ನವದೆಹಲಿ: ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಂವಿಧಾನದ ಪ್ರಕಾರವೇ ಸಮಸ್ಯೆಗಳನ್ನು ಪರಿಹಾರ ಮಾಡಿ, ಅಯೋಧ್ಯೆಯಲ್ಲಿಯೇ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಎಎನ್ ಐ ಮಾಧ್ಯಮವೊಂದಕ್ಕೆ 2019ರ ತಮ್ಮ ಮೊದಲ ಸಂದರ್ಶನದಲ್ಲಿ ಮಾತನಾಡಿರುವ ಅವರು, ಅಯೋಧ್ಯೆ ರಾಮಮಂದಿರದ ನ್ಯಾಯಾಂಗ ಪ್ರಕ್ರಿಯೆ ಮುಗಿದ ನಂತರವಷ್ಟೇ ರಾಮಮಂದಿರ ನಿರ್ಮಾಣವನ್ನು ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಸುಗ್ರೀವಾಜ್ಞೆ ತರುವ ವಿಚಾರ ಇಲ್ಲ, ಹಾಗೊಂದು ವೇಳೆ ಯಾವುದೇ ಕ್ರಮ ತೆಗೆದುಕೊಳ್ಳುವುದಾದಲ್ಲಿ ಅದು ನ್ಯಾಯಾಂಗ ಪ್ರಕ್ರಿಯೆ ಮುಗಿದ ನಂತರವಷ್ಟೇ ನಿರ್ಧಾರವಾಗಲಿದೆ ಎಂದಿದ್ದಾರೆ.
ನ್ಯಾಯಾಲಯದ ವಿಚಾರಣೆಯ ವೇಳೆ ಕಾಂಗ್ರೆಸ್ ವಕೀಲರು ನ್ಯಾಯಾಲಯದಲ್ಲಿ ಅಡ್ಡಿಯುಂಟು ಮಾಡುತ್ತಿದ್ದಾರೆ. ಹಾಗಾಗಿ ನ್ಯಾಯಾಂಗ ಪ್ರಕ್ರಿಯೆ ನಿಧಾನವಾಗಿದೆ. ಸಂವಿಧಾನದ ಪ್ರಕಾರವೇ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುವುದು. ನಮ್ಮ ಪ್ರಣಾಳಿಕೆಯಲ್ಲಿ ನಾವು ಹೇಳಿದ್ದೇವೆ ಎಂದರು.
#WATCH PM Narendra Modi's interview to ANI's editor Smita Prakash https://t.co/k2qHD2ULhN
— ANI (@ANI) January 1, 2019
ಇದೊಂದು ಭಾವನಾತ್ಮಕ ವಿಚಾರವಷ್ಟೆಯೇ ಎಂಬ ಬಗ್ಗೆ ಪ್ರಶ್ನಿಸಿದಾಗ ಮೋದಿ ರಾಮಮಂದಿರದ ಕುರಿತು ಬಿಜೆಪಿ ನಿಲುವನ್ನು ಮೇಲಿನಂತೆ ಸ್ಪಷ್ಟಪಡಿಸಿದ್ದಾರೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರವನ್ನು ನಿರ್ಮಾಣ ಮಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಅದನ್ನು ಈಡೇರಿಸಲಿದೆ ಎಂದರು.
ತ್ರಿವಳಿ ತಲಾಕ್ ಕುರಿತ ಸುಗ್ರೀವಾಜ್ಞೆ ತಂದದ್ದು ಸಹ ತ್ರಿವಳಿ ತಲಾಕ್ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿತ್ತ ಬಳಿಕವೇ ಆಗಿದ್ದು. ಸರ್ಕಾರವು ನ್ಯಾಯಾಂಗದ ತೀರ್ಪನ್ನು ಎಂದಿಗೂ ಗೌರವಿಸಿದೆ. 2017ರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಉಲ್ಲೇಖಿಸಿದ ಮೋದಿ ಸುಪ್ರೀಂ ಕೋರ್ಟ್ ಮುಸ್ಲಿಮರ ತ್ರಿವಳಿ ತಲಾಖ್ ಆಚರಣೆಯನ್ನು ನಿಷೇಧಿಸಿತ್ತು, ಆ ಬಳಿಕವೇ ಸರ್ಕಾರ ಈ ಕುರಿತಂತೆ ಕ್ರಮಕ್ಕೆ ಮುಂದಾಗಿತ್ತು ಎಂದವರು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ಲೋಕಸಭಾ ಚುನಾವಣೆ ಜನತೆ ಹಾಗೂ ಮಹಾಘಟಬಂಧನ್ ನಡುವೆ ನಡೆಯಲಿದೆ. ಮೋದಿ ಸಾರ್ವಜನಿಕ ಪ್ರೀತಿ ಮತ್ತು ಆಶೀರ್ವಾದದ ಅಭಿವ್ಯಕ್ತಿ ಎಂದಿದ್ದಾರೆ.
ಆರ್ಬಿಐ ಹಾಗೂ ಸರ್ಕಾರ ವಿಚಾರವಾಗಿ ಪ್ರತಿಕ್ರಿಸಿದ ಪ್ರಧಾನಿ, ಊರ್ಜಿತ್ ಪಟೇಲ್ ಆರ್‌ಬಿಐ ಗವರ್ನರ್ ಆಗಿ ಉತ್ತಮ ಕೆಲಸ ಮಾಡಿದ್ದಾರೆ. ಕಳೆದ 6-7 ತಿಂಗಳುಗಳಿಂದ ರಾಜೀನಾಮೆ ನೀಡಬೇಕೆಂದು ಅವರು ಹೇಳುತ್ತಿದ್ದರು ಎಂದು ತಿಳಿಸಿದರು.
Discussion about this post