ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು(ನಬಾರ್ಡ್) ವತಿಯಿಂದ 2023-24 ನೇ ಸಾಲಿಗೆ 6960.73 ಕೋಟಿ ರೂ. ಸಾಮರ್ಥ್ಯ ಆಧಾರಿತ ಸಾಲ ಯೋಜನೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಅವರು ಬಿಡುಗಡೆ ಮಾಡಿದರು.
ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಸಾಮರ್ಥ್ಯ ಆಧಾರಿತ ಸಾಲ ಯೋಜನೆ ಬಿಡುಗಡೆ, ಜೊತೆಗೆ ಬ್ಯಾಂಕುಗಳ ತ್ರೈಮಾಸಿಕ ಪ್ರಗತಿ ಸಭೆ ನಡೆಸಿದರು.
ಕೃಷಿಗೆ 4561.82 ಕೋಟಿ ರೂ., ಕೃಷಿ ಸಂಬಂಧಿಸಿದ ಮೂಲ ಸೌಲಭ್ಯಕ್ಕೆ 177.11 ಕೋಟಿ ರೂ., ಇತರೆ ಚಟುವಟಿಕೆಗೆ 204.45 ಕೋಟಿ ರೂ., ಮಧ್ಯಮ ಸಣ್ಣ ಕೈಗಾರಿಕಾ ಬೆಳವಣಿಗೆಗೆ 773.50 ಕೋಟಿ ರೂ., ರಫ್ತು ವಿನಿಮಯ ಕ್ಷೇತ್ರಕ್ಕೆ 409.60 ಕೋಟಿ, ಶಿಕ್ಷಣಕ್ಕೆ 121.50 ಕೋಟಿ ರೂ., ವಸತಿಗೆ 676.80 ಕೋಟಿ ರೂ., ಪರ್ಯಾಯ ಇಂಧನ ಬಳಕೆಗೆ 8.23 ಕೋಟಿ ರೂ., ಹಾಗೆಯೇ ಮೂಲ ಸೌಕರ್ಯಕ್ಕೆ 27.70 ಕೋಟಿ ರೂ. ಒಟ್ಟು 6960.73 ಕೋಟಿ ರೂ. ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಬಿಡುಗಡೆ ಮಾಡಿದರು.
ಮುಂದಿನ (2023-24) ಸಾಲಿಗೆ ಆದ್ಯತಾ ಕ್ಷೇತ್ರಗಳಾದ ಕೃಷಿ, ಸಣ್ಣ ಉದ್ಯಮ, ಶಿಕ್ಷಣ, ವಸತಿ ಮತ್ತಿತರ ಮೂಲ ಸೌಲಭ್ಯ ಸೇರಿದಂತೆ ಹಲವು ಕ್ಷೇತ್ರಕ್ಕೆ ಸಾಮರ್ಥ್ಯ ಆಧಾರಿತ ಸಾಲ ಯೋಜನೆ ನೀಡಲಾಗಿದ್ದು, ಇವುಗಳನ್ನು ಅರ್ಹರಿಗೆ ತಲುಪಿಸಲಾಗುತ್ತದೆ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕರಾದ ವಿ.ರಮೇಶ್ ಬಾಬು ಅವರು ತಿಳಿಸಿದರು.
ಕೃಷಿ, ಪಶುಪಾಲನೆ, ಮೀನುಗಾರಿಕೆ, ತೋಟಗಾರಿಕೆ, ಸಣ್ಣ ಕೈಗಾರಿಕೆ ಮತ್ತು ಉದ್ಯಮಕ್ಕೆ ಹೆಚ್ಚಿನ ಅವಕಾಶವನ್ನು ನೀಡಲಾಗಿದೆ. ಕೃಷಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೃಷಿ ಮಾರುಕಟ್ಟೆ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ ಎಂದರು.
ಪ್ರಧಾನಮಂತ್ರಿ ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ ಹೆಚ್ಚಿನ ಸಾಲ ಸೌಲಭ್ಯ ದೊರೆಯಲಿದೆ. ಆತ್ಮನಿರ್ಭರ ಭಾರತ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ರಮೇಶ್ ಬಾಬು ಅವರು ತಿಳಿಸಿದರು.
Also read: ಕಾಂಗ್ರೆಸ್ ಮನೆಗೆ ಬಾಗಿಲು, ಕಿಟಕಿ ಏನಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ
ಭಾರತೀಯ ರಿಸರ್ವ್ ಬ್ಯಾಂಕಿನ ಜೀವಿಕಾ ಅವರು ವರ್ಚುವಲ್ ಮೂಲಕ ಮಾಹಿತಿ ನೀಡಿ ಬ್ಯಾಂಕುಗಳು ಕೃಷಿಕರಿಗೆ ಒಳಿತು ಮಾಡುವಲ್ಲಿ ಶ್ರಮಿಸಬೇಕು ಎಂದರು.
ಯೂನಿಯನ್ ಬ್ಯಾಂಕ್‍ನ ಪ್ರಾದೇಶಿಕ ವ್ಯವಸ್ಥಾಪಕರಾದ ಅನಂತ್ ಕೆ.ಎಸ್. ಅವರು ಮಾತನಾಡಿ ಸರ್ಕಾರ ರೈತರಿಗೆ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸಿದೆ ಎಂದರು.
ಜಿಲ್ಲಾ ಅಗ್ರಣಿ ಬ್ಯಾಂಕಿನ ವ್ಯವಸ್ಥಾಪಕರಾದ ಶಿವಕುಮಾರ್ ಅವರು ಸಾಮಥ್ರ್ಯ ಆಧಾರಿತ ಸಾಲ ಯೋಜನೆಯು ಜಿಲ್ಲಾ ಆರ್ಥಿಕ ಬೆಳವಣಿಗೆಯ ಮುನ್ನೋಟವಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕುಗಳ ಮುಖ್ಯಸ್ಥರು, ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post