ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂಬುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್. ಮಧು ಬಂಗಾರಪ್ಪ #Minister Madhu Bangarappa ಹೇಳಿದರು.
ಅವರು ಸೋಮವಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿನ ನೂತನ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮಕ್ಕಳ ಸೇವೆ ಮಾಡಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ನನಗೆ ಶಿಕ್ಷಣ ಇಲಾಖೆಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಕೆ.ಪಿ.ಎಸ್. ಶಾಲೆಗಳನ್ನು ಪ್ರಾರಂಭಿಸಲಿದ್ದೇವೆ ಹಾಗೂ ಅವಶ್ಯವಿರುವಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ಕಾಲೇಜುಗಳನ್ನು ಮಾಡಿಕೊಡಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುಧಾನದಲ್ಲಿ ಶೇ. 25ರಷ್ಟನ್ನು ಶಿಕ್ಷಣಕ್ಕಾಗಿಯೇ ಮೀಸಲಿಡಲಾಗಿದೆ. ಪರೀಕ್ಷೆಯಲ್ಲಿ ಕಾಪಿ ಮಾಡುವುದನ್ನು ತಡೆಯಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇದರಿಂದ ಕೆಲ ಮಕ್ಕಳು ಪೇಲ್ ಆಗುತ್ತಿರಬಹುದು. ಆದರೆ, ಭವಿಷ್ಯದಲ್ಲಿ ಮಕ್ಕಳು ಯಾವುದೇ ರೀತಿಯಲ್ಲಿ ಸೋಲುವುದಿಲ್ಲ. ಮೂರು ಪರೀಕ್ಷಾ ಸೂತ್ರವನ್ನು ಜಾರಿಗೆ ತರಲಾಗಿದ್ದು, ಈ ವ್ಯವಸ್ಥೆಯ ಮಹತ್ವವು ಮುಂಬರುವ ದಿನಗಳಲ್ಲಿ ತಿಳಿಯಲಿದೆ. ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಮಕ್ಕಳಲ್ಲಿ 84,400 ಕ್ಕಿಂತಲು ಹೆಚ್ಚು ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆ-2ರಲ್ಲಿ ಉತ್ತೀರ್ಣರಾಗಿ ಶಿಕ್ಷಣ ಇಲಾಖೆಯ ಗೌರವನ್ನು ಹೆಚ್ಚಿಸಿದ್ದಾರೆ. ಇದರಲ್ಲಿ ಸರ್ಕಾರಿ ಶಾಲೆಗಳು ಮೊದಲ ಸ್ಥಾನದಲ್ಲಿದ್ದು, ಅನುದಾನಿತ ಮತ್ತು ಖಾಸಗಿ ಶಾಲೆಗಳು 2ನೇ ಮತ್ತು 3ನೇ ಸ್ಥಾನದಲ್ಲಿವೆ. ಸದ್ಯ 3ನೇ ಪರೀಕ್ಷೆಯು ನಡೆಯುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ಎರಡು ವರ್ಷಗಳನ್ನು ಪೂರೈಸಿದ್ದು, ಹಲವಾರು ಜನಪರವಾದ ಕಾರ್ಯಕ್ರಮಗಳನ್ನು ಜಾರಿಗೆ ಮಾಡಲಾಗಿದೆ. ವಿಶೇಷವಾಗಿ ನಮ್ಮ ಯಲಬುರ್ಗಾ ಕ್ಷೇತ್ರದಲ್ಲಿ 16 ಹೊಸ ಶಾಲೆಗಳು ಮತ್ತು 7 ಹೊಸ ಜೂನಿಯರ್ ಕಾಲೇಜುಗಳು ಪ್ರಾರಂಭವಾಗಿದ್ದು, ಇನ್ನೊಂದು ವಾರದಲ್ಲಿ ತಲಾ ಒಂದು ಹೊಸ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜು ಪ್ರಾರಂಭವಾಗಲಿದೆ. ಇದರ ಜೊತೆಗೆ ವಿವಿಧ ಗ್ರಾಮಗಳಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳನ್ನು ಸಹ ಮಂಜೂರು ಮಾಡಿಸಲಾಗಿದೆ. ಬ್ರಿಜ್ ಕಂ ಬ್ಯಾರೆಜ್ ನಿರ್ಮಾಣ, ಕೆರೆ ತುಂಬಿಸಲು ಸಹ ಅನುದಾನವನ್ನು ನೀಡಲಾಗಿದೆ. ಒಂದು ಶಾಲೆ ಪ್ರಾರಂಭಿಸಿದ ಬಳಿಕ ಶಾಲಾ ಮುಖ್ಯಗುರುಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ವೇತನ ಸೇರಿದಂತೆ ಒಂದು ವರ್ಷಕ್ಕೆ ಸುಮಾರು 70 ರಿಂದ 75 ಲಕ್ಷಗಳು ಖರ್ಚಾಗಲಿದ್ದು, ಈ ಅನುದಾನವನ್ನು ಸರ್ಕಾರವು ನೀಡಲಿದೆ ಎಂದರು.

ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಮಾತನಾಡಿ, ಎಲ್ಲಾ ಅಭಿವೃದ್ಧಿಗಿಂತಲೂ ಶಿಕ್ಷಣದ ಅಭಿವೃದ್ಧಿ ಬಹಳ ಪ್ರಮುಖವಾದದ್ದು. ಯಾಕೆಂದರೆ ಶಿಕ್ಷಣ ಎಂಬುದು ಒಂದು ದೊಡ್ಡ ಅಸ್ತ್ರವಾಗಿದ್ದು, ಅದರ ಕುರಿತು ಪಾಲಕರು, ಪೋಷಕರು ಹಾಗೂ ಶಿಕ್ಷಕರು ಸರಿಯಾಗಿ ಮಕ್ಕಳಿಗೆ ಮಾಹಿತಿ ನೀಡಬೇಕು. ಇವತ್ತು ಮೊಬೈಲ್ ಬಂದು ಮಕ್ಕಳಲ್ಲಿ ಓದುವ ಇಚ್ಚಾಸಕ್ತಿ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪಾಲಕರು ಗಮನ ಹರಿಸಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರೇವಂಕಲಕುಂಟಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹುಲಿಗೆಮ್ಮ ಬಸವರಾಜ ತಳವಾರ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಮಾಜಿ ಜಿ.ಪಂ ಸದಸ್ಯರಾದ ಹನುಮಂತಗೌಡ ಚಂಡೂರು, ಮಹೇಶ ಹಳ್ಳಿ, ಅಶೋಕ ತೋಟದ, ಶಾಲೆಯ ಮುಖ್ಯೋಪಾಧ್ಯಾಯರಾದ ಬಾಬುಸಾಬ ಲೈನ್ದಾರ್ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಶಾಲೆಯ ಶಿಕ್ಷಕರು, ಜನಪ್ರತಿನಿಧಿಗಳು, ಶಾಲೆಯ ಮಕ್ಕಳು ಸೇರಿದಂತೆ ಹಿರೇವಂಕಲಕುಂಟಾ ಗ್ರಾಮಸ್ಥರು ಉಪಸ್ಥಿತರಿದ್ದರು.
ವಿವಿಧ ಕಾರ್ಯಕ್ರಮಗಳಿಗೆ ಸಚಿವರಿಂದ ಚಾಲನೆ: ಯಲಬುರ್ಗಾ ತಾಲ್ಲೂಕಿನ ಹುಲೇಗುಡ್ಡ ಗ್ರಾಮ ಮತ್ತು ದ್ಯಾಂಪುರ ಗ್ರಾಮದಲ್ಲಿ ನೂತನ ಸರ್ಕಾರಿ ಪ್ರೌಢಶಾಲೆಗಳನ್ನು ಸಚಿವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post