ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ: ಜಿಲ್ಲೆಯಲ್ಲಿ ಯಾವುದೇ ರೀತಿಯ ಪೂರ್ವಾನುಮತಿ ಪಡೆಯದೇ ನಿಯಮಬಾಹಿರವಾಗಿ ಹುಟ್ಟುಹಬ್ಬದ ಆಚರಣೆ, ಮೆಹಂದಿ ಕಾರ್ಯಕ್ರಮಗಳು, ಸನ್ಮಾನ ಕಾರ್ಯಕ್ರಮ ಮುಂತಾದವುಗಳನ್ನು ನಡೆಸಿದರೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್19 ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ಗಂಭೀರದ ವಿಷಯವಾಗಿದೆ. ಇಂತಹ ಕಾರ್ಯಕ್ರಮಗಳು ಕೋವಿಡ್19ನ್ನು ಹರಡುವಂತಹದಾಗಿದ್ದು, ಈ ಕಾರ್ಯಕ್ರಮಗಳ ಸಂಘಟಕರ ಮೇಲೆ ಕಡ್ಡಾಯವಾಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪೂರ್ವಾನುಮತಿಯ ಮೇರೆಗೆ ಜರುಗುವ ಮದುವೆ/ಇತರೆ ಸಭೆ ಸಮಾರಂಭ, ಸನ್ಮಾನ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸರ್ಕಾರದ ಆದೇಶದನ್ವಯ , ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಬಳಕೆ, ಶುಚಿತ್ವ ಕಾಪಾಡಿಕೊಳ್ಳುವಿಕೆಗೆ ಹಾಗೂ ಇತರ ಎಸ್.ಓ.ಪಿ. ಕ್ರಮಗಳು ಯಥಾ ರೀತಿಯಲ್ಲಿ ಪಾಲನೆಯಾಗುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ಸಂಬಟಧಿಸಿದ ತಹಶೀಲ್ದಾರರು/ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು/ ಉಡುಪಿ ನಗರಸಭೆ ಪೌರಾಯುಕ್ತರು/ಮುಖ್ಯಾಧಿಕಾರಿಗಳು/ಗ್ರಾಮ ಲೆಕ್ಕಾಧಿಕಾರಿಗಳು/ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು/ಹಾಗೂ ಆಯಾ ಇಲಾಖಾ ಸಿಬ್ಬಂದಿ ವರ್ಗದವರು ಖುದ್ದಾಗಿ ಭೇಟಿ ನೀಡಿ ಖಚಿತಪಡಿಸಿಕೊಳ್ಳುವಂತೆ ಅವರು ಸೂಚಿಸಿದ್ದಾರೆ.
Get In Touch With Us info@kalpa.news Whatsapp: 9481252093

















