ಸಾಗರ(ಮಧ್ಯಪ್ರದೇಶ): ನಿಜಕ್ಕೂ ಇದು ನಾಗರಿಕ ಸಮಾಜ ಪ್ರಾಣಿಗಳನ್ನು ನೋಡಿ ಕಲಿಯಬೇಕಾದ ಪಾಠವೇ ಹೌದು.. ನೀಯತ್ತಿಗೆ ಇನ್ನೊಂದು ಹೆಸರು ನಾಯಿ ಎನ್ನುತ್ತಾರೆ. ಇದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.
ಹೌದು… ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯೊಬ್ಬಳ ಮೇಲೆ ಇಬ್ಬರು ದುರುಳರು ಅತ್ಯಾಚಾರ ಎಸಗಲು ಯತ್ನಿಸಿದ್ದಾರೆ. ಈ ವೇಳೆ ಬಾಲಕಿ ಸಾಕಿದ ನಾಯಿ ಸಿಟ್ಟಿನಿಂದ ಇಬ್ಬರೂ ಅತ್ಯಾಚಾರಿಗಳ ಮೇಲೆ ಮುಗಿಬಿದ್ದು ಕಿಚ್ಚಿ, ಆಕೆಯನ್ನು ರಕ್ಷಿಸಿದ ಘಟನೆ ನಡೆದಿದೆ.
ಕಳೆದ ಶುಕ್ರವಾರ ಈ ಘಟನೆ ನಡೆದಿದ್ದು ನಿನ್ನೆ ರಾತ್ರಿ ಬೆಳಕಿಗೆ ಬಂದಿದೆ. ಸಾಗರ ಜಿಲ್ಲೆ ಕರೀಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿದು ತತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.
ರಾತ್ರಿ ವೇಳೆ ಮನೆಯಲ್ಲಿ ಸೊಳ್ಳೆ ಹೆಚ್ಚಾಗಿದೆ ಎಂದು ಮನೆಯಲ್ಲಿ ಹೊಗೆ ಹಾಕಲು ಉರುವಲು ತರಲು ತೆರಳಿದ ವೇಳೆ ಐಶು ಐವಾರ್(39) ಹಾಗೂ ಪುನೀತ್ ಐವಾರ್(24) ಎಂಬ ಆರೋಪಿಗಳು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು, ಚಾಕು ತೋರಿಸಿ, ಅತ್ಯಾಚಾರ ಎಸಗಲು ಯತ್ನಿಸಿದ್ದಾರೆ.
ಈ ವೇಳೆ ಸಹಾಯಕ್ಕಾಗಿ ಬಾಲಕಿ ಜೋರಾಗಿ ಕೂಗಿಕೊಂಡಿದ್ದಾಳೆ. ತತಕ್ಷಣ ಆಕೆ ಸಾಕಿದ್ದ ನಾಯಿ ಓಡಿ ಬಂದು ಅತ್ಯಾಚಾರಿಗಳ ಮೇಲೆ ಎಗರಿದೆ. ಐಶು ಐವಾರ್ ನಾಯಿಯ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಆದರೆ, ಇದರಿಂದ ಹಿಂದೆ ಸರಿಯದ ನಾಯಿ ದಾಳಿ ನಡೆಸಿದೆ.
ಈ ವೇಳೆ ತನ್ನ ಬಟ್ಟೆಗಳನ್ನು ಸುತ್ತಿಕೊಂಡ ಬಾಲಕಿ ಮನೆಯೆಡೆಗೆ ಕೂಗುತ್ತಾ ಓಡಿದ್ದಾಳೆ. ಬಾಲಕಿಯ ಕಿರುಚಾಟ ಹಾಗೂ ನಾಯಿಯ ನಿರಂತರ ಬೊಗಳುವಿಕೆ ಕೇಳಿ ಅಕ್ಕಪಕ್ಕದ ನೂರಾರು ಮಂದಿ ಧಾವಿಸಿ ಬಂದಿದ್ದಾರೆ.
ಬಾಲಕಿಯ ಕುಟುಂಬಸ್ಥರು ದೂರು ದಾಖಲಿಸಿದ್ದು, ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿ, ಪೋಕ್ಸೋ ಕಾಯ್ದೆಯಡಿ ಹಾಗೂ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Discussion about this post