ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಯಕ ಶ್ರೇಷ್ಠನಾದ ಅನ್ನದಾತ ರೈತ ಬೆಳೆಯುವುದನ್ನು ಬಿಟ್ಟು ಬೇರೇನೂ ಚಿಂತಿಸದ ಮುಗ್ಧಜೀವಿ. ಕಾಯ್ದೆ, ನಿಯಮಗಳು ಅವನ ನೆಮ್ಮದಿ ಕಸಿಯಬಾರದು. ಈ ನಿಟ್ಟಿನಲ್ಲಿ ಭೂ ಕಬಳಿಕೆ ಕಾಯ್ದೆಯನ್ನು ಗ್ರಾಮೀಣ ಪ್ರದೇಶದ ವ್ಯಾಪ್ತಿಯಿಂದ ಹೊರಗಿಡುವ ರೈತಪರ ನಿರ್ಧಾರ ಕೈಗೊಳ್ಳುವ ಮೂಲಕ ನಮ್ಮನಡೆ-ಕೃಷಿಕರ ಕಡೆ’ಎಂಬುದನ್ನು ರಾಜ್ಯ ಬಿಜೆಪಿ ಸರ್ಕಾರ ಸಾಕ್ಷೀಕರಿಸಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್. ದತ್ತಾತ್ರಿ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ಬಹುಜನರ ಬೇಡಿಕೆಯಾಗಿದ್ದ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಯ 2011ರ ಕಾಲಂ 2(ಡಿ) ತಿದ್ದುಪಡಿ ತಂದಿರುವುದು ಬಹಳ ಸಂತಸವಾಗಿದೆ ಎಂದಿದ್ದಾರೆ.

ಭೂ ಕಬಳಿಕೆ ತಡೆಯಲು ಕರ್ನಾಟಕ ಭೂ ಕಬಳಿಕೆ (ನಿಷೇಧ) ಕಾಯ್ದೆ 2011ನ್ನು ಜಾರಿಗೆ ತಂದಿದ್ದು, ಈ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪನೆ ಮಾಡಿದೆ. ಈ ನ್ಯಾಯಾಲಯದಲ್ಲಿ ರಾಜ್ಯದಲ್ಲಿ ಒತ್ತುವರಿಯಾಗಿರುವ ಅಥವಾ ಕಬಳಿಸಿರುವ ಎಲ್ಲ ಸರಕಾರಿ ಜಮೀನುಗಳ ಪ್ರಕರಣಗಳು ತ್ವರಿತ ನ್ಯಾಯಾಲಯದ ವ್ಯಾಪ್ತಿಗೆ ಒಳ ಪಡಿಸಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಜೀವನ ನಿರ್ವಹಣೆಗೆ ವ್ಯವಸಾಯ ಮಾಡಲು ರೈತರು ಅರಣ್ಯ ಅಥವಾ ಕಂದಾಯ ಭೂಮಿ ಯನ್ನು ಒತ್ತುವರಿ ಮಾಡಿದವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು ಎಂದಿದ್ದಾರೆ.
ವಿಶೇಷವಾಗಿ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡಿರುವ ಸಣ್ಣ ಮತ್ತು ಅತೀ ಸಣ್ಣ ರೈತರು ಕೋರ್ಟ್ ಪ್ರಕರಣಕ್ಕಾಗಿ ಬೆಂಗಳೂರಿಗೆ ಅಲೆದಾಡುವುದು ದೊಡ್ಡ ಶಿಕ್ಷೆಯಂತಾಗಿ ಪರಿಣಮಿಸಿತ್ತು. ರಾಜ್ಯದಲ್ಲಿ ಭೂ ಒತ್ತುವರಿಯಲ್ಲಿ ಎರಡು ರೀತಿಯ ಮಾನದಂಡಗಳಿವೆ. ರೈತರು ಉಳುಮೆ ಮಾಡುವ ಉದ್ದೇಶದಿಂದ ಅನಧಿಕೃತ ಸಾಗುವಳಿ ಮಾಡುವುದು ಒಂದು ಭಾಗವಾದರೆ, ಸರಕಾರಿ ಜಮೀನಿಗೆ ಬೇಲಿ ಹಾಕಿಕೊಂಡು ಯಾವುದೇ ಕೃಷಿ ಚಟುವಟಿಕೆ ನಡೆಸದೆ ಅಕ್ರಮವಾಗಿ ಕಬಳಿಕೆ ಮಾಡುವುದು ಇನ್ನೊಂದು ಭಾಗ ಎಂದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಭೂ ಕಬಳಿಕೆ (ನಿಷೇಧ) ಕಾಯ್ದೆ 2011 ಕಲಂ 2ಡಿಗೆ ತಿದ್ದುಪಡಿ ತರಲು ನಿರ್ಧರಿಸಿದ್ದು, ಗ್ರಾಮೀಣ ಪ್ರದೇಶ ಭೂ ಒತ್ತುವರಿ ಪ್ರಕರಣಗಳನ್ನು ಸ್ಥಳೀಯವಾಗಿ ಎಸಿ ಅಥವಾ ಡಿಸಿ ವ್ಯಾಪ್ತಿಯಲ್ಲಿಯೇ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದರಿಂದ ರೈತರು ನೂರಾರು ಕಿಲೋಮೀಟರ್ ಬೆಂಗಳೂರಿಗೆ ಅಲೆದಾಡುವುದು ತಪ್ಪಿದಂತಾಗಿದೆ ಎಂದಿದ್ದಾರೆ.
ಈ ಕುರಿತು, ಸೂಕ್ತ ನಿರ್ಧಾರಕ್ಕೆ ಬಂದು, ವಿಧೇಯಕಕ್ಕೆ ತಿದ್ದುಪಡಿ ತರಲು ನಿರ್ಧರಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ರಾಜ್ಯದ ಸರ್ವ ರೈತರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ದತ್ತಾತ್ರಿ ಅವರು ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post