ಕಲ್ಪ ಮೀಡಿಯಾ ಹೌಸ್ | ಕುಂದಾಪುರ |
ತಾಯಿ ಮಕ್ಕಳ ಸಂಬಂಧ ಎನ್ನುವುದೇ ಹಾಗೆ. ಕಣ್ಣು ಕಾಣದ್ದನ್ನು ಕರುಳು ಅರಿಯುತ್ತದೆ ಎಂಬ ಮಾತಿಗೆ ಸ್ಪಷ್ಟ ನಿದರ್ಶನದ ಘಟನೆಯೊಂದು ಇಲ್ಲಿ ನಡೆದಿದ್ದು, ಈ ವೀಡಿಯೋ ಈಗ ವೈರಲ್ ಆಗಿದೆ.
ಹೌದು… ಇಲ್ಲಿನ ಗಂಗೊಳ್ಳಿಯ ರೋಹಿತ್ ಎನ್ನುವ ಯುವಕ ದುಬೈನಲ್ಲಿ ಕೆಲಸ ಮಾಡುತ್ತಿದ್ದು ಕಳೆದ ಮೂರು ವರ್ಷಗಳಿಂದ ತನ್ನ ಊರಿಗೆ ಬಂದಿರಲಿಲ್ಲ. ಈತನ ತಾಯಿ ಸುಮಿತ್ರಾ ಅವರು ಗಂಗೊಳ್ಳಿಯ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಾರೆ.
ವಿದೇಶದಿಂದ ಮರಳಿದ ರೋಹಿತ್ ತನ್ನ ಮನೆಗೆ ತೆರಳದೇ ನೇರವಾಗಿ ಮೀನು ಮಾರುಕಟ್ಟೆಗೆ ತೆರಳಿದ್ದಾರೆ. ಮುಖಕ್ಕೆ ಬಟ್ಟೆ ಸುತ್ತಿಕೊಂಡು ತಾಯಿಯ ಬಳಿ ಹೋಗಿ, ಬಂಗುಡೆ ಮೀನು ಎಷ್ಟಮ್ಮಾ? ಫ್ರೆಶ್ ಇದಿಯಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ಸುಮಿತ್ರಾ ಅವರು ಹೌದು… ಈಗ ತಾನೇ ಬಂದಿದೆ, ಯಾವುದು ಬೇಕೋ ತಗೊಳ್ಳಿ ಎಂದಿದ್ದಾರೆ.
Also read: ಕಾವೇರಿ ಹಂಚಿಕೆ | ಸುಪ್ರೀಂನಲ್ಲಿ ರಾಜ್ಯಕ್ಕೆ ಹಿನ್ನಡೆ | 15 ದಿನ ತಮಿಳುನಾಡಿಗೆ ನೀರು ಹರಿಸಲು ಆದೇಶ
ಆದರೆ, ರೋಹಿತ್ ಮುಖ ಕಾಣದಿದ್ದರೂ ಆತನ ಹಾವಭಾವ ಆಕೆಗೆ ಅನುಮಾನ ತರಿಸಿದೆ. ಕಣ್ಣು ಕಾಣದ್ದನ್ನು, ಕರುಳು ಅರಿಯದೇ ಎಂಬ ಮಾತಿನಂತೆ ತನ್ನ ಮಗ ಇರಬಹುದು ಎಂದು ಊಹಿಸಿ ಆತನ ಮುಖದ ಬಟ್ಟೆಯನ್ನು ತೆಗೆದಿದ್ದಾರೆ.
ಮೂರು ವರ್ಷದ ನಂತರ ಅನಿರೀಕ್ಷಿತವಾಗಿ ತನ್ನ ಮಗನನ್ನು ಕಂಡ ತಾಯಿ ಭಾವನಾತ್ಮಕವಾಗಿ ಕಣ್ಣೀರು ಸುರಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಾಯಿ-ಮಗನ ಬಾಂಧವ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















