವ ಸಾರುತ್ತವೆ. ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳುವ ಪ್ರಕ್ರಿಯೆಯ ಅಂಗವಾಗಿ ಪ್ರತಿ ಹಬ್ಬಗಳು ನಮ್ಮ ಪೂರ್ವಜರಿಂದ ರೂಪಿತಗೊಂಡು ಇಂದಿಗೂ ಆಚರಣೆಯಲ್ಲಿರುವುದು ನಮ್ಮ ಜೀವನ ಶೈಲಿಗೆ ನಮ್ಮ ಹಿರಿಯರ ಕೊಡುಗೆಯಾಗಿದೆ. ಆದರೆ ಆಧುನಿಕತೆಯ ಪ್ರಭಾವಕ್ಕೊಳಗಾಗಿ ಈ ಹಬ್ಬಗಳು ಹೈಟೆಕ್ ಟಚ್ ಪಡೆದು ಕಾಲಕ್ಕನುಗುಣವಾಗಿ ಹೊಸರೂಪ ಪಡೆಯುತ್ತಾ ಬಂದಿರುವುದಕ್ಕೆ ಸಾಕ್ಷಿಯಾಗಿ ಇಂದಿನ ಹಿರಿಯರು ಹೇಳುವ ಅನುಭವಗಳೇ ಸಾಕು.
ವರ್ಷಕ್ಕೊಮ್ಮೆ ಬರುವ ಈ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲು ಹೆಂಗಳೆಯರು ತಿಂಗಳುಗಳ ತಯಾರಿಯನ್ನೇ ನಡೆಸಿರುತ್ತಾರೆ. ಇಂತಹ ಹಬ್ಬಗಳಲ್ಲಿ ಪ್ರಮುಖವಾದ ಸ್ವರ್ಣಗೌರಿ ವ್ರತಾಚರಣೆ ಹೆಣ್ಣುಮಕ್ಕಳಿಗೆ ಬಹಳ ವಿಶೇಷವಾದದ್ದು.
ತವರು ಮನೆಯಿಂದ ಗೌರಿ ಹಬ್ಬಕ್ಕೆಂದು ಕಳಿಸುವ ನೂರಿನ್ನೂರು ರೂಪಾಯಿಗಳನ್ನು ಹರಿಸಿನ ಕುಂಕುಮ ಹಸಿರು ಬಳೆಗಳಿಗಾಗಿ ವಿನಿಯೋಗಿಸಿ ಹೃದಯತುಂಬಿ ಆನಂದವನ್ನನುಭವಿಸುವ ಮೂಲಕ ತಾನು ಸೌಭಾಗ್ಯವತಿಯಾಗಿರಲು ತವರು ಮನೆಯಿಂದ ಬಂದ ಭಾವನಾತ್ಮಕ ಉಡುಗೊರೆಗೆ ಹೆಣ್ಣುಮಕ್ಕಳು ಕಟ್ಟುವ ಬೆಲೆ ಕೋಟಿಗೂ ಮೀರಿದ್ದು. ತವರನ್ನು ಎಂದಿಗೂ ಚೆನ್ನಾಗಿಡಲು ಹೆಣ್ಣುಮಕ್ಕಳು ದೇವರಲ್ಲಿ ಸದಾ ಪ್ರಾರ್ಥಿಸುವ ಹಿಂದಿನ ಸತ್ಯ ಇದೇ ಆಗಿರಬಹುದಲ್ಲವೇ?
ಅಕ್ಕ ಪಕ್ಕದವರನ್ನು ನೆಂಟರಿಷ್ಟರನ್ನು ಬಂಧು ಬಳಗದವರನ್ನು ಕರೆದು ಕುಂಕುಮವಿತ್ತು ಬಾಗಿನ ವಿನಿಮಯಿಸಿಕೊಂಡು ಪ್ರತಿ ವರ್ಷವೂ ಗೌರಿಯನ್ನು ಮನೆ ಮನಗಳಲ್ಲಿ ತುಂಬಿಸಿಕೊಳ್ಳುತ್ತಾ, ಕುಟುಂಬಗಳಲ್ಲಿ ಸಂತಸದ ಚಿಲುಮೆಯನ್ನು ಸೃಷ್ಟಿಸಿ ವರ್ಷಗಳವರೆಗೆ ಕಾಪಾಡಿಕೊಳ್ಳುತ್ತಾರೆ.
ಆದರೆ ಈ ಬಾರಿಯ ಹಬ್ಬ ಹರಿದಿನಗಳಲ್ಲಿ ಕನಿಷ್ಠ ಪಕ್ಷ ಅಕ್ಕಪಕ್ಕದವರನ್ನೂ ಕರೆಯದಿರುವಂತೆ ಮಾಡಿರುವ ಕೊರೋನಾ ಮಹಾಮಾರಿ ಎಲ್ಲ ಹಬ್ಬಗಳನ್ನು ನುಂಗಿ ಬಿಟ್ಟಿದೆ. ಆದರೂ ಧೃತಿಗೆಡದ ನಮ್ಮ ನಾರಿಯರು ತಮ್ಮ ತಮ್ಮ ಮನೆಗಳಿಗೆ ಸೀಮಿತಗೊಂಡಂತೆ ವಿಜೃಂಭಣೆಗೆ ಯಾವುದೇ ಕೊರತೆಯಾಗದಂತೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಧನ್ಯತಾ ಭಾವ ಹೊಂದಿದ್ದಾರೆ. ಜೊತೆಯಲ್ಲಿ ದೇವಿಗೆ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಬೇಡಿಕೆಗಳೊಂದಿಗೆ ಈ ಬಾರಿ ಜಗತ್ತನ್ನು ಕೊರೋನಾ ಮಹಾಮಾರಿಯಿಂದ ಮುಕ್ತಿಗೊಳಿಸಿ ನಾಡನ್ನು ಸಂರಕ್ಷಿಸುವ ಬೇಡಿಕೆಯನ್ನೂ ಇಟ್ಟಿರುವುದು ವಿಶೇಷವಾಗಿದೆ.
ಇದರೊಟ್ಟಿಗೆ ತಮ್ಮಗಳ ಕರ್ತವ್ಯಪಾಲನೆಯನ್ನು ಮೆರೆದು ಸಾಮಾಜಿಕ ಜವಾಬ್ದಾರಿಯ ಜಾಗೃತಿ ಮೂಡಿಸಿರುವ ಉದಾಹರಣೆಗಳೂ ಸಾಕಷ್ಟಿವೆ. ಶಿವಮೊಗ್ಗೆಯ ಹೊಸಮನೆ ಬಡಾವಣೆಯ ಶ್ರೀಮತಿ ರಾಜಲಕ್ಷ್ಮೀಯವರು ತಮ್ಮ ಸೊಸೆಯಂದಿರೊಂದಿಗೆ ಈ ಬಾರಿಯ ಗೌರಿ ಹಬ್ಬವನ್ನು ಇದೇ ರೀತಿಯ ಸಾಮಾಜಿಕ ಜಾಗೃತಿ ಮೂಡಿಸುವ ಮೂಲಕ ಸ್ವರ್ಣಗೌರಿ ಹಬ್ಬವನ್ನು ಆಚರಿಸಿರುವುದು ವಿಶೇಷವೆನಿಸಿದೆ. ಸ್ವರ್ಣ ಗೌರಿಯ ಮುಖಕ್ಕೂ ಮಾಸ್ಕ್ ಹಾಕಿ ವ್ರತಾಚರಣೆ ಆಚರಿಸುವ ಮೂಲಕ ಪ್ರಶಂಸೆಗೆ ಕಾರಣವಾಗಿರುವ ಶ್ರೀಮತಿ ರಾಜಲಕ್ಷ್ಮೀಯವರು ಹೇಳುವಂತೆ ದೇವರಿಗೇ ಮಾಸ್ಕ್ ಹಾಕುವ ಅಗತ್ಯವಿಲ್ಲವಾದರೂ ಈ ಮೂಲಕ ಸ್ವಚ್ಛತೆಯೊಂದಿಗೆ ನಮ್ಮ ಜೀವನ ಶೈಲಿಯಲ್ಲಿ ಒಂದಷ್ಟು ನೀತಿ ನಿಬಂಧನೆಗಳನ್ನು ಹಾಕಿಕೊಂಡಲ್ಲಿ ಎಂತಹ ಮಹಾಮಾರಿಯನ್ನು ಓಡಿಸಲು ನಮಗೆ ಕಷ್ಟವಾಗಲಾರದು ಎಂಬ ಸಂದೇಶ ಸಾರುವ ಉದ್ದೇಶವಾಗಿ ಈ ಮಾಸ್ಕ್ ತೊಟ್ಟ ಸ್ವರ್ಣ ಗೌರಿಯನ್ನು ಪ್ರತಿಷ್ಠಾಪಿಸಿರುವುದು ಎನ್ನುತ್ತಾರೆ.
ಆಧುನಿಕತೆಯ ವ್ಯಂಗ್ಯವಲ್ಲದಿದ್ದರೂ ಪರಿಸ್ಥಿತಿಯ ಅವಲೋಕನಕ್ಕೆ ಅವಕಾಶ ಮಾಡಿಕೊಡುವ ಇಂತಹ ಬದಲಾದ ಆಚರಣೆಗಳ ಮಹತ್ವ ಸಾರುವ ಮೂಲಕ ನಮ್ಮ ಹಬ್ಬಗಳು ನಮ್ಮ ಸಂಪ್ರದಾಯ ನಮ್ಮ ಸಂಸ್ಕೃತಿಗಳು ಎಂದಿಗೂ ಭಾರತೀಯತೆಯ ಬುನಾದಿಯಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಸಾಮಾಜಿಕ ಸಂದೇಶ ಸಾರುವ ಈ ಪ್ರಯತ್ನದಲ್ಲಿ ಲಕ್ಷ್ಮೀ ಅನಿಲ್, ಜ್ಯೋತಿ ನಾಗರಾಜ, ರೇಖಾ ಸತೀಶ್ ಅವರುಗಳು ಪಾಲ್ಗೊಂಡು ಪೂಜೆ ಸಲ್ಲಿಸಿದರು.
Get In Touch With Us info@kalpa.news Whatsapp: 9481252093
Discussion about this post