ಮಂಡ್ಯ: ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪುತ್ರನನ್ನು ಕಣಕ್ಕಿಳಿಸಿ, ಪ್ರತಿಷ್ಠೆಯನ್ನಾಗಿ ಸ್ವೀಕರಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಪರವಾಗಿ ಪ್ರಚಾರ ಮಾಡಲು ಮಾಜಿ ಸಂಸದ ಜಿ. ಮಾದೇಗೌಡ ಹಣದ ಬೇಡಿಕೆ ಇಟ್ಟಿರುವ ಆಡಿಯೋ ಬಹಿರಂಗಗೊಂಡಿದ್ದು, ಭಾರೀ ಸಂಚಲನ ಸೃಷ್ಠಿಸಿದೆ.
ಈ ಕುರಿತಂತೆ ಜಿ. ಮಾದೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಅವರು ನಡೆಸಿರುವ ಮೊಬೈಲ್ ಸಂಭಾಷಣೆಯ ಆಡಿಯೋ ಬಹಿರಂಗಗೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಆದರೆ, ಈ ವಿಚಾರವನ್ನು ಸ್ವತಃ ಸಮರ್ಥಿಸಿಕೊಂಡು ಖಾಸಗಿ ವಿದ್ಯುನ್ಮಾನ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮಾದೇಗೌಡ, ಪ್ರಚಾರಕ್ಕೆ ತೆರಳಲು ಹುಡುಗರು ಹಣ ಕೇಳುತ್ತಾರೆ. ನನ್ನ ಬಳಿ ಹಣ ಇಲ್ಲ. ಹಣಕ್ಕೆ ವ್ಯವಸ್ಥೆ ಮಾಡಿ ಎಂದು ಮಾದೇಗೌಡರೇ ನೇರವಾಗಿಯೇ ಸಚಿವ ಪುಟ್ಟರಾಜು ಅವರನ್ನು ಕೇಳಿದ್ದಾರೆ. ಅಲ್ಲದೆ ಹಣದ ಬೇಡಿಕೆ ಇಟ್ಟಿದ್ದನ್ನು ಟಿವಿ ಮಾಧ್ಯಮಗಳ ಮುಂದೆ ಸಮರ್ಥಿಸಿಕೊಂಡಿದ್ದು, ಈಗ ಹಣ ಇಲ್ಲದೆ ಚುನಾವಣೆಗೆ ಹೋಗುವವರು ದೇಶದಲ್ಲಿ ಯಾರಿದ್ದಾರೆ ನೀವೇ ತಿಳಿಸಿ ಎಂದಿದ್ದಾರೆ.
ಇನ್ನು, ಆಡಿಯೋ ಕುರಿತಂತೆ ಪ್ರತಿಕ್ರಿಯೆ ನೀಡಿ ಸಮರ್ಥಿಸಿಕೊಂಡಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ, ಚುನಾವಣಾ ಆಯೋಗ ವಿಧಿಸಿರುವ ನಿಯಮಗಳ ಅನ್ವಯ ಓರ್ವ ಅಭ್ಯರ್ಥಿ 70 ಲಕ್ಷದವರೆಗೂ ಹಣ ಖರ್ಚು ಮಾಡಲು ಅವಕಾಶವಿದೆ. ಹೀಗಿರುವಾಗ ಅವರು ಕೇಳಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದಿದ್ದಾರೆ.
Discussion about this post