ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ (ಶಿವಮೊಗ್ಗ) |
ದೇಶದ ಆರ್ಥಿಕ ಬೆಳವಣಿಗೆಗೆ ವೇಗ ನೀಡುವಲ್ಲಿ ಹಾಗೂ ಜನರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದ (Cooperative Society) ಕೊಡುಗೆ ಮಹತ್ವದ್ದಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ (Kuvempu University) ಪರೀಕ್ಷಾಂಗ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಗಮದ ಸಹಯೋಗದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗವು ಬುಧವಾರ ಜ್ಞಾನಸಹ್ಯಾದ್ರಿಯ ಪ್ರೊ. ವೆಂಕಟರಾಮಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಹಕಾರ ತತ್ವ’ ಕುರಿತ ಚರ್ಚಾ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Kuvempu University: ರೈತರು, ಜನಸಾಮಾನ್ಯರ ಸಬಲೀಕರಣ
ಸಹಕಾರ ಕ್ಷೇತ್ರವು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗದೆ ರೈತರು ಹಾಗೂ ಜನಸಾಮಾನ್ಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಪ್ರೊ. ತಿಮ್ಮರಾಯಪ್ಪ ಹೇಳಿದರು.
ಅಮುಲ್ ಎಂದೇ ಪ್ರಸಿದ್ಧವಾಗಿರುವ ಗುಜರಾತ್ ಮೂಲದ ಆನಂದ್ ಹಾಲು ಉತ್ಪಾದಕರ ಸಂಘ, ನಂದಿನಿ ಹಾಗೂ ಮಲೆನಾಡು ಭಾಗದ ಮ್ಯಾಮ್ಕೋಸ್ನಂತಹ ಸಹಕಾರಿ ಸಂಸ್ಥೆಗಳು ರೈತರು ಮತ್ತು ಜನಸಾಮಾನ್ಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಮಹತ್ತರ ಕಾರ್ಯ ಮಾಡುತ್ತಿವೆ ಎಂದು ತಿಳಿಸಿದರು.
ದೇಶಾದ್ಯಂತ 8.5 ಲಕ್ಷ ಸಹಕಾರಿ ಸಂಘಗಳು
ದೇಶಾದ್ಯಂತ ಸುಮಾರು ಎಂಟೂವರೆ ಲಕ್ಷ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಗುಡಿ ಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಬ್ಯಾಂಕಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿವೆ. ಈ ಸಂಸ್ಥೆಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಜೊತೆಗೆ ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.
Also Read>> ಶಿವಮೊಗ್ಗ | ಪೇಸ್ ಶಾಲೆಯ ವಿದ್ಯಾರ್ಥಿನಿಯ ವಿಶ್ವದಾಖಲೆ! 200 ದೇಶಗಳ ಧ್ವಜ ಗುರುತಿಸಿದ 5 ವರ್ಷದ ಶ್ರೀನಿಕಾ!
ಸಹಕಾರ ತತ್ವವು ಜನರ ಒಗ್ಗಟ್ಟು ಮತ್ತು ಪರಸ್ಪರ ಸಹಭಾಗಿತ್ವದ ಮೂಲಕ ಆರ್ಥಿಕ ಪ್ರಗತಿಗೆ ಅವಕಾಶ ಕಲ್ಪಿಸುತ್ತದೆ. ಜನಜೀವನದ ಮಟ್ಟವನ್ನು ಸುಧಾರಿಸುವುದರೊಂದಿಗೆ ದೇಶದ ಆರ್ಥಿಕ ಬೆಳವಣಿಗೆಗೂ ಸಹಕಾರಿ ಸಂಸ್ಥೆಗಳು ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಸತ್ಯಪ್ರಕಾಶ್ ಎಂ.ಆರ್., ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶವಂತಕುಮಾರ್ ಹೆಚ್., ಸಹಕಾರ ನಿರ್ವಹಣಾ ಸಂಸ್ಥೆಯ ಉಪನ್ಯಾಸಕಿ ಡಾ. ಸೌಮ್ಯ ಕೆ., ಡಾ. ವಡಿವೇಲು, ಡಾ. ಹಾಲಸ್ವಾಮಿ ಸೇರಿದಂತೆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










