ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉತ್ತರ ಕನ್ನಡ: ಕೃಷಿ ವಿಶ್ವವಿದ್ಯಾಲಯಗಳು ಕೇವಲ ಬೋಧನೆಗಷ್ಟೇ ಸೀಮಿತವಾಗದೇ ಕೃಷಿ ವಿಶ್ವವಿದ್ಯಾಲಗಳು ರೈತ ಸ್ನೇಹಿಯಾಗಬೇಕು. ಕೃಷಿ ವಿಜ್ಞಾನಿಗಳು ರೈತರ ಹೊಲದ ಕಡೆಗೂ ಹೋಗಿ ರೈತ ಸಂಪರ್ಕ ಸಾಧಿಸಿ, ಕೃಷಿಕರಿಗೆ ಅರಿವು ಮೂಡಿಸುವಂತಹ ಕೆಲಸವಾಗಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಕರೆ ನೀಡಿದ್ದಾರೆ.
ಇಂದು ಕೃಷಿ ವಿಶ್ವವಿದ್ಯಾಲಯ ಧಾರವಾಡ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ನವ ದೆಹಲಿ, ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ಉತ್ತರ ಕನ್ನಡ(ಶಿರಸಿ)ಯ ನೂತನ ಆಡಳಿತ ಭವನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯದ ಅಧಿಕಾರಿಯನ್ನು ವಿಶ್ವವಿದ್ಯಾಲಯದ ವ್ಯಾಪ್ಯಿಗೊಳಪಡುವ ಪ್ರತಿಜಿಲ್ಲೆಗೊಬ್ಬ ನೋಡೆಲ್ ಆಫಿಸರ್ ಹಾಗೂ ಪ್ರತಿಯೊಂದು ರೈತ ಸಂಪರ್ಕಕೇಂದ್ರಕ್ಕೆ ಅಸಿಸ್ಟೆಂಟ್ ಪ್ರೊಫೆಸರ್ ಗಳನ್ನು ನೇಮಕ ಮಾಡಬೇಕು. ಕೃಷಿ ವಿಜ್ಞಾನ ಕೇಂದ್ರಗಳು, ವಿಶ್ವವಿದ್ಯಾಲಯಗಳು, ರೈತ ಸಂಪರ್ಕ ಕೇಂದ್ರಗಳು ರೈತನಿಗೋಸ್ಕರ ಇರುವುದು ಎಂಬುದನ್ನು ಮನದಟ್ಟು ಮಾಡಬೇಕು ಎಂದು ಸಚಿವರು ಹೇಳಿದರು.
ಭುಸುಧಾರಣೆ ಕಾಯಿದೆ ತಿದ್ದುಪಡಿ ಹಾಗೂ ಕೊರೊನಾ ಕಾರಣಕ್ಕಾಗಿ ಪಟ್ಟಣದಿಂದ ಹಳ್ಳಿಗಳಗೆ ವಲಸೆ ಹೋಗಿರುವ ಯುವಕರಿಗೆ ಕೃಷಿಯಿಂದಾಗಿ ಉದ್ಯೋಗ ಸಿಗುವಂತಾಗಿದೆ ಎಂದರು.
ಈ ಬಾರಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು ರೈತರ ಆದಾಯ ದುಪ್ಪಟ್ಟಗೊಳಿಸುವ ಬೆಳೆಗೆ ಉತ್ತಮ ಬೆಲೆ ನೀಡುವಂತೆ ಮಾಡಲು ಸರ್ಕಾರ ಮತ್ತು ಇಲಾಖೆ ಹಲವಾರು ಮಹತ್ವದ ಯೋಜನೆಗಳನ್ನು ಕೈಗೊಳ್ಳುತ್ತಿದೆ.ಇದರ ಪ್ರಮುಖ ಭಾಗವಾಗಿ ಆಸ್ಟ್ರೇಲಿಯಾದಲ್ಲಿ ಬೆಳೆ ಸಮೀಕ್ಷೆಗೆ ಇದ್ದಂತಹ ಆ್ಯಪ್ ಸೌಲಭ್ಯವನ್ನು ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೊಳಿಸಲಾಗಿದೆ. ರೈತ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಸ್ವಾಭಿಮಾನಿ ರೈತ ತನ್ನ ಬೆಳೆಗೆ ತಾನೇ ಮೌಲ್ಯಮಾಪನ ಮಾಡಿ ಪ್ರಮಾಣಪತ್ರ ನೀಡುವ ಹಾಗೂ ಸರ್ಕಾರದಿದ ಸೌಲಭ್ಯವನ್ನು ಪಡೆಯುವಂತಹ ಕ್ರಾಂತಿಕಾರಕ ಹೆಜ್ಜೆ ಇದಾಗಿದೆ ಎಂದರು.
ಕೊರೊನಾ ಲಾಕ್ಡೌನ್ ಬಳಿಕವೂ ಹಾಗೂ ಲಾಕ್ಡೌನ್ ಸಂದರ್ಭದಲ್ಲಿಯೂ ಉಳಿದಂತಹ ಒಂದೇ ಒಂದು ಉದ್ಯಮವೆಂದರೆ ಅದು ಕೃಷಿಮಾತ್ರ. ಲಾಕ್ಡೌನ್ ಸಂದರ್ಭದಲ್ಲಿಯೂ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗಬಾರದು ಹಾಗೂ ರೈತಾಪಿ ವರ್ಗ ಸಂಕಷ್ಟಕ್ಕೆ ಈಡಾಗಬಾರದು ಎಂದು ಲಾಕ್ಡೌನ್‌ನಿಂದ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ತೆರವುಗೊಳಿಸಲಾಯಿತು. ಲಾಕ್ಡೌನ್ ಸಂದರ್ಭದಲ್ಲಿ ಕೃಷಿಗೆ ಬಾಧೆಯಾದಲ್ಲಿ ಮುಂದಿನ ದಿನಗಳಲ್ಲಿ ಉಣ್ಣಲು ಅನ್ನ ಸಿಗದು ಎಂಬುದನ್ನು ಮನಗಂಡು ಈ ತೆರವು ನಿರ್ಬಂಧಿಸಿ ಕೃಷಿ ಇಲಖೆ ಮತ್ತು ಸರ್ಕಾರ ರೈತರೊಂದಿಗೆ ಏಪ್ರಿಲ್ 10 ರಂದು ಮುವತ್ತು ಜಿಲ್ಲೆಗಳಲ್ಲಿ ಮುವತ್ತು ದಿನಗಳ ರಾಜ್ಯಾದ್ಯಂತ ಪ್ರವಾಸ ಆರಂಭಿಸಿ ಕೃಷಿ ಚಟುವಟಿಕೆ ಮತ್ತು ರೈತರ ಸಮಸ್ಯೆಗಳನ್ನು ಆಲಿಸಿ ರೈತರಿಗೆ ಆತ್ಮಸ್ಥೈರ್ಯ ತುಂಬಲಾಯಿತು ಎಂದರು.
ಈ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬಾರ್, ಮೇಲ್ಮನೆ ಸದಸ್ಯ ಶಾಂತರಾಮ್ ಸಿದ್ದಿ,ಧಾರವಾಡ ಕೃಷಿ ವಿವಿಯ ಕುಲಪತಿ ಡಾ.ಮಹಾದೇವ ಚೆಟ್ಟಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post