ಕಲ್ಪ ಮೀಡಿಯಾ ಹೌಸ್ | ಕುಂದಾಪುರ |
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ #Kolluru Mokkambika Temple ಕೊಠಡಿ ಕಾಯ್ದಿರಿಸಲು ನಕಲಿ ವೆಬ್ ಸೈಟ್ ತಯಾರಿಸಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಅಧಿಕೃತ ವೆಬ್‌ಸೈಟ್ http://karnatakatemplesaccommodation.com ಬದಲಿಗೆ ಅಪರಿಚಿತರು ಅಕ್ರಮ ಲಾಭದ ಉದ್ದೇಶದಿಂದ karnatakatempleaccommodation ಎಂಬ ಹೆಸರಿನ ಅನಧಿಕೃತ ನಕಲಿ ವೆಬ್‌ಸೈಟ್‌ನ್ನು ರಚಿಸಿದ್ದು, ಈ ನಕಲಿ ವೆಬ್‌ಸೈಟ್ ಮೂಲಕ ಹಲವಾರು ಜನರಿಗೆ ಲಲಿತಾಂಬಿಕಾ ಅತಿಥಿ ಗೃಹದ ಕೊಠಡಿಯನ್ನು ಕಾಯ್ದಿರಿಸಿದ್ದಾರೆ. ಅವರಿಂದ ವಾಟ್ಸಾಪ್ ತಂತ್ರಾಂಶದಲ್ಲಿ ಪೋನ್ ಪೇ, ಕ್ಯೂಆರ್ ಕೋಡ್‌ನ್ನು ನೀಡಿ ಹಣವನ್ನು ಪಡೆದು ನಕಲಿ ರಶೀದಿ ನೀಡಿ ವಂಚಿಸಿ ಹಣ ದೋಚುತ್ತಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಸತಿ ಗೃಹದಲ್ಲಿ ಕೊಠಡಿ ಕಾಯ್ದಿರಿಸಿ, ರಶೀದಿಯೊಂದಿಗೆ ಭಕ್ತರು ದೇಗುಲಕ್ಕೆ ಬಂದಾಗ ವಂಚನೆ ಕುರಿತು ತಿಳಿದುಬಂದಿದೆ.
ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ವೆಬ್‌ಸೈಟ್ ಜಾಲ ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ.
ದೇವಾಲಯಗಳ ವಸತಿಗೃಹಗಳಲ್ಲಿ ಕೊಠಡಿ ಕಾಯ್ದಿರಿಸುವ ವೆಬ್‌ಸೈಟ್‌ನ ಅಧಿಕೃತ ವಿಳಾಸ: http://karnatakatemplesaccommodation.com ಆಗಿದೆ ಎಂದು ಉಲ್ಲೇಖಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























