ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಪರಮ ಪೂಜ್ಯ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ |
ಭಾರತೀಯ ಸನಾತನ ಶಾಸ್ತ್ರ ಪರಂಪರೆಯ ಬಗ್ಗೆ ಆಳವಾದ, ಅಪಾರವಾದ ಜ್ಞಾನದ ಪಾಂಡಿತ್ಯವನ್ನೇ ಹೊಂದಿರುವ ಶ್ರೀಭಂಡಾರಕೇರಿ ಮಠದ ಪೂಜ್ಯ ಶ್ರೀವಿದ್ಯೇಶತೀರ್ಥ ಶ್ರೀಪಾದಂಗಳವರು ಪ್ರಖರ ವಾಗ್ಮಿಗಳು, ಅದ್ವಿತೀಯ ವಿದ್ವಾಂಸರೂ ಹಾಗೂ ವಾಕ್ಪಟುತ್ವ ಹೊಂದಿರುವ ಯತಿವರೇಣ್ಯರೂ ಹೌದು. ಅಂತಹ ಯತಿವರೇಣ್ಯರು ಗೀತರಚನಾರಾರರೂ ಆಗಿ ವಿದ್ಯೇಶ ವಿಠಲಾಂಕಿತ ಎಂಬ ಅಂಕಿತದಲ್ಲಿ ಈವರೆಗೆ ಸುಮಾರು ಸಾವಿರಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿದವರು. ಅದರಲ್ಲೂ ರಾಮ ಬಗ್ಗೆ ಅವರ ವಿಶೇಷವಾದ ಕೃತಿಗಳು, ಸಂಗೀತ ಮತ್ತು ಸಾಹಿತ್ಯಾಸಕ್ತರ ಪಂಡಿತ ವಲಯದ ಮೇರು ವ್ಯಕ್ತಿಗಳ ಗಮನ ಸೆಳೆದಿರುವ ಮಹನೀಯರು ಎಂಬುದು ವಿಶೇಷ. ಬೆಂಗಳೂರಿನ ಗಿರಿನಗರದ ಭಾಗವತಾಶ್ರಮದಲ್ಲಿ ಅವರು ತಮ್ಮ ಆಶ್ರಮವನ್ನು ಹೊಂದಿದ್ದು, ಪ್ರತಿನಿತ್ಯವೂ ಸಹ ಸಾವಿರಾರು ಭಕ್ತರಿಗೆ ಉಪನ್ಯಾಸ, ಸಂಗೀತ, ವಿಚಾರಗೋಷ್ಠಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರು ನಮ್ಮ ಸನಾತನ ಹಿಂದೂ ಪರಂಪರೆಗೆ ಅನನ್ಯವಾದ ಕೊಡುಗೆಗಳನ್ನು ಕೊಟ್ಟು ಅನುಗ್ರಹ ಮಾಡುತ್ತಿದ್ದಾರೆ. ಉಡುಪಿಯ ಭಂಡಾರಕೇರಿ ಮಠ ಎಂದರೆ ಅದು ಮದ್ವಾಚಾರ್ಯರಿಗೆ ಆಶ್ರಮ ಕೊಟ್ಟಂತಹ ಅಚ್ಯುತಾಪ್ರೇಕ್ಷಾಚಾರ್ಯರ ಪರಂಪರೆಯ ಸನಾತನವಾದ ಮಠ. ಇಂತಹ ವಿಶೇಷ ಹಾಗೂ ಪ್ರತಿಷ್ಠಿತವಾದ ಸಂಸ್ಥಾನದ ಪೀಠಕ್ಕೆ ವಿರಾಜಮಾನರಾಗಿರುವ ಶ್ರೀವಿದ್ಯೇಶತೀರ್ಥ ಶ್ರೀಪಾದಂಗಳವರು ವಿದ್ಯೆಯ ಮೇರು ಪರ್ವತವೇ ಆಗಿದ್ದಾರೆ. ಇಂತಹ ಪೂಜ್ಯಮಾನ್ಯ ಯತಿವರೇಣ್ಯರು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾಗಾಗಿ ಒಂದು ವಿಶೇಷ ಲೇಖನವನ್ನು ಅನುಗ್ರಹರೂಪಿಯಾಗಿ ಪ್ರದಾನ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಮಹಾರಾಜರ ಪ್ರತಿಮೆ ಪ್ರಾಣಪ್ರತಿಷ್ಠೆಯಾಗುತ್ತಿರುವ ಈ ಶುಭಗಳಿಗೆಯಲ್ಲಿ ಇಡಿಯ ವಿಶ್ವವೇ ನಮ್ಮ ಭಾರತದೆಡೆಗೆ ನೋಡುತ್ತಿದೆ. ಭೂಮಿಯಿರುವಷ್ಟೂ ಕಾಲ ಐತಿಹಾಸಿಕ ದಾಖಲೆಯಾಗುವ ಈ ಕಾಲಘಟ್ಟದಲ್ಲಿ ಜನಿಸಿರುವ ಪ್ರತಿಯೊಬ್ಬರೂ ಪುಣ್ಯವಂತರೇ. ಹೀಗಿದ್ದಾಗ, ಈ ಐತಿಹಾಸಿಕ ಪ್ರಾಣಪ್ರತಿಷ್ಠೆ ವೇಳೆ ಯಾವುದೇ ರೀತಿಯಲ್ಲಿ ನಾವು ಯಾವುದೇ ರೀತಿಯಲ್ಲಿ ಸೇವೆ ಮಾಡಿದರೂ ಅದು ರಾಮನಿಗೆ ಪ್ರೀತಿಯಾಗುತ್ತದೆ. ಈ ಸಂದರ್ಭದಲ್ಲಿ ಪೂಜ್ಯ ಶ್ರೀಗಳು ಬರೆದಂತಹ ವಿಶೇಷ ಲೇಖನವನ್ನು ನಮ್ಮ ಭಕ್ತ ಕೋಟಿಗೆ ಕೊಡುವ ಸಂಭ್ರಮದಲ್ಲಿ ಕಲ್ಪ ನ್ಯೂಸ್ ತೇಲುತ್ತಿದೆ. ಈ ವಿಶೇಷ ಲೇಖನವನ್ನು ನೀವು ಓದಿ, ನಿಮ್ಮವರಿಗೂ ಶೇರ್ ಮಾಡಿ…
ನಿತ್ಯ ವಿಷ್ಣುಸಹಸ್ರನಾಮಾವಳಿಯನ್ನು #Vishnusahasranama ಪಠಿಸಿಯೇ ಭೋಜನ ಮಾಡುವ ಪದ್ಧತಿಯನ್ನು ಅನುಸರಿಸುವ ಪಾರ್ವತೀದೇವಿಯು, ಒಮ್ಮೆ ದ್ವಾದಶಿಯಂದು ರುದ್ರದೇವನು ಪಾರಣೆಗೆ (ವ್ರತಾಂಗ ಭೋಜನಕ್ಕೆ) ಕರೆದಾಗ, ವಿಷ್ಣುಸಹಸ್ರನಾಮ ಪಠಣವಾಗಿಲ್ಲವೆಂದು ಹೇಳಿದಳು. ಆಗ ರುದ್ರದೇವನು ರಾಮನನ್ನು ಭಕ್ತಿಯಿಂದ ಸ್ಮರಿಸಿ, ಮೂರು ಬಾರಿ ರಾಮನಾಮವನ್ನು ಪಠಿಸಿದರೆ, ವಿಷ್ಣುಸಹಸ್ರನಾಮಪಠಣದ ಫಲ ಪ್ರಾಪ್ತಿಯಾಗುವುದೆಂದು ಸೂಚಿಸುತ್ತಾ “ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ || ಸಹಸ್ರನಾಮತತ್ತುಲ್ಯಂ ರಾಮನಾಮವರಾನನೇ ||” ಎಂಬ ಶ್ಲೋಕವನ್ನು ಪಠಿಸಿದನು. ಸಾಧ್ವಿಯಾದ ಪಾರ್ವತೀ ರಾಮನಾಮವನ್ನು ಜಪಿಸಿ, ಹರನೊಂದಿಗೆ ಪಾರಣೆಯಲ್ಲಿ ಪ್ರವೃತ್ತಳಾದಳು. ಹರನು ಆಕೆಗೆ, ರಾಮನಾಮಾಷ್ಟೋತ್ತರ ಶತನಾಮಗಳನ್ನೂ ಉಪದೇಶಿಸಿದನು. ಇದಲ್ಲದೇ, ಎಲ್ಲರ ಬಾಯಲ್ಲಿ ಇಂದಿಗೂ ನಲಿದಾಡುವ ಪ್ರಸಿದ್ಧವಾದ ಮಂತ್ರತುಲ್ಯ ಪದ್ಯವನ್ನೂ ಉಪದೇಶಿಸಿದನು. ಪದ್ಮಪುರಾಣದಲ್ಲಿ #PadmaPurana ಈ ಶ್ಲೋಕದ ಉಲ್ಲೇಖವಿದೆ.
|| ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ || ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||
ಈ ಶ್ಲೋಕರೂಪದ ಮಂತ್ರದಲ್ಲಿ ಸೀತಾರಾಮರ ದರ್ಶನವನ್ನು ಮಾಡೋಣ.
ರಾಮ – ಬಾಲಕಾಂಡ
ಜ್ಞಾನಾನಂದಸ್ವರೂಪ, ಲೋಕಕ್ಕೆ ತನ್ನ ಮಾತು, ನಡತೆ, ಸೌಂದರ್ಯ, ಶೀಲಗುಣ ಸಂಪತ್ತಿನಿಂದ ಮುದ ನೀಡುವವನು. ಅದಕ್ಕೆಂದೇ ಲೋಕಾಭಿರಾಮ, ಗುಣಾಭಿರಾಮನೆಂದು ಪ್ರಖ್ಯಾತಿ ಪಡೆದವನು. ನೂರು ಅಪಕಾರಗಳನ್ನು ಕಡೆಗಣಿಸಿ, ಮಾಡಿದ ಒಂದು ಉಪಕಾರವನ್ನು ಸ್ಮರಿಸಿ, ಪ್ರತಿಕ್ರಯಿಸುವ ಮಹಾಕೃತಜ್ಞನು ಅದಕ್ಕೆಂದೇ ಲೋಕರಂಜಕನು. “ರ + ಅಮ = ರಾಮ” – ಆನಂದರೂಪನು, ಪರಿಮಾಣಾತೀತ ಗುಣದಿಂದ ಸಂಪನ್ನನು, ಎಂದು ಶಾಂಡಿಲ್ಯ ಶಾಖೆಯು ರಾಮನಾಮವನ್ನು ವ್ಯಾಖ್ಯಾನಿಸಿದೆ. ಬೇರೆ ಬೇರೆ ಆಯಾಮಗಳಲ್ಲಿ ರಾಮಶಬ್ದವು ತೆರೆದುಕೊಳ್ಳುತ್ತದೆ. “ರಾ” ಶಬ್ದವು ಲಕ್ಷ್ಮೀಸ್ವರೂಪಳಾದ ಸೀತೆಯನ್ನು ಹೇಳುತ್ತದೆ. “ಅಮಾ” ಶಬ್ದವು ಸಾಮಿಪ್ಯವನ್ನು ಹೇಳುತ್ತದೆ. ಯಾರಿಗೆ ಲಕ್ಷ್ಮೀಸ್ವರೂಪಳಾದ ಸೀತೆಯು ಸಮೀಪಳಾದಳೋ, ಆ ರಾಘವನೇ (ರಾ + ಅಮಾ ಯಸ್ಯ ಸಃ = ರಾಮಃ) ರಾಮನೆಂದು ಕೀರ್ತಿತನಾಗಿದ್ದಾನೆ.

ಸುಂದರಿಯರ ಮನವನ್ನು ಸೂರೆಗೊಳ್ಳುವ ಸೌಂದರ್ಯದಿಂದ ರಾಮ ಎನಿಸಿದನು. ಪೂರ್ಣಾನಂದ-ಪೂರ್ಣಜ್ಞಾನ ಸ್ವರೂಪವುಳ್ಳವನಾಗಿ, ರಾಮ ಎನಿಸಿದ ರಾಘವನಿಗೆ, ಸೀತೆ ಎಲ್ಲಿದ್ದಾಳೆಂದು ಮಾಹಿತಿಯಿದೆ. ಆಕೆ ಕೈಲಾಸದಲ್ಲಿ ಶಿವ-ಪಾರ್ವತಿಯರಿಂದ ಪೂಜಿತಳಾಗಿದ್ದಳೆಂದು ತಿಳಿದೂ ಕೂಡ, ಅಜ್ಞಾನಿಯಂತೆ ತೋರುತ್ತಾ, ಸೀತಾನ್ವೇಷಣ, ಆಕೆಯ ವಿರಹದುಃಖದ ನಟನೆಯನ್ನು ಮಾತ್ರ ಮಾಡಿದನು. ರಾವಣನು ಸೀತಾಪ್ರತಿಕೃತಿಯನ್ನು ಅಪಹರಿಸಿದಾಗ, ದುರ್ಜನರನ್ನು ಮೋಹಗೊಳಿಸುವ ಉದ್ದೇಶ ರಾಮನಿಗಿತ್ತು. ಸೀತೆಯನ್ನು ವಿವಾಹವಾದ ಬಳಿಕ 12 ವರ್ಷಗಳ ಪರ್ಯಂತ ಅಯೋಧ್ಯೆಯಲ್ಲಿ ಲಕ್ಷ್ಮೀಸ್ವರೂಪಳಾದ, ಆಕೆಯ ರಮಣಕ್ರೀಡೆಗೆ ಪಾತ್ರನಾಗಿದ್ದನು. ಆದುದರಿಂದ ಆತ ರಾಮನೆಂದು ಕೀರ್ತಿತನಾಗಿದ್ದಾನೆ. “ರಮಾಯಾ ರಮಣಸ್ಥಾನಂ ತೇನ ರಾಮಂ ವಿದುರ್ಬುಧಾಃ” ಎಂಬ ಬ್ರಹ್ಮವೈವರ್ತಪುರಾಣವು ಈ ಅರ್ಥವನ್ನು ಪ್ರತಿಪಾದಿಸಿದೆ. ಒಟ್ಟಿನಲ್ಲಿ ರಾಮನಾಮವನ್ನು ವಿಶ್ಲೇಷಿಸಿದಾಗ, ಬಾಲಕಾಂಡದ ಅರ್ಥವು ಇಲ್ಲಿ ಅಡಗಿದೆಯೆಂದು ಹೇಳಬಹುದು.

ವೃದ್ಧನಾದ ದಶರಥನು ಜ್ಯೇಷ್ಠಪುತ್ರ ರಾಮನಿಗೆ ಪಟ್ಟಾಭಿಷೇಕದ ಪ್ರಸ್ತಾವವನ್ನು ಸಾಮಂತರಾಜ-ಪೌರ-ಮಂತ್ರಿ-ಪುರೋಹಿತರಿಂದ ತುಂಬಿದ ಸಭೆಯಲ್ಲಿ ಮಾಡಿದಾಗ ಎಲ್ಲರೂ ಏಕಕಂಠದಿಂದ ರಾಮನು ನಿನ್ನಿಂದ ಪಟ್ಟಾಭಿಷಿಕ್ತನಾಗಿ ಗಜವಾಹನನಾಗಿ ಶೋಭಯಾತ್ರೆಯಲ್ಲಿ ಹೋಗುವುದನ್ನು ನಾವು ಶೀಘ್ರವಾಗಿ ನೋಡಲು ಬಯಸುತ್ತೇವೆ. ಆತ ರಾಜನಾದರೆ, ಭ್ರಾತೃ ಭಾವದಿಂದ ನಮ್ಮನ್ನು ಚೆನ್ನಾಗಿ ಪಾಲನೆ ಮಾಡುತ್ತಾ, ನಿನಗಿಂತಲೂ ಅಧಿಕವಾಗಿ ನಮಗೆ ಹಿತವನ್ನು ಮಾಡುತ್ತಾನೆಂದು, ನಿವೇದಿಸಿಕೊಂಡು ಶುಭ ಹಾರೈಸಿದರು. ರಾಮಗುಣಾಭಿರಾಮನೆಂದು ಸಾರಿ, ಅವರೆಲ್ಲರೂ ರಾಮ ನಮಗೆ ಭದ್ರ – ನಿನಗಿಂತಲೂ ಹೆಚ್ಚು ಕಲ್ಯಾಣ(ಶುಭ) ಪ್ರದನೆಂದು ಸಾರಿದರು. ಅವನ ಪಟ್ಟಾಭಿಷೇಕಕ್ಕಾಗಿ ಹರಕೆ ಹೊತ್ತು, ದೇವತಾಪ್ರಾರ್ಥನೆಯನ್ನು ಮಾಡಿದರು. ಇದು ಅಯೋಧ್ಯಾಕಾಂಡದ ಅರ್ಥ. ರಾಮಭದ್ರ ಎಂಬ ಶಬ್ದದಲ್ಲಿ ಇದು ಅಡಗಿದೆ.

ರಾಮಚಂದ್ರ – ಅರಣ್ಯಕಾಂಡ
ದಂಡಕಾರಣ್ಯವನ್ನು ಪ್ರವೇಶಿಸಿ, ಖರದೂಷಣಾದಿ ರಾಕ್ಷಸರಿಂದ ಪೀಡಿತರಾಗಿ, ಉದ್ವಿಗ್ನರಾದ ಋಷಿಗಳ ಸಮುದಾಯಕ್ಕೆ ಅಭಯವಚನಪ್ರದಾನಗೈದು, ರಾಕ್ಷಸರ ಸಂಹಾರದ ಪ್ರತಿಜ್ಞೆಯನ್ನು ಗೈದು, ಅದನ್ನು ಏಕಾಕಿಯಾಗಿ ಮಾಡಿದನು ಶ್ರೀರಾಮ.

ವೇಧಸ್ ಶಬ್ದ – ಸುಂದರಕಾಂಡ & ಯುದ್ಧಕಾಂಡ & ಕಿಷ್ಕಿಂಧಾಕಾಂಡ
“ವಿಧತ್ತೇ ಇತಿ = ವೇಧಾಃ” – ವೇಧಸ್ ಶಬ್ದವು ವಿಶಿಷ್ಟ ಕರ್ತೃತ್ವ ಶಕ್ತಿಸಂಪನ್ನನು ಎಂಬ ಅರ್ಥವನ್ನು ನೀಡುತ್ತದೆ. ರಾಮಚಂದ್ರನು #LordRama ನಾನಾಕಪಿಗಳಿಂದ ಕಲ್ಲುಬಂಡೆ, ಪರ್ವತ ಶಿಖರಾದಿಗಳನ್ನು ತರಿಸಿಕೊಂಡು, ಪುಷ್ಯಮಾಸದ ಶುಕ್ಲಪಕ್ಷದ ದಶಮಿಯಂದು ಸೇತುನಿರ್ಮಾಣಕಾರ್ಯವನ್ನು ಕಪಿಗಳಿಂದ ಪ್ರಾರಂಭ ಮಾಡಿಸಿ, ತ್ರಯೋದಶಿಯಂದು ಸೇತುನಿರ್ಮಾಣಕಾರ್ಯವನ್ನು ಕಪಿಗಳಿಂದ ಪೂರ್ಣಮಾಡಿಸಿಕೊಂಡನು ಎಂದು ಸ್ಕಂಧಪುರಾಣವು ಉಲ್ಲೇಖಿಸಿದೆ. ಶತಯೋಜನ ಉದ್ದದ ಸೇತುನಿರ್ಮಾಣದ ಕಾರ್ಯವನ್ನು ನಾಲ್ಕೇ ದಿನಗಳಲ್ಲಿ ಪೂರೈಸಿದ ರಾಮನ ಕರ್ತೃತ್ವಶಕ್ತಿ ಅನುಪಮವೆಂದು ಈ ಪುರಾಣವು ಸೂಚಿಸಿದೆ. ಇದು ಯುದ್ಧಕಾಂಡದ ಅರ್ಥ. ಇದು “ವೇಧಸ್” ಶಬ್ದದಲ್ಲಿ ಅಡಗಿದೆ. ಇದಲ್ಲದೇ ಆಂಜನೇಯನೂ ಕೂಡ ರಾವಣನ ಸಭೆಯಲ್ಲಿ ರಾಮನು ಚರಾಚರ ಪ್ರಪಂಚವನ್ನು ಸಂಹಾರಗೈದು, ಪುನಃ ಅದನ್ನು ನಿರ್ಮಾಣ ಮಾಡಬಲ್ಲನು. ಅವನನ್ನು ವಿರೋಧಿಸಿದರೆ, ನಿನ್ನನ್ನು ಬ್ರಹ್ಮರುದ್ರಾದಿಗಳೂ ರಕ್ಷಿಸಲಾರರು ಎಂದು ಎಚ್ಚರಿಸುತ್ತಾನೆ. ಇದು ಸುಂದರಕಾಂಡದಲ್ಲಿ ಪ್ರಸ್ತುತವಾದ ರಾಮನ ಕರ್ತೃತ್ವಶಕ್ತಿ. ಇದನ್ನು ವೇಧಸ್ ಶಬ್ದವು ಸಾರುತ್ತಿದೆ. ಇದಲ್ಲದೇ ಆತನ ದಾಸನಾದ ಆಂಜನೇಯನ ಮುಖದಿಂದ ಲಂಕೆಯಲ್ಲಿ, ಲಂಕಾದಹನ, ವನಭಂಜನ, ಅಕ್ಷಸಂಹಾರ, ಕೋಟಿ-ಕೋಟಿ ಕಿಂಕರರಾಕ್ಷಸರ ಸಂಹಾರ. ರಾವಣನಿಗೆ #Ravana ಮಾಡಿದ ಧೂತ್ಕಾರ ಮೊದಲಾದ ಕಾರ್ಯಗಳನ್ನು ಮಾಡಿಸುವ ಮೂಲಕ ತನ್ನ ಕರ್ತೃತ್ವಶಕ್ತಿಯನ್ನು ಪ್ರಕಟಪಡಿಸಿದ್ದಾನೆ. ಇದು ವೇಧಸ್ ಶಬ್ದದಲ್ಲಿ ಅಡಗಿದೆ. ಆದುದರಿಂದ ವೇಧಸ್ ಶಬ್ದವು ಸುಂದರಕಾಂಡದ ಅರ್ಥವನ್ನು ಪ್ರತಿಪಾದಿಸುತ್ತದೆ.

ಸುಗ್ರೀವನಿಗೆ ತನ್ನ ಬಲದ ಬಗೆಗೆ ವಿಶ್ವಾಸ ಹುಟ್ಟಿಸಲು, ದುಂದುಭಿಕಾಯವನ್ನೂ, ದೂರಕ್ಕೆ ಎಸೆದನು. ಸುಗ್ರೀವನಿಗೆ ರಾಜ್ಯವನ್ನು ನೀಡಿ ತನ್ನ ಕಾರ್ಯಕ್ಕೆ ಚುರುಕಾಗಿ ಚಾಲನೆ ನೀಡಿದನು. ಇಂತಹ ರಾಮನ ಕರ್ತೃತ್ವಶಕ್ತಿಯನ್ನು ಸಾರುವ ವೇಧಸ್ ಶಬ್ದವು ಕಿಷ್ಕಿಂಧಾ ಕಾಂಡದ ಅರ್ಥವೂ ಹೌದು.
ರಘುನಾಥ
ರಘುನಾಥ ಶಬ್ದವು #Raghuvamsha ರಘುವಂಶದಲ್ಲಿ ಶ್ರೇಷ್ಠನಾದ ದಶರಥರಾಜನಿಂದ ಆಶೀರ್ವಾದ ಮಾಡಿಸಿಕೊಂಡವನು ಎಂಬ ಅರ್ಥವನ್ನು ಸೂಚಿಸುತ್ತದೆ. ರಘುವಂಶದಲ್ಲಿ ಬಂದ ಎಲ್ಲಾ ರಾಜರನ್ನೂ ರಘುವಂಶಕಾವ್ಯದಲ್ಲಿ ರಘು ಎಂಬ ಪದದಿಂದಲೇ ಉಲ್ಲೇಖಿಸಲಾಗಿದೆ. ಹೀಗಾಗಿ ರಘುಶಬ್ದದಿಂದ ದಶರಥರಾಜನೂ ಉಲ್ಲೇಖಾರ್ಹನು. ನಾಥ ಶಬ್ದವು ಆಶೀರ್ವಾದಕರ್ತಾ ಎಂಬ ಅರ್ಥವನ್ನು ನೀಡುತ್ತದೆ. ನಾಥೃ ಎಂಬ ಕ್ರಿಯಾಪದಕ್ಕೆ ಆಶೀರ್ವಾದ ಎಂಬ ಅರ್ಥವು ಇದೆ ತಾನೆ.? ತಂದೆಯಾದ ದಶರಥರಾಜನು ತನ್ನ ನೆಚ್ಚಿನ ಮಗನಾದ ರಾಮಚಂದ್ರನಿಗೆ ಆಶೀರ್ವಾದ ಮಾಡಿದ್ದನ್ನು ವಾಯುಪುರಾಣವು ಉಲ್ಲೇಖಿಸಿದೆ. “ರಾಮ ನೀನು ಚಿರಕಾಲ ರಾಜ್ಯಭಾರ ಮಾಡುವಿ, ಅಯೋಧ್ಯಾ ಜನರು ಹಾಗು ತೃಣ-ಕೀಟಾದಿ ಜೀವರಾಶಿಯೊಂದಿಗೆ ವಿಷ್ಣುಲೋಕವನ್ನು ಹೊಂದುವಿ” ಎಂದು ಆಶೀರ್ವದಿಸಿದನೆಂದು ಅದು ಉಲ್ಲೇಖ ಮಾಡಿದೆ. ಇದು ರಾಮನ ಪಿತೃಭಕ್ತಿಗೆ ದ್ಯೋತಕವಾದ ಪದ ಎನ್ನಬಹುದು. ರಾಮನಿಗೆ ತಂದೆಯ ಆಶೀರ್ವಾದದಿಂದ ಏನೂ ಆಗಬೇಕಾಗಿಲ್ಲ. ಈ ಆಶೀರ್ವಾದವು ಲೋಕಶಿಕ್ಷಕನಾಗಿ ಅವನು ತೋರಿದ ಪಿತೃಭಕ್ತಿಗೆ ದ್ಯೋತಕವೆನ್ನಬಹುದು. ರಘುನಾಥಶಬ್ದವು ಇನ್ನೊಂದು ಆಯಾಮದಲ್ಲಿಯೂ ತೆರೆದುಕೊಳ್ಳುತ್ತದೆ. “ರಘವಃ ನಾಥಾಃ ಯಸ್ಮಾತ್ ಸಃ = ರಘುನಾಥಃ” – ಎಂಬ ವಿವರಣೆಯನ್ನು ಸ್ವೀಕರಿಸಿದಾಗ, ಇನ್ನೊಂದು ಅರ್ಥವು ಲಭ್ಯವಾಗುತ್ತದೆ. ಕುಲದೀಪಕನಾದ ತನ್ನ ಅವತಾರದಿಂದ, ಪವಿತ್ರ ಕೀರ್ತಿಯಿಂದ ಪಾವನವಾದ ವಂಶದಲ್ಲಿ ಜನ್ಮ ತಾಳಿ, ಎಲ್ಲಾ ರಘುಕುಲದಲ್ಲಿ ಬಂದ ರಾಜರೂ ರಾಜನಾಗಿ ಮೆರೆಯಲು ರಾಮಚಂದ್ರನ ಅನುಗ್ರಹವೇ ಕಾರಣ ಎಂಬ ಅಭಿಪ್ರಾಯವನ್ನೂ ಈ ಪದವು ಸೂಚಿಸುತ್ತದೆ. ಅರ್ಥಾತ್, ತನ್ನ ಕೀರ್ತಿಯಿಂದ ಪಾವನವಾದ ಕುಲದಲ್ಲಿ ರಾಜನಾಗಿ ಮೆರೆಯಲು, ಶ್ರೀರಾಮಚಂದ್ರ ಕಾರಣ ಅದಕ್ಕೆಂದೇ ಆತ ರಘುನಾಥ ಎನಿಸಿದ್ದಾನೆ.
ನಾಥ – ಯುದ್ಧಕಾಂಡ
ನಾಥ ಶಬ್ದವು ಉಪಕ್ಷಯ (ಅಲ್ಪವಿನಾಶ) ಕರ್ತಾ ಎಂಬ ಅರ್ಥವನ್ನು ನೀಡುತ್ತದೆ. ವಾಸ್ತವಿಕವಾಗಿ ರಾಮನು ಮಾಡಿದ ರಾವಣಸೈನ್ಯದ ಕ್ಷಯ. ಅರ್ಥಾತ್ ವಿನಾಶ ಅಲ್ಪವಲ್ಲ. ಅದು ಮಹತ್ತರವಾದುದು, ಆದರೂ ರಾಮನ ಅಪರಿಮೇಯ ಪರಾಕ್ರಮದ ಎದುರು ಆತನು ಮಾಡಿದ ಈ ರಾಕ್ಷಸರ ಸಂಹಾರ ಆತನಿಗೆ ನಗಣ್ಯ. ಕ್ಷುಲ್ಲಕ. ಅದನ್ನು ಅನಾಯಾಸದಿಂದ ಮಾಡಿದ ರಘುವೀರನನ್ನು ನಾಥ ಶಬ್ದವು ಬಣ್ಣಿಸುವ ಮೂಲಕ ಯುದ್ಧಕಾಂಡದ ಅರ್ಥವನ್ನು ಸೂಚಿಸಿದೆ ಎನ್ನಬಹುದು.
ಸೀತಾಯಾಃ ಪತಿಃ – ಉತ್ತರಕಾಂಡ
ಈ ಶಬ್ದವು ಉತ್ತರಕಾಂಡದ #UttaraKanda ಅರ್ಥವನ್ನು ಹೇಳಿದೆ. ರಾಮನ ಆಳ್ವಿಕೆಯ ಕಾಲದಲ್ಲಿ, ಭೂಮಿಯ ಎಲ್ಲಾ ಭಾಗವು ಸಮೃದ್ಧ ಸಸ್ಯ ಸಂಪತ್ತಿನಿಂದ ಶ್ಯಾಮಲವಾಗಿತ್ತೆಂದು, ಪುರಾಣವು ಸಾರಿದೆ. ಇಂತಹ ಸಸ್ಯಾದಿ ಸಂಪತ್ತಿನ ಒಡೆಯ ಎಂಬ ಅರ್ಥವನ್ನು ಸೀತಾಪತಿ ಎಂಬ ಶಬ್ದವು ಸಾರುತ್ತಿದೆ. ಸಂಸ್ಕೃತದಲ್ಲಿ ಸೀತಾ ಶಬ್ದಕ್ಕೆ ಸಸ್ಯವೆಂದೂ ಅರ್ಥವಿದೆ ತಾನೇ. ಇದಲ್ಲದೇ ಸೀತಾ ಶಬ್ದಕ್ಕೆ ಪರಿಶುದ್ಧಳಾದ ಭೂದೇವಿ ಹಾಗು ನಿರ್ಮಲಳಾದ ಸೀತಾದೇವಿ ಎಂಬ ಅರ್ಥವನ್ನೂ ಸ್ವೀಕರಿಸಬಹುದು. ಸಂಸ್ಕೃತದಲ್ಲಿ ಸಿತ ಶಬ್ದವು ಶ್ವೇತ ಎಂಬ ಅರ್ಥವನ್ನು ಕೊಡುತ್ತದೆ. ಇಲ್ಲಿ ಸೀತಾ ಎಂಬಲ್ಲಿ ದೈರ್ಘ್ಯವು ಆಧಿಕ್ಯವನ್ನು ಸೂಚನೆ ಮಾಡುತ್ತದೆ. ಹೀಗಾಗಿ ಸೀತಾ ಎಂಬ ಶಬ್ದವು ಅಧಿಕಶ್ವೇತಳು ಎಂಬ ಅರ್ಥವನ್ನು ನೀಡುತ್ತದೆ. ಇಲ್ಲಿ ಅಧಿಕಶ್ವೇತಳೆಂದರೆ, ಅಧಿಕಶುದ್ಧಳು ಎಂಬ ಅರ್ಥದಲ್ಲಿ ಪರ್ಯವಸಾನಗೊಳ್ಳುತ್ತದೆ. ಹಾಗಾಗಿ ಸೀತಾ ಶಬ್ದಕ್ಕೆ ಪರಿಶುದ್ಧಳಾದ ಭೂದೇವಿ ಮತ್ತು ನಿರ್ಮಲಳಾದ ಸೀತಾದೇವಿ ಎಂಬ ಅರ್ಥವನ್ನೂ ಸ್ವೀಕರಿಸಬಹುದು. ಇವೆರಡು ದೇವಿಯರಿಗೆ ಪತಿಯಾಗಿ ರಾಮ ಸೀತಾಪತಿ ಎನಿಸಿದ್ದಾನೆ.

ಹೀಗಾಗಿ ಅಧ್ಯಾತ್ಮ ದೃಷ್ಟಿಯಿಂದ ಈ ದಂಪತಿಗಳಿಗೆ, ದೈಹಿಕವಿಯೋಗವಿಲ್ಲವೇ ಇಲ್ಲ. ಪಾಮರದೃಷ್ಟಿಯಲ್ಲಿ ದೈಹಿಕವಿಯೋಗ ಕಾಣಿಸಿಕೊಂಡರೂ, ಮಾನಸಿಕ ಸ್ನೇಹದ ವಿಯೋಗವಾಗಲೇ ಇಲ್ಲ ಅದು ಅಜರಾಮರವಾಗಿಯೇ ಇತ್ತು. ಅದಕ್ಕೆಂದೇ ಸೀತಾರಾಮರು ಆದರ್ಶ ಸತಿಪತಿಗಳು. ಲೋಕದ ತಂದೆ ತಾಯಿಗಳಾದ ಈ ಸೀತಾರಾಮರ ನಿಜದರ್ಶನವನ್ನು ಈ ಮಂತ್ರತುಲ್ಯದ ಪದ್ಯದಲ್ಲಿ, ನಿತ್ಯವೂ ಮಾಡುತ್ತಾ, ಅದನ್ನು ಪಠಿಸಿ, ಅವರಿಗೆ ನಮಿಸಿ ಕೃತಾರ್ಥರಾಗೋಣ. ಅಯೋಧ್ಯಾಧಾಮನಾದ ಬಾಲರಾಮಚಂದ್ರನು ತನ್ನ ಸುಂದರ ಕೀರ್ತಿರೂಪ ಚಂದ್ರನ ಬೆಳದಿಂಗಳನ್ನು ನಮ್ಮೆಲ್ಲರ ಮನಸ್ಸೆಂಬ ನೈದಿಲೆಯ ಮೇಲೆ ಬೀರಿ, ವಿಕಾಸಗೊಳಿಸಲೆಂದು ಹಾರೈಸೋಣ.
ಅಯೋಧ್ಯಾಯಾಂ ರಾಮಜ್ಯೋತಿರ್ದೀಪ್ತಂ ದೃಷ್ಟ್ವಾ ಶುಭಾವಹಂ || ಕೃತ್ವಾ ರಾಷ್ಟ್ರಂ ನಂದಿಘೋಷಂ ಜಯತಾತ್ ಸುಪಥಾ ಸದಾ ||
ರಾಮಚಂದ್ರ ಕೀ ಜೈ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post