ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊನ್ನಾವರ: ಮಲೆನಾಡು ಹಾಗೂ ಕರಾವಳಿಯ ಸಂಸ್ಕೃತಿ, ಕಲೆ, ನೃತ್ಯ ರೂಪಕಗಳ ಶ್ರೀಮಂತಿಕೆಯನ್ನು ದೇಶಕ್ಕೇ ಪ್ರದರ್ಶಿಸುವಂತಹ ಅಪರೂಪದ ಕಾರ್ಯಕ್ರಮ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಕಲಾ ರಸಿಕರ ಮನಸೂರೆಗೊಂಡಿದ್ದು, ರಾಜ್ಯದೆಲ್ಲೆಡೆಯಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಹಾಗೂ ನಾಟ್ಯೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಪ್ರೊ.ಎಂ.ಎ. ಹೆಗಡೆ ಅವರೂ ಸಹ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶೋಭೆ ತರುವ ಜೊತೆಯಲ್ಲಿ, ಯಶಸ್ಸಿಗೆ ಕಾರಣರಾದರು.
ನಾಲ್ಕು ದಿನಗಳ ಕಾಲದ ನಡೆದ ಈ ಕಲಾ ವೈಭವದ ಚಿತ್ರ ಸಹಿತ ಪ್ರತ್ಯಕ್ಷ ವರದಿಯನ್ನು ನಾಟ್ಯೋತ್ಸವದ ಕಾರ್ಯಾಧ್ಯಕ್ಷ ಡಾ.ಲಕ್ಷ್ಮೀ ನಾರಾಯಣ ಕಾಶಿ, ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಹಿರಿಯ ಸಲಹಾ ಸಂಪಾದಕರಾದ ಶ್ರೀ ಡಾ.ಎನ್. ಸುಧೀಂದ್ರ ಹಾಗೂ ಶ್ರೀ ಮಂಜುನಾಥ ಶರ್ಮಾ ಅವರುಗಳ ಸಂಯುಕ್ತವಾಗಿ ನೀಡಿದ್ದು ಸವಿವರವಾಗಿ ಓದುಗರ ಆವಗಾಹನೆಗಾಗಿ ಪ್ರಕಟಿಸುತ್ತಿದ್ದೇವೆ.

ಹಲವು ಕಲಾಸಾಧಕರ ಶಕ್ತಿ ಈ ಮಂಡಳಿಗೆ ಇದೆ. ಈ ಪ್ರವಾಹವನ್ನು ಶಿವಾನಂದ ಹೆಗಡೆಯವರು ಮಹಾಶಕ್ತಿಯಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸಮಾಜದ, ಜೀವನದ ಅಂತಃಶಕ್ತಿಯನ್ನು ಕಾಪಾಡುವುದರಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದೆ. ಸಂತೋಷ ಸೂಚಕದಲ್ಲಿ ಭೂತಾನ್ ನಮಗಿಂತ ಮುಂದಿದೆ. ಆದರೆ ಈ ರೀತಿ ಕಲಾಕೇಂದ್ರಗಳು ಹೆಚ್ಚಿದಲ್ಲಿ ಮಾತ್ರ ಸಂತೋಷ ಸೂಚಕ ಹೆಚ್ಚುತ್ತದೆ ಎಂದು ತಿಮ್ಮಪ್ಪ ಭಟ್ ಹೇಳಿದರು.
ಗೋಪಾಲಕೃಷ್ಣ ಭಾಗವತ: ಕಲೆಯನ್ನು ಕೊಲೆ ಮಾಡುತ್ತಿರುವ ಕೆಲವು ಕಲೆಗಾರರರ ಮಧ್ಯದಲ್ಲಿ ಶ್ರೀ ಕೃಷ್ಣ ಯಾಜಿ ಚಂಡೆವಾದಕರು ಬಲು ಅಪರೂಪ ಎಂದರು.


ವಿಶೇಷ ಚೇತನರ ಅತ್ಯದ್ಬುತ ನಾಟ್ಯ ಪ್ರದರ್ಶನ
ಬೆಂಗಳೂರಿನ ಸಯ್ಯದ್ ಸಲ್ಲಾವುದ್ದೀನ್ ಪಾಷಾರವರ ನಿರ್ದೇಶನ ಮತ್ತು ಕೊರಿಯೋಗ್ರಪಿಯಲ್ಲಿ ಗಾಲಿಖುರ್ಚಿಯಲ್ಲಿ ವಿಶೇಷ ಚೇತನರಿಂದ ಅತ್ಯದ್ಭುತವಾದ ವಿವಿಧ ನಾಟ್ಯ ಪ್ರದರ್ಶನ ನಡೆಯಿತು.
ಈ ನೃತ್ಯ ನೆರೆದಿದ್ದ ಜನಸಮೂಹವನ್ನು ಬೆರಗುಗೊಳಿಸುವಂತೆ ಮಾಡಿತು. ನಂತರ ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿ ವತಿಯಿಂದ ಡಾ. ಕೆ. ಶಿವರಾಮ ಕಾರಂತರ ನಿರ್ದೇಶನ ಹಾಗೂ ವಿದ್ವಾನ್ ಸುಧೀರ ರಾವ್, ಕೊಡವೂರು ಇವರ ನಿರ್ಮಾಣದ ಯಕ್ಷಗಾನ ಬ್ಯಾಲೆ ಅಭಿಮನ್ಯು ವಧೆ ಪ್ರಸ್ತುತಿಗೊಂಡಿತು.
ಎರಡನೆಯ ದಿನ: ಕಲಾದೇವಿಯ ಸಾನಿಧ್ಯವನ್ನು ಈ ಯಕ್ಷಾಂಗಣ
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಎರಡನೆಯ ದಿನದ ಸಭಾ ಕಾರ್ಯಕ್ರಮ ಶ್ರೀ ಅನಂತ ಹೆಗಡೆ ದಂತಳಿಕೆ ಇವರ ಭಾಗವತಿಕೆಗೆ ಕೆರೆಮನೆ ವಂಶದ ನಾಲ್ಕನೆಯ ತಲೆಮಾರಿನ ಕು. ಶಶಿಧರ ಹೆಗಡೆಯವರ ಮೃದಂಗ ನುಡಿಸುವುದರ ಮೂಲಕ ಶುಭಾರಂಭಗೊಂಡಿತು.
ಕಾರ್ಯಾಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿಯವರು ಸಭಾಸದರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಆಡಿದರು. ರಮಾನಂದ ಬನಾರಿ, ಎಂ.ಎನ್. ಹೆಗಡೆ, ಹಳವಳ್ಳಿ, ಡಾ. ಶ್ರೀಧರ ಭಂಡಾರಿ, ಪುತ್ತೂರು ಮತ್ತು ಮನ್ಮಥಕುಮಾರ್ ಸತ್ಪತಿ, ಓಡಿಶಾ ಇವರ ಕಲಾಸೇವೆಯನ್ನು ಸ್ಮರಿಸಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸನ್ಮಾನವನ್ನು ನೀಡಿ ಗೌರವಿಸಲಾಯಿತು.
ಡಾ. ಶ್ರೀಧರ ಭಂಡಾರಿಯವರು ಸಮ್ಮಾನ ಸ್ವೀಕರಿಸಿ ಮಾತನಾಡಿ, ತೆಂಕಿನ ಯಕ್ಷಗಾನ ವ್ಯಕ್ತಿಯಾದ ನಾನು ಬಡಗಿನ ಯಕ್ಷಗಾನ ಶೈಲಿಯನ್ನು ಕಲಿಸಿದ ಮತ್ತು ಪ್ರೋತ್ಸಾಹಿಸಿ ಬೆಳೆಸಿದ ವ್ಯಕ್ತಿ ನನ್ನ ಒಡನಾಟದ ಶಂಭು ಹೆಗಡೆಯವರು ಎಂದು ಸ್ಮರಿಸಿದರು.
ಡಾ. ರಮಾನಂದ ಬನಾರಿಯವರು ಅನಿಸಿಕೆ ವ್ಯಕ್ತಪಡಿಸುತ್ತಾ ದೇವರ ಸಾನಿಧ್ಯವನ್ನು ದೇವಸ್ಥಾನದಲ್ಲಿ ಕಾಣುವಂತೆ ಕಲಾದೇವಿಯ ಸಾನಿಧ್ಯವನ್ನು ಈ ಯಕ್ಷಾಂಗಣದಲ್ಲಿ ಕಾಣಬಹುದಾಗಿದೆ. ಎಂ.ಎನ್. ಹೆಗಡೆ ಹಳವಳ್ಳಿ ಮತ್ತು ಮನ್ಮಥ್ ಕುಮಾರ್ ಸತ್ಪತಿ ಅವರು ಸನ್ಮಾನ ಸ್ವೀಕರಿಸಿ ಅನಿಸಿಕೆ ವ್ಯಕ್ತಪಡಿಸಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಸಮಾಜದ, ನಾಡಿನ, ದೇಶವಿದೇಶಗಳ ಬಹುತ್ವವನ್ನು, ವೈವಿಧ್ಯಮಯ ಕಲಾಪ್ರಕಾರಗಳನ್ನು ಒಂದೆಡೆ ತಂದು ಈ ಭಾಗದ ಕಲಾಪ್ರೇಕ್ಷಕರಿಗೆ ಪ್ರದರ್ಶಿಸುವ ಈ ಪ್ರಯತ್ನ ಅನನ್ಯ, ಅನುಕರಣೀಯ ಎಂದು ಅಭಿಪ್ರಾಯಪಟ್ಟರು.
ನೀನಾಸಂನ ಕೆ.ವಿ. ಅಕ್ಷರ ಅವರು ಮಾತನಾಡಿ, ಮಾನಸಿಕ ಪರಿಸರ ಕೆಟ್ಟಲ್ಲಿ, ಸಾಂಸ್ಕೃತಿಕ ಪರಿಸರ ಹಾಳಾಗುತ್ತ ತನ್ಮೂಲಕ ಭೌತಿಕ ಪರಿಸರ ಹಾಳಾಗುತ್ತದೆ. ಸಾಂಸ್ಕೃತಿಕ ಪ್ರದೂಷಣಗಳನ್ನು ಕಡಿಮೆ ಮಾಡಲು ಈ ತರಹದ ಸಾಂಸ್ಕೃತಿಕ ಕಾರ್ಯಗಳು ಮುಂದುವರಿಯಬೇಕು. ಸರಕಾರದ ನಿಯಂತ್ರಣದಲ್ಲಿರುವ ಮಾಧ್ಯಮಗಳು ಭಿತ್ತರಿಸುತ್ತಿರುವ ತಳಮಟ್ಟದ ಕಾರ್ಯಕ್ರಮಗಳಿಂದ ರಾಮಾಯಣ, ಮಹಾಭಾರತದ ಅಂಶಗಳು ಈ ತಲೆಮಾರಿನ ಮಕ್ಕಳಿಗೆ ಮರೀಚಿಕೆಯಾಗಿದೆ ಎಂದರು.

ಜಿ.ಎಸ್. ಭಟ್ಟರು ಮಾತನಾಡಿ, ಇಂಥಹ ರಾಷ್ಟ್ರೀಯ ನಾಟ್ಯೋತ್ಸವಕ್ಕೆ ಸರ್ಕಾರ ಸಂಪೂರ್ಣ ಅನುದಾನ ನೀಡಬೇಕೆಂದು ಆಗ್ರಹಿಸಿದರು.
ಈ ಕಲೆಯಲ್ಲಿ ಪೂರ್ಣತೆ ಬರಬೇಕಾದರೆ, ಯಕ್ಷಗಾನ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು. ರಾಜ್ಯೋತ್ಸವ ಪ್ರಶಸ್ತಿಯೂ ಯಕ್ಷಗಾನ ಕ್ಷೇತ್ರಕ್ಕೆ ಹೆಚ್ಚಿನ ಪಾಲು ಸಲ್ಲಬೇಕು. ಯಕ್ಷಗಾನ ವಿಶ್ಚಕೋಶದ ಅವಶ್ಯಕತೆ ಇದ್ದುದರಿಂದ ಸರ್ಕಾರ ಇದಕ್ಕೆ ಅನುದಾನ ನೀಡಬೇಕು ಎಂದರು.
ಶಿವಾನಂದ ಹೆಗದೆಯವರು ವಂದಿಸಿದರು.
ಶಿವ ಮತ್ತು ಶಕ್ತಿ ಓಡಿಸ್ಸಿ ನೃತ್ಯ ವೈಭವ
ಮೊದಲಿಗೆ ಬೆಂಗಳೂರಿನ ಪರಿಧಿ ಜೋಶಿ, ಭಾರ್ಗವಿ ಜಿ. ಮತ್ತು ದೆಬರತಿ ದತ್ತ ಇವರಿಂದ ಶಿವ ಮತ್ತು ಶಕ್ತಿ ಓಡಿಸ್ಸಿ ನೃತ್ಯ ಪ್ರಸ್ತುತಿಗೊಂಡಿತು. ಮಧುಲಿತಾ ಮಹೋಪಾತ್ರ, ಬೆಂಗಳೂರು ಈ ನೃತ್ಯವನ್ನು ಸಂಯೋಜಿಸಿದ್ದರು.
ನಂತರ ಓಡಿಶಾದ ಬಿಚಿತ್ರ ಬರ್ನಲಿ ನಾಟ್ಯ ಸಂಸದ್, ಗಂಜಾಂ ತಂಡದಿಂದ ಗೊಂಬೆಯಾಟ ಮತ್ತು ಜಾನಪದ ನೃತ್ಯ ಪ್ರದರ್ಶನ ನಡೆಯಿತು. ಕೊನೆಯಲ್ಲಿ ಬಸ್ತರ್ ಬ್ಯಾಂಡ್, ಛತ್ತೀಸ್‌ಗಡ ತಂಡದಿಂದ ದೇವ್-ಪಾದ್ ಆದಿವಾಸಿ ನೃತ್ಯ ನಡೆಯಿತು. ಪದ್ಮಶ್ರೀ ಪುರಸ್ಕೃತ ಅನೂಪ್ ರಂಜನ್ ಪಾಂಡೆ, ಛತ್ತೀಸ್‌ಗಡ ಇವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ನೃತ್ಯ ಸಂಯೋಜನೆ ನೆರೆದ ಪ್ರೆಕ್ಷಕ ಸಮೂಹಕ್ಕೆ ಮನರಂಜನೆ ನೀಡಿತು.
ಮೂರನೆಯ ದಿನ: ಪಾರಂಪರಿಕತೆಯನ್ನು ಉಳಿಸಿಕೊಂಡ ಕೆರೆಮನೆ ಮಂಡಳಿ
ಯಕ್ಷಗಾನ ಶೈಲಿಯಲ್ಲಿ ಇಡಗುಂಜಿ ಮೇಳದ ಹಿಮ್ಮೇಳದವರಿಂದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಮೂರನೇ ದಿನದ ಸಭಾ ಕಾರ್ಯಕ್ರಮ ಶುಭಾರಂಭಗೊಂಡಿತು.
ಪ್ರಾಸ್ತಾವಿಕ ಮಾತಿನೊಂದಿಗೆ ಸಂಘಟನೆಯ ಕಾರ್ಯಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿಯವರು ಸ್ವಾಗತಿಸಿದರು. ಯಕ್ಷಗಾನ ಪೋಷಕರಾಗಿ ದೈವಾಧೀನರಾದ ಶ್ರೀ ಕೆ.ಎಂ. ಉಡುಪರವರನ್ನು ಸ್ಮರಿಸಿ ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಅರ್ಪಿಸಲಾಯಿತು.
ಅಂಬಾಚರಣದಾಸ ಡಾ. ಭೀಮೇಶ್ವರ ಜೋಶಿಯವರು ಇತರ ಸಭಾಸದರೊಂದಿಗೆ ಸಭೆಯನ್ನು ಉದ್ಘಾಟಿಸಿದರು. ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನವನ್ನು ಯಕ್ಷಗಾನ ಕಲಾವಿದರಾದ ಕೃಷ್ಣ ಗಾಣಿಗ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮೂಡಲಪಾಯ ಯಕ್ಷಗಾನ ಕಲಾವಿದರಾದ ಎ.ಎಸ್. ನಂಜಪ್ಪ, ಯಕ್ಷಗಾನ ಕಲಾವಿದರಾದ ಎಂ. ಕೆ. ರಮೇಶ್ ಆಚಾರ್ಯ ಮತ್ತು ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್, ಮೈಸೂರು ಇವರಿಗೆ ನೀಡಿ ಸನ್ಮಾನಿಸಲಾಯಿತು.
ಸಮ್ಮಾನ ಸ್ವೀಕರಿಸಿದ ಕೃಷ್ಣ ಗಾಣಿಗರವರು ಮಾತನಾಡಿ, ಕೆರೆಮನೆ ಮೇಳದೊಂದಿಗೆ ತನ್ನ ಸಂಬಂಧವನ್ನು ಸ್ಮರಿಸಿದರು.
ಎ.ಎಸ್. ನಂಜಪ್ಪನವರು ಮಾತನಾಡಿ, ಯಕ್ಷಗಾನ ಪ್ರಾಕಾರಗಳಲ್ಲೆ ಒಂದಾದ ಮೂಡಲಪಾಯ ಯಕ್ಷಗಾನವನ್ನು ಸರ್ಕಾರ ಗುರುತಿಸಿ ಪ್ರೋತ್ಸಾಹಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಎಂ.ಕೆ. ರಮೇಶ್ ಆಚಾರ್ಯರವರು ಮಾತನಾಡಿ, ಯಕ್ಷಗಾನ ಉದ್ಯಮವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಕೆರೆಮನೆ ಮಂಡಳಿ ಪಾರಂಪರಿಕತೆಯನ್ನು ಕಳೆದುಕೊಳ್ಳದೇ ಮುಂದುವರಿಯುತ್ತಿರುವುದು ಅನನ್ಯ. ದಿ. ಗಜಾನನ ಹೆಗಡೆಯವರ ಯಕ್ಷಗಾನ ಪ್ರಸಂಗದ ಅಂಬೆಯ ಪಾತ್ರವನ್ನು ಪ್ರಸ್ತುತ ಅಂಬೆಯ ಚಿತ್ರಣದೊಂದಿಗೆ ಹೋಲಿಸಿ ವಿಶ್ಲೇಷಿಸಿದರು.
ಯಕ್ಷಗಾನ ವಿದ್ವಾಂಸರಾದ ಡಾ. ವಸಂತ ಭಾರಧ್ವಾಜ್ ಮಾತನಾಡಿ, ಕೆಲವು ಪಾತ್ರಗಳನ್ನು ಮಾಡಿ ಯಕ್ಷಗಾನದ ನಂಟನ್ನು ಆರಂಭಿಸಿದ ನನಗೆ ಆ ಬಂಧದಿಂದಲೇ ನನ್ನಿಂದಾದ ಯಕ್ಷಗಾನ ಛಂದಸ್ಸು, ಸಂಶೋಧನೆ ಮತ್ತು ಪ್ರಸಂಗ ಬರೆಯುವಿಕೆ ಆರಂಭವಾಯಿತು ಎಂದರು.
ಅಂಬಾಚರಣದಾಸ ಡಾ. ಭೀಮೇಶ್ವರ ಜೋಶಿಯವರು ಮಾತನಾಡಿ, ಕಲಾವಿದನಿಗೆ ಇರುವ ಕಲಾರಂಗದ ಪಾವಿತ್ರ್ಯತೆಯನ್ನು, ಪಾರಂಪರಿಕತೆಯನ್ನು ಮತ್ತು ಶಾಸ್ತ್ರೀಯತೆಯನ್ನು ಉಳಿಸಿ ಬೆಳೆಸಿದ ಮಹಾನ್ ಕಲಾವಿದ ಶಂಭು ಹೆಗಡೆಯವರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳವಣಿಗೆಯ ನಿರಂತತೆಯಲ್ಲಿ ಸಂಸ್ಕೃತಿಗೆ ಅಪಚಾರ ಆಗದಂತೆ ಯಕ್ಷಗಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಾಟ್ಯೋತ್ಸವದ ಈ ಚಿಂತನೆಯನ್ನು ಕೊಂಡಾಡಿದರು. ಭಾರತದ ಭವ್ಯತೆ ಲಲಿತ ಕಲೆಗಳಲ್ಲಿ ಅಡಗಿದೆ. ಈ ಲಲಿತ ಕಲೆಗಳ ಭವ್ಯತೆಯ ಶಕ್ತಿಯೇ ಭಾರತವನ್ನು ಜಗದ್ಗುರು ಸ್ಥಾನಕ್ಕೆ ತಲುಪಿಸಿದೆ. ಭಾವಶುದ್ಧಿಯಿಂದ ಮನಃಶುದ್ಧಿ. ಮನಃಶುದ್ಧಿಯಿಂದ ಜೀವನ ಶುದ್ಧಿ, ಜೀವನಶುದ್ಧಿಯಿಂದ ಭವಿಷ್ಯ ಶುದ್ಧಿ, ಭವಿಷ್ಯ ಶುದ್ಧಿಯಿಂದ ಕಲಾರಂಗದ ಶುದ್ಧಿಗೆ ಕಾರಣವಾಗುವ ಭಾವೈಕ್ಯತೆಯ, ಪಾವಿತ್ರ್ಯತೆಯ ಪೂರಕವಾಗಿ ಕಲಾವಿದ ಯಕ್ಷಗಾನ ಪಾತ್ರವನ್ನು ನಿರ್ವಹಿಸಬೇಕೆ ಹೊರತು ವ್ಯವಹಾರಿಕತೆಯನ್ನು ಪಾತ್ರಕ್ಕೆ ಸಮ್ಮಿಲನಗೊಳಿಸಬೇಡಿ ಎಂದು ಕಲಾವಿದರಿಗೆ ಕಿವಿಮಾತು ಹೇಳಿದರು.
ಎಂ.ಕೆ. ಭಾಸ್ಕರ ರಾವ್ ಮಾತನಾಡಿ, ಪ್ರತಿಯೊಂದು ಕಲೆಗೂ ಮಿತಿಯಿದೆ. ಈ ಮಿತಿಯನ್ನು ವೀಕ್ಷಕರ ಅಭಿರುಚಿಗಾಗಿ ಅಥವಾ ಚಪ್ಪಾಳೆ ಗಿಟ್ಟಿಸುವುದಕ್ಕಾಗಿ ಮಿತಿಯನ್ನು ದಾಟಿ ಶಾಸ್ತ್ರೀಯತೆಯನ್ನು ಕಳೆದುಕೊಳ್ಳುವ ಕಲಾವಿದನ ಭಾವಸ್ಥಿತಿಯನ್ನು ವಿಶ್ಲೇಷಿಸಿ ಬೇಸರ ವ್ಯಕ್ತಪಡಿಸಿದರು.
ಡಾ.ವಿ. ಜಯರಾಜನ್ ಮಾತನಾಡಿ, ಕೇರಳದ ಭಾಗವಾದ ಜಾನಪದ ಕಲೆಯನ್ನು ಪ್ರದರ್ಶಿಸಲು ಅವಕಾಶಕೊಟ್ಟಿದ್ದಕ್ಕೆ ಧನ್ಯವಾದವನ್ನು ವ್ಯಕ್ತಪಡಿಸಿದರು.
ಅಸ್ಸಾಂನಿಂದ ಆಗಮಿಸಿದ ಪ್ರಂಜಲ್ ಸೈಕಿಯಾ ಅನಿಸಿಕೆ ವ್ಯಕ್ತಪಡಿಸುತ್ತಾ ಹಸಿರಾದ ಪ್ರಾಕೃತಿಕ ಪರಿಸರದಲ್ಲಿರುವ ಈ ಭವ್ಯ ಬಯಲು ರಂಗಮಂದಿರ ಭಾರತದ ಎಲ್ಲಾ ಕಲಾಪ್ರಕಾರಗಳಿಗೆ ಪ್ರೇರಕವಾಗಿದೆ ಎಂದರು.
ಕೊನೆಯಲ್ಲಿ ಊರಿನ ಮುಖಂಡರಾದ ಗಣಪಯ್ಯ ಗೌಡರವರು ಮಾತನಾಡಿದರು.
ವಿಧಾನಪರಿಷತ್ ಸದಸ್ಯ ಯು.ಬಿ. ವೆಂಕಟೇಶ್‌ಮಾತನಾಡಿ, ಕಳೆದ 85 ವರ್ಷಗಳಿಂದ ಶ್ರೀ ಇಡಗುಂಜಿ ಮೇಳವನ್ನು ಕಟ್ಟಿಕೊಂಡು ಸರಸ್ವತಿ ಪೂಜೆಯನ್ನು ಮುಂದವರಿಸುತ್ತಿರುವುದು ಅನನ್ಯ ಎಂದರು.
ಡ್ಯಾಡಿ ಮಮ್ಮಿ ಸಂಸ್ಕೃತಿಯು ವಿಜೃಂಭಿಸುತ್ತಿರುವ ಈ ಸಂಘರ್ಷ ಕಾಲದಲ್ಲಿ ಮಾನವೀಯ ಸಂಸ್ಕೃತಿಯನ್ನು, ಲಲಿತ ಕಲೆಗಳ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪೂರಕವಾಗಿ ನಿಂತಿರುವ ನಾಟ್ಯೋತ್ಸವದ ಸಂಗತಿಗಳನ್ನು ಕೊಂಡಾಡಿದರು. ಇಂತಹ ಮಹೋತ್ತಮ ಸಂಘಟನೆಗೆ ಸಮಾಜ, ಸರ್ಕಾರ ಮತ್ತು ಸಂಘಸಂಸ್ಥೆಗಳು ಪ್ರೋತ್ಸಾಹಿಸುವ ಅತ್ಯಗತ್ಯತೆಯನ್ನು ವ್ಯಕ್ತಪಡಿಸಿದರು.
ಶಿವಾನಂದ ಹೆಗಡೆಯ್ವರು ಸರ್ವರನ್ನೂ ವಂದಿಸಿ, ಶ್ರೀಧರ ಹೆಗಡೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಅರುಣ ಹೆಗಡೆ ಮತ್ತು ಕಲ್ಪನಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ತೋಳ್ಪಾವಕುತ್ತು ತೊಗಲು ಗೊಂಬೆಯಾಟ
ನಾಟ್ಯೋತ್ಸವದಲ್ಲಿ ಸಭಾಕಾರ್ಯಕ್ರಮದ ನಂತರ ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮೊದಲಿಗೆ ಕೇರಳದ ಪೋಕ್ ಲ್ಯಾಂಡ್ ಪ್ರಾಯೋಜಕತ್ವದ ಗುರು ವಿಶ್ವನಾಥನ್ ಪುಲಾವರ್ ತಂಡದಿಂದ ತೋಳ್ಪಾವಕುತ್ತು ಎಂಬ ಕೇರಳದ ತೊಗಲು ಗೊಂಬೆಯಾಟ ಪ್ರಸ್ತುತಿಗೊಂಡಿತು. ಸಿತಾರ್‌ನಲ್ಲಿ ಅರಣ್ಯಕುಮಾರ್, ಧಾರವಾಡ, ವಯಲಿನ್‌ನಲ್ಲಿ ಶಂಕರ ಕಬಾಡಿ, ತಬಲಾಗೆ ಶಾಂತಲಿಂಗ ದೇಸಾಯಿ, ಧಾರವಾಡ ಇವರಿಂದ ಸ್ವರಧಾರಾ ಸಮ್ಮೇಳ ನಡೆಯಿತು.
ತದನಂತರದಲ್ಲಿ ಅಸ್ಸಾಂನಿಂದ ಆಗಮಿಸಿದ ಕ್ರಿಸ್ಟಿರ್ ಕೊಠಿಯಾ ತಂಡದಿಂದ ಪ್ರಂಜಲ್ ಸೈಕಿಯಾ, ಗುವಾಹಟಿಯವರ ನಿರ್ದೇಶನದ ಅಂಕಿಯಾ ನಾಟ್ ಕೇಲಿಗೋಪಾಲ ಎಂಬ ಅಸ್ಸಾಂನ ಜಾನಪದ ನೃತ್ಯ ಪ್ರದರ್ಶನಗೊಂಡಿತು.
ನಾಲ್ಕನೆಯ ದಿನ: ಕಲಾಲೋಕದ ಪ್ರೇರಣಾಶಕ್ತಿ
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ನಾಲ್ಕನೆಯ ದಿನದ ಸಭಾ ಕಾರ್ಯಕ್ರಮ ಮಾನ್ಯ ಧರ್ಮದರ್ಶಿ ಹರಿಕೃಷ್ಣಾ ಪುನರೂರು ಇವರ ಅಧ್ಯಕ್ಷತೆಯಲ್ಲಿ ಯಕ್ಷಗಾನ ಶೈಲಿಯಲ್ಲಿ ಗಣಪತಿ ಪೂಜೆಯೊಂದಿಗೆ ಶುಭಾರಂಭಗೊಂಡಿತು.
ಕಾರ್ಯಾಧ್ಯಕ್ಷರಾದ ಲಕ್ಷ್ಮೀನಾರಾಯಣ ಕಾಶಿಯವರು ಪ್ರಸ್ತಾವನೆಯೊಂದಿಗೆ ಸಭಾಸದರನ್ನು ಸ್ವಾಗತಿಸಿ ಇಂದಿನ ಕಾರ್ಯಕ್ರಮವನ್ನು ದಿ.ಡಾ.ಡಿ.ಕೆ. ಚೌಟರವರಿಗೆ ಸಂಪೂರ್ಣವಾಗಿ ಅರ್ಪಿಸಿದ ಅಗತ್ಯತೆಯನ್ನು ವಿವರಿಸಿದರು.
ವೇದಮೂರ್ತಿ ಹರಿನಾರಾಯಣ ದಾಸ ಅಸ್ರಣ್ಣ, ಪ್ರಧಾನ ಅರ್ಚಕರು, ಶ್ರೀ ಕ್ಷೇತ್ರ ಕಟೀಲು ಇವರಿಂದ ದೀಪ ಬೆಳಗುವುದರ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಯಕ್ಷಗಾನ ಕ್ಷೇತ್ರದ ಕಲಾವಿದರು, ಸಂಘಟಕರು ಮತ್ತು ಕಲಾಪೋಷಕರಾದ ಪ್ರಭಾಕರ ಹೆಗಡೆ, ಚಿಟ್ಟಾಣಿ, ಕೆ.ಎಸ್. ರಾಜಾರಾಮ್ ಕಿಲಾರ, ನಾಗೇಶ ಭಂಡಾರಿ, ಇಡಗುಂಜಿ ಇವರಿಗೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ ಸರ್ವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕೆ.ಎಸ್. ರಾಜಾರಾಮ್, ಕಿಲಾರ ಇವರು ಮಾತನಾಡಿ ಕಲಾಪ್ರಪಂಚದ ವಿಸ್ತರಣೆಗೂ, ಭಾವನಾತ್ಮಕ ಅಭಿವ್ಯಕ್ತಿಗೂ ಪೂರಕವಾದ ಛಾಯಾಗ್ರಾಹಕನಾದ ನನಗೆ ನೀಡಿರುವ ಸಮ್ಮಾನ ಛಾಯಾಗ್ರಹಣ ಕ್ಷೇತ್ರಕ್ಕೆ ಸಂದಾಯವಾದ ಗೌರವವಾಗಿದೆ ಎಂದರು.
ವೇದಮೂರ್ತಿ ಹರಿನಾರಾಯಣ ದಾಸ ಅಸ್ರಣ್ಣರವರು ಮಾತನಾಡಿ, ವೈವಿಧ್ಯಮಯ ಕಲಾಕ್ಷೇತ್ರದಲ್ಲಿ, ವಿಭಿನ್ನ ಅಭಿರುಚಿಯ ಪ್ರೇಕ್ಷಕರ ಮಧ್ಯೆ ಭಾರತೀಯ ಪರಂಪರೆಯ ಸಂಸ್ಕೃತಿಯನ್ನು ವಿಸ್ತರಿಸುವ ಕಲಾಪ್ರಕಾರಗಳನ್ನು ಮಾತ್ರ ಬಿಂಬಿಸುವ ನಾಟ್ಯೋತ್ಸವ ಭಾರತೀಯತೆಯನ್ನು ಪ್ರದರ್ಶಿಸುತ್ತದೆ. ನಾಟ್ಯ ಮಾರ್ಗ, ಕಾವ್ಯ ಮಾರ್ಗವನ್ನು ಉಳಿಸಿ ಬೆಳೆಸುವ ಈ ನಾಟ್ಯೋತ್ಸವ ಇತರರಿಗೂ ಸ್ಪೂರ್ತಿ ಆಗಲಿ ಎಂದರು.

ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಮಾತನಾಡಿ, ಉತ್ಸವಗಳು ಕಲೆಯನ್ನು ಬೆಳೆಸುವ, ಭಾರತೀಯತೆಯನ್ನು ಬಿಂಬಿಸುವ ತನ್ಮೂಲಕ ಸಂಸ್ಕೃತಿಯ ಆರಾಧನೆಗೆ ಪೂರಕವಾಗಿರಬೇಕು ಎಂದರು. ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ಮಧ್ಯೆ ಕಲೆಯ ಪ್ರತಿಭೆಯನ್ನು ಬೆಳೆಸುವ ಸೂಕ್ಷ್ಮತೆ ಎಲ್ಲರೂ ಅರಿತು ಸಮನ್ವಯತೆಯಲ್ಲಿ ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದರು.

ಕೊನೆಯಲ್ಲಿ ಶ್ರೀ ಗಣಪಯ್ಯ ಗೌಡರು ಮಾತನಾಡಿದರು.
ಹರಿಕೃಷ್ಣ ಪುನರೂರು ಮಾತನಾಡುತ್ತಾ ಯಕ್ಷಗಾನ ಅಂತಾರಾಷ್ಟ್ರೀಯ ಕಲೆ. ಇದನ್ನು ಉಳಿಸಿ ಬೆಳೆಸಲು ನಾವೆಲ್ಲ ಪ್ರೋತ್ಸಾಹ ನೀಡುವುದು ನಮ್ಮ ಆದ್ಯ ಕರ್ತವ್ಯ ಎಂದರು. ದೇಶ ವಿದೇಶಗಳಿಂದ ಕಲಾಪ್ರಕಾರಗಳನ್ನು ಆಮಂತ್ರಿಸಿ ಮಾಡುವ ನಾಟ್ಯೋತ್ಸವ ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ನಾಟ್ಯೋತ್ಸವ ಎಂದು ಅಭಿಪ್ರಾಯಪಟ್ಟರು.

ಮನಸೂರೆಗೊಂಡ ಕೂಚುಪುಡಿ ನೃತ್ಯ
ನಾಟ್ಯೋತ್ಸವದ ನಾಲ್ಕನೇ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮೊದಲು ಬೆಂಗಳೂರಿನ ಶ್ರೀ ವಿದ್ಯಾ ಅಂಗಾರ ಅವರಿಂದ ಮನೋಮಂಥನ ಎಂಬ ಅದ್ಭುತ ಕೂಚುಪುಡಿ ನೃತ್ಯ ಪ್ರದರ್ಶನ ನಡೆಯಿತು.

(ಪ್ರತ್ಯಕ್ಷ ವರದಿ: ಡಾ.ಎನ್. ಸುಧೀಂದ್ರ, ಹಿರಿಯ ಸಲಹಾ ಸಂಪಾದಕರು, ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ)
Get in Touch With Us info@kalpa.news Whatsapp: 9481252093

















Discussion about this post