ಭದ್ರಾವತಿ: ನಗರದ ವಿಐಎಸ್‍ಎಲ್ ಕಾರ್ಖಾನೆಯನ್ನು ಸಾರ್ವಜನಿಕ ಉದ್ದಿಮೆಯಲ್ಲಿ ಉಳಿಸಲು ಸಂಸದ ಬಿ.ವೈ.ರಾಘವೇಂದ್ರ ಹಾಗು ರಾಜ್ಯದ ಮುಖ್ಯಮಂತ್ರಿ ಬಿ,ಎಸ್.ಯಡಿಯೂರಪ್ಪ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಬೇಕೆಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ವಿಐಎಸ್‍ಎಲ್ ಕಾರ್ಖಾನೆ ಎದುರು ಕಾರ್ಮಿಕರು ಹಮ್ಮಿಕೊಂಡಿರುವ 43 ನೇ ದಿನದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಚುನಾವಣಾ ಸಂದರ್ಭದಲ್ಲಿ ಸುಳ್ಳು ಆಶ್ವಾಸನೆಗಳನ್ನು ನೀಡಿ ಕಾರ್ಮಿಕರ ಮತ ಪಡೆದ ಸಂಸದರು ಗೆದ್ದ ನಂತರ ಯಾವುದೇ ಪ್ರಯತ್ನ ಮಾಡದಿರುವುದು ದುರಂತ. ರಾಜ್ಯ ಹಾಗು ಕೇಂದ್ರದಲ್ಲಿ ಬಿಜೆಪಿ ಸರಕಾರಗಳಿರುವುದರಿಂದ ಕಾರ್ಖಾನೆಯ ಸ್ಥಿತಿಯನ್ನು ಪ್ರಧಾನಿ ಮೋದಿರವರಿಗೆ ಮನವರಿಕೆ ಮಾಡಿ ವಸ್ತು ಸ್ಥಿತಿ ತಿಳಿಸಿ ಕನಿಷ್ಟ ಒಂದು ಸಾವಿರ ಕೋಟಿ ರೂ ಬಂಡವಾಳ ತೊಡಗಿಸಲು ಮುಂದಾಗಿ ಸರಕಾರಿ ಸಾಮ್ಯದಲ್ಲಿ ಉಳಿಸುವ ಪ್ರಯತ್ನ ಮಾಡಲಿ ಎಂದರು.
ಕಾರ್ಖಾನೆ ದುಸ್ಥಿತಿಗೆ ಭ್ರಷ್ಟರಾಜಕಾರಣಿಗಳು ಹಾಗು ಆಡಳಿತ ಮಂಡಳಿಯೆ ಕಾರಣವಾಗಿದೆ. ಇದಕ್ಕೆ ಉದಾಹರಣ ಎಂದರೆ ಸ್ವಾತಂತ್ರ್ಯ ದಿನವಾದ ಆ: 15 ರಂದು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅಪಮಾನ ಮಾಡಿರುವ ಆಡಳಿತ ಮಂಡಳಿಯೆ ಸಾಕ್ಷಿಯಾಗಿದೆ. ಆ: 25 ರೊಳಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಾರ್ಖಾನೆ ಉಳಿವಿಗೆ ಪ್ರಯತ್ನ ಮಾಡಲಾಗುವುದು. ಅಲ್ಲದೆ ಸೆ: 1 ರ ನಂತರ ವಿವಿಧ ಸಂಘ ಸಂಸ್ಥೆಗಳ, ರಾಜಕೀಯ ಪಕ್ಷಗಳ ಸಹಕಾರದಲ್ಲಿ ಮುಂದಿನ ಹೋರಾಟ ಉಗ್ರರೂಪಕ್ಕೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿ ಆ: 18 ರಂದು ಭಾನುವಾರ ಬೆಳಿಗ್ಗೆ ನಾನಾ ಧರ್ಮಗುರುಗಳ ಸಮ್ಮುಖದಲ್ಲಿ ತುಂಬಿದ ಭದ್ರೆಗೆ ಬಾಗೀನಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಟಿ.ಚಂದ್ರೇಗೌಡ ಮಾತನಾಡಿ ದೇಶದಲ್ಲಿನ 22 ಕಾರ್ಖಾನೆಗಳನ್ನು ಮಾರಾಟ ಮಾಡಿ ಸರಕಾರ ನಡೆಸುವ ಪ್ರಯತ್ನಕ್ಕೆ ಕೇಂದ್ರ ಸರಕಾರ ಮುಂದಾಗಿರುವುದು ವಿಷಾಧನೀಯ. ದೇಶದಲ್ಲಿ ಕೇವಲ ಬಂಡವಾಳ ಶಾಹಿಗಳಿಗೆ ಮಾತ್ರ ಸಾಲ ಮನ್ನ ಮಾಡಿದ್ದಾರೆ. ಬಡ ಮತ್ತು ಸಣ್ಣ ರೈತ ಮತ್ತಿತರರಿಗೆ ಯಾವುದೇ ಸಾಲ ಮನ್ನ ಮಾಡಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅವಧಿಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ರವರಿಗೆ ಅಧಿಕಾರ ವಿಲ್ಲದಿದ್ದರೂ ಸಹ ಎಂಪಿಎಂ ಕಾರ್ಖಾನೆಯ ಕಾರ್ಮಿಕರಿಗೆ 404 ಕೋಟಿ ರೂಗಳನ್ನು ಕೊಡಿಸಿದ್ದರು. ಅಲ್ಲದೆ ವಿಐಎಸ್‍ಎಲ್ ಕಾರ್ಖಾನೆಗೆ 150 ಹೆಕ್ಟೇರ್ ಅದಿರುಗಣಿ ಕೊಡಿಸಿದ್ದರು. ಇಂದು ಅಧಿಕಾರ ವಿದ್ದರೂ ಆಡಳಿತ ಬಿಜೆಪಿ ಸರಕಾರವಿರುವುದರಿಂದ ಹೋರಾಟ ನಡೆಸಿ ಕಾರ್ಖಾನೆ ಉಳಿವಿಗೆ ಪ್ರಯತ್ನ ಮಾಡಲಿದ್ದಾರೆಂದರು.
ಕಾಂಗ್ರೆಸ್ ಮುಖಂಡ ಬಿ.ಟಿ.ನಾಗರಾಜ್ ಮಾತನಾಡಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಆಶಾ ಶ್ರೀಧರ್ ಮುಖಂಡರಾದ ಹನುಮಂತಯ್ಯ, ಲೋಕೇಶ್, ಶ್ರೀಧರ್, ವಿಐಎಸ್‍ಎಲ್ ಕಾರ್ಖಾನೆಯ ಕಾರ್ಮಿಕ ಸಂಘದ ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post